'ಮನೆ ಕಟ್ಬೇಕು, ಅಪ್ಪ ಆಗ್ಬೇಕು.. 50 ವರ್ಷ ಜೊತೆಯಾಗಿ ಬದುಕಬೇಕು..' ನನ್ನ ಗಂಡನಿಗೆ ಇದೇ ಕನಸಾಗಿತ್ತು!
Wife Of Captain Anshuman Singh Smriti Singh Shares husband Life ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನ ಆರ್ಮಿ ಬಂಕರ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಆರ್ಮಿ ವೈದ್ಯರಾಗಿದ್ದ 26 ವರ್ಷದ ಕ್ಯಾಪ್ಟನ್ ಅನ್ಶುಮನ್ ಸಿಂಗ್ ವೀರ ಮರಣ ಕಂಡಿದ್ದರು. ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಕೀರ್ತಿಚಕ್ರ ಸ್ವೀಕರಿಸಿದ ಅವರ ಪತ್ನಿ ಸ್ಮೃತಿ ಸಿಂಗ್ ತಮ್ಮ ಗಂಡನ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ಬೆಂಗಳೂರು (ಜು.6): 'ನಮ್ಮಿಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿಯಾಗಿತ್ತು. ಆತನಿಗೆ ತುಂಬಾ ದೊಡ್ಡ ಕನಸುಗಳೇ ಇರ್ಲಿಲ್ಲ. ಮನೆ ಕಟ್ಬೇಕು, 50 ವರ್ಷ ಜೊತೆಯಾಗಿ ಬದುಕಬೇಕು.. ಎಲ್ಲಕ್ಕಿಂತ ಮುಂಚೆ ಅಪ್ಪನಾಗಬೇಕು.. ಅನ್ನೋ ಸಣ್ಣ ಸಣ್ಣ ಆಸೆಗಳಷ್ಟೇ ಇದ್ದವು. ಆದರೆ, ದೇವರು ಇದ್ಯಾವುದಕ್ಕೂ ಅವಕಾಶ ನೀಡಲಿಲ್ಲ. ಮದುವೆಯಾಗಿ ಗಂಡ ನನ್ನ ಜೊತೆಗೆ ಇದ್ದಿದ್ದೇ ಎರಡು ತಿಂಗಳು ಮಾತ್ರ..' ಈ ಮಾತುಗಳನ್ನು ಹೇಳುವಾಗ ಕ್ಯಾಪ್ಟನ್ ಅನ್ಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಅವರ ಗಂಟಲು ಗದ್ಗದಿತವಾಗಿತ್ತು ಬಹುಶಃ ಆಕೆ ಇನ್ನೊಂದು ಮಾತು ಆಡುತ್ತಿದ್ದರೆ, ಖಂಡಿತವಾಗಿ ಆಕೆಯ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನ ಆರ್ಮಿ ಬಂಕರ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಆರ್ಮಿ ವೈದ್ಯರಾಗಿದ್ದ 26 ವರ್ಷದ ಕ್ಯಾಪ್ಟನ್ ಅನ್ಶುಮನ್ ಸಿಂಗ್ ವೀರ ಮರಣ ಕಂಡಿದ್ದರು. ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಕೀರ್ತಿಚಕ್ರ ಸ್ವೀಕರಿಸಿದ ಅವರ ಪತ್ನಿ ಸ್ಮೃತಿ ಸಿಂಗ್ ತಮ್ಮ ಗಂಡನ ಬಗ್ಗೆ ರಕ್ಷಣಾ ಇಲಾಖೆಯ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಶುಕ್ರವಾರ ಮೃತ ಗಂಡನ ಪರವಾಗಿ ಕೀರ್ತಿ ಚಕ್ರ ಸ್ವೀಕರಿಸಿದ ಸ್ಮೃತಿ ಸಿಂಗ್‌ರನ್ನು ಕಂಡು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಕೂಡ ಅಚ್ಚರಿ ಪಟ್ಟಿದ್ದರು. ಪುಟ್ಟ ವಯಸ್ಸಿನಲ್ಲೇ ವಿಧವೆಯಾಗಿದ್ದರ ಬಗ್ಗೆ ಅವರಲ್ಲಿ ಮರುಕ ವ್ಯಕ್ತವಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ತಮ್ಮ ಕಟ್ಟಳೆಗಳನ್ನು ಮೀರಿ ಈಕೆಗೆ ಸಂತೈಸಿದ್ದು ಕಂಡು ಬಂದಿತು.
ರಕ್ಷಣಾ ಇಲಾಖೆಯ ಚಾನೆಲ್‌ಗೆ ಸ್ಮೃತಿ ಸಿಂಗ್ ಮಾತನಾಡಿದ ವಿವರ ಇಲ್ಲಿದೆ. 'ಅವರು ಯಾವಾಗ್ಲೂ ಹೇಳ್ತಿದ್ದರು. ನಾನು ಸಾಯುವಾಗ ನನ್ನ ಎದೆಯ ಮೇಲೆ ಕಂಚಿನ ಪದಕ ಇರುತ್ತೆ ಅಂತಾ ಹೇಳ್ತಿದ್ದರು. ನಾನು ಸಾಮಾನ್ಯವಾಗಿ ಸಾಯೋದೇ ಇಲ್ಲ. ಅಂಥಾ ಆಸೆಯೂ ನನಗಿಲ್ಲ. ನಾನು ಸತ್ತರೆ ಅದು ಸುದ್ದಿಯಾಗಬೇಕು ಅಂತಾ ಹೇಳಿದ್ದರು. ಕೊನೆಗೆ ಅದೇ ರೀತಿಯಲ್ಲಿ ಆಯಿತು ಎಂದು ಹೇಳಿದ್ದಾರೆ.
'ಕಾಲೇಜಿನ ಮೊದಲ ದಿನವೇ ನಾವಿಬ್ಬರೂ ಭೇಟಿಯಾಗಿದ್ದೆವು. ನಾಟಕೀಯವಾಗಿ ನಮ್ಮ ಭೇಟಿಯೇನೂ ಆಗಿರಲಿಲ್ಲ. ಆದರೆ, ನನಗೆ ಅವರ ಮೇಲೆ ಲವ್ ಎಟ್ ಫಸ್ಟ್ ಸೈಟ್ ಅಂತೂ ಆಗಿತ್ತು. ಆದರೆ, ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಒಂದೇ ತಿಂಗಳಿಗೆ ಅವರಿಗೆ ಆರ್ಮ್‌ಡ್ ಫೋರ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿತು. ನಾವಿಬ್ಬರೂ ಮೊದಲು ಭೇಟಿಯಾಗಿದ್ದು ಇಂಜಿನಿಯರಿಂಗ್ ಕಾಲೇಜಿನಲ್ಲಿ. ಆದರೆ, ಅವರಿಗೆ ಮೆಡಿಕಲ್ ಕಾಲೇಜಿನಲ್ಲೂ ಸೀಟ್ ಸಿಕ್ಕಿತ್ತು. ತುಂಬಾ ಇಂಟಲಿಜಂಟ್ ಹುಡ್ಗ ಆಗಿದ್ದ. ಒಂದು ತಿಂಗಳು ನಾವು ಜೊತೆಯಲ್ಲಿದ್ದ ಬಳಿಕ, ನಮ್ಮದು ದೂರ ಅಂತರದ ಪ್ರೀತಿಯಾಗಿ ಬದಲಾಯಿತು. ಎಂಟು ವರ್ಷಗಳ ಕಾಲ ನಾವು ಹೀಗೆಯೇ ಇದ್ದೆವು ಎಂದು ಸ್ಮೃತಿ ಹೇಳಿದ್ದಾರೆ.
ಪುಟ್ಟ ವಯಸ್ಸಿನ ವಿಧವೆಗೆ ಕೀರ್ತಿ ಚಕ್ರ ನೀಡಿ ಸಂತೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!
ಸೇನೆಗೆ ಸೇರಿಕೊಂಡ ಬಳಿಕ 'ನಾವೀಗ ಮದುವೆಯಾಗೋಣ..' ಎಂದು ಅವರು ಕೇಳಿದ್ದರು. ಮರು ಮಾತನಾಡದೇ ನಾನು ಒಪ್ಪಿಕೊಂಡಿದ್ದೆ. ಆದರೆ, ದುರಾದೃಷ್ಟವಶಾತ್ ಮದುವೆಯಾದ ಎರಡೇ ತಿಂಗಳಿಗೆ ಅವರಿಗೆ ಸಿಯಾಚಿನ್‌ನಲ್ಲಿ ಪೋಸ್ಟಿಂಗ್ ಆಯಿತು. ಜುಲೈ 18ಕ್ಕೆ ನಾವಿಬ್ಬರೂ ತುಂಬಾ ದೀರ್ಘ ಸಮಯ ಫೋನ್‌ನಲ್ಲಿ ಮಾತನಾಡಿದ್ದೆವು. ಈ ವೇಳೆ ನಾವು ನಮ್ಮ ಮುಂದಿನ 50 ವರ್ಷದ ಜೀವನ ಹೇಗಿರಬೇಕು ಎಂದು ಮಾತನಾಡಿಕೊಂಡೆವು. ಒಂದು ಮನೆ ಕಟ್ಟಬೇಕು.. ಮಕ್ಕಳು ಮಾಡಿಕೊಳ್ಳಬೇಕು.. ಆ ದಿನ ಏನು ಮಾತನಾಡಿದೆವೂ.. ಇಲ್ಲವೋ ಎನ್ನುವುದೇ ನನಗೆ ಗೊತ್ತಿಲ್ಲ. ಜುಲೈ 19ರ ಬೆಳಗ್ಗೆ ನಾನು ಎದ್ದ ಬೆನ್ನಲ್ಲಿಯೇ ಸೇನೆಯಿಂದ ಕರೆ ಬಂದಿತು. ಅನ್ಶುಮನ್ ಇನ್ನಿಲ್ಲ ಎಂದು ಅವರು ತಿಳಿಸಿದ್ದರು.
ಕರ್ನಾಟಕದ ಪ್ರಾಂಜಲ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ: ಒಟ್ಟು 80 ಮಂದಿಗೆ ಶೌರ್ಯ ಪದಕ
ಮೊದಲಿಗೆ 7-8 ಗಂಟೆಗಳ ಕಾಲ ನಾವು ಈ ಸುದ್ದಿಯನ್ನ ಒಪ್ಪಿಕೊಳ್ಳೋಕೇ ಸಿದ್ದವಿರಲಿಲ್ಲ. ಏನಾಗಿದೆ ಅನ್ನೋದೇ ನಮಗೆ ಗೊತ್ತಿರಲಿಲ್ಲ. ಆದರೆ, 7-8 ಗಂಟೆಗಳ ಬಳಿಕ ಅನ್ಶುಮನ್ ಸಾವಿನ ಸುದ್ದಿ ಖಚಿತವಾಗಿತ್ತು. ಇಂದಿಗೂ ಕೂಡ ಅವರು ಇಲ್ಲ ಅನ್ನೋ ಸುದ್ದಿಯನ್ನ ನನಗೆ ನಂಬೋಕೆ ಸಾಧ್ಯವಾಗ್ತಿಲ್ಲ. ಈಗಲೂ ಆ ಸುದ್ದಿ ಸುಳ್ಳೇ ಆಗಿರಲಿ ಎಂದುಕೊಳ್ಳುತ್ತಿದ್ದೇನೆ. ಆದರೆ, ಈಗ ಕೀರ್ತಿ ಚಕ್ರ ನನ್ನ ಕೈಯಲ್ಲಿದೆ, ಅವರು ನನ್ನ ಬದುಕಲ್ಲಿ ಇಲ್ಲ ಎನ್ನುವ ಸತ್ಯ ಅರಿವಾಗಿದೆ. ಆದರೆ, ತೊಂದರೆ ಇಲ್ಲ ಅವರು ನನಗೆ ಎಂದಿಗೂ ಹೀರೋ. ನನ್ನದೊಂದಿಗೆ ಸಣ್ಣ ಜೀವನನ್ನ ನಾನು ಹೇಗಾದರೂ ನಡೆಸಿಕೊಳ್ಳುತ್ತೇನೆ. ತಮ್ಮ ಇಡೀ ಜೀವನವನ್ನು ಅವರು ದೇಶಕ್ಕಾಗಿ ಹಾಗೂ ತಮ್ಮ ಕುಟುಂಬಕ್ಕಾಗಿ ನೀಡಿದ್ದಾರೆ ಎಂದು ಸ್ಮೃತಿ ಸಿಂಗ್ ಭಾವುಕವಾಗಿ ನುಡಿದಿದ್ದಾರೆ.