ಟೀಂ ಇಂಡಿಯಾ ಬೌಲಿಂಗ್ ಪ್ರದರ್ಶನದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ರಮೀಜ್ ರಾಜಾಭಾರತ ತಂಡವು ಪಾಕಿಸ್ತಾನದ ರೀತಿಯ ಬೌಲಿಂಗ್ ಪಡೆ ಸಜ್ಜುಗೊಳಿಸಿದ ಎಂದ ಪಿಸಿಬಿ ಮಾಜಿ ಅಧ್ಯಕ್ಷಟೀಂ ಇಂಡಿಯಾ ಸ್ಪಿನ್ ವಿಭಾಗ, ಪಾಕ್‌ಗಿಂತ ಉತ್ತಮವಾಗಿದೆ ಎಂದು ಒಪ್ಪಿಕೊಂಡ ರಾಜಾ

ಇಸ್ಲಾಮಾಬಾದ್(ಫೆ.03): ನ್ಯೂಜಿಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿ ಗೆಲುವು ದಾಖಲಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ರಮೀಜ್‌ ರಾಜಾ, ಭಾರತೀಯ ಬೌಲಿಂಗ್ ಪಡೆಯ ಸಾಮರ್ಥ್ಯದ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡವು ಕಳೆದ ಕೆಲ ವರ್ಷಗಳಿಂದವೂ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರಂತಹ ವೇಗಿಗಳು ಎದುರಾಳಿ ತಂಡದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಲೇ ಬಂದಿದ್ದಾರೆ. ಇದೀಗ ಟೀಂ ಇಂಡಿಯಾ ವೇಗಿಗಳು, ನ್ಯೂಜಿಲೆಂಡ್ ಎದುರಿನ ಎರಡನೇ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸುವ ಮೂಲಕ ಗಮನ ಸೆಳೆದಿದ್ದರು. ಅದರಲ್ಲೂ ಅಹಮದಾಬಾದ್‌ನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿನ ಟೀಂ ಇಂಡಿಯಾ ವೇಗಿಗಳ ಪ್ರದರ್ಶನ ಹಲವು ಕ್ರಿಕೆಟ್ ಪಂಡಿತರು ಹುಬ್ಬೇರಿಸುವಂತೆ ಮಾಡಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಶುಭ್‌ಮನ್ ಗಿಲ್ ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 234 ರನ್‌ ಕಲೆಹಾಕಿತು. ಇನ್ನು ಕಠಿಣ ಗುರಿ ಬೆನ್ನತ್ತಿದ ಕಿವೀಸ್‌ ಪಡೆಗೆ ಟೀಂ ಇಂಡಿಯಾ ವೇಗಿಗಳು ಮೇಲಿಂದ ಮೇಲೆ ಪೆಟ್ಟು ನೀಡಿದರು. ಪರಿಣಾಮ ನ್ಯೂಜಿಲೆಂಡ್ ತಂಡವು ಕೇವಲ 66 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 168 ರನ್ ಅಂತರದ ಗೆಲುವು ಸಾಧಿಸುವುದರ ಜತೆಗೆ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತು. ನಾಯಕ ಹಾರ್ದಿಕ್ ಪಾಂಡ್ಯ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದ್ದರು. 

ಈ 3 ಕಾರಣಕ್ಕಾಗಿಯಾದರೂ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಬೌಲಿಂಗ್ ಮಾಡಬಾರದು..!

ಇನ್ನು ಟೀಂ ಇಂಡಿಯಾದ ಬೌಲಿಂಗ್ ಪ್ರದರ್ಶನವನ್ನು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್‌ ರಾಜಾ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ರಮೀಜ್ ರಾಜಾ, ಭಾರತ ತಂಡವು ಪಾಕಿಸ್ತಾನ ಶೈಲಿಯ ಬೌಲಿಂಗ್ ದಾಳಿಯನ್ನು ಸಜ್ಜುಗೊಳಿಸಿದೆ. ಉಮ್ರಾನ್ ಮಲಿಕ್ ಹಾಗೂ ಹ್ಯಾರಿಸ್ ರೌಫ್ ನಡುವೆ ಸಾಮ್ಯತೆಯಿದೆ ಎಂದು ರಾಜಾ ಅಭಿಪ್ರಾಯಪಟ್ಟಿದ್ದಾರೆ.

"ನನಗನಿಸುತ್ತೆ, ಭಾರತ ತಂಡವು, ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಶೈಲಿಯನ್ನು ಅನುಕರಿಸುತ್ತಿದೆ ಎಂದು. ಉಮ್ರಾನ್ ಮಲಿಕ್ ಅವರ ವೇಗವು ಹ್ಯಾರಿಸ್ ರೌಫ್ ಅವರನ್ನು ಹೋಲುತ್ತದೆ. ಆರ್ಶದೀಪ್ ಅವರ ಎಡಗೈ ಬೌಲಿಂಗ್ ಶೈಲಿ ಶಾಹೀನ್ ಅಫ್ರಿದಿಯನ್ನು ಅನುಕರಿಸಿದಂತಿದೆ. ವಾಸೀಂ ಜೂನಿಯರ್ ಅವರಂತೆ ಹಾರ್ದಿಕ್ ಪಾಂಡ್ಯ, ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಕಬಳಿಸುತ್ತಿದ್ದಾರೆ. ಇಬ್ಬರಲ್ಲೂ ಒಂದೇ ರೀತಿಯ ವೇಗದ ಸಾಮರ್ಥ್ಯವಿದೆ. ಇನ್ನು ಶಿವಂ ಮಾವಿ ಕೂಡಾ ಸಹಾಯಕ ಬೌಲರ್ ಪಾತ್ರ ನಿಭಾಯಿಸುತ್ತಿದ್ದಾರೆ" ಎಂದು ರಮೀಜ್ ರಾಜಾ ಹೇಳಿದ್ದಾರೆ.

ಇನ್ನು ಇದೇ ವೇಳೆ ರಮೀಜ್ ರಾಜಾ, ಭಾರತ ಸ್ಪಿನ್ ವಿಭಾಗವು, ಪಾಕಿಸ್ತಾನದ ಸ್ಪಿನ್ ವಿಭಾಗಕ್ಕಿಂತಲೂ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. " ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್‌ಗಳು, ಪಾಕಿಸ್ತಾನದ ಸ್ಪಿನ್ನರ್‌ಗಳಿಗಿಂತ ಕೊಂಚ ಉತ್ತಮವಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗ, ಪಾಕಿಸ್ತಾನದ ಯಾವ ವಿಭಾಗ ಮತ್ತಷ್ಟು ಬಲಿಷ್ಠವಾಗಬೇಕು ಎನ್ನುವುದರ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿರುತ್ತೇನೆ" ಎಂದು ರಾಜಾ ಮಾತು ಮುಗಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ದ್ವಿಪಕ್ಷೀಯ ಸರಣಿಗಳನ್ನಾಡದೇ ಒಂದು ದಶಕವೇ ಕಳೆದಿದೆ. ಉಭಯ ತಂಡಗಳು ಬಹುರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ.