Asianet Suvarna News Asianet Suvarna News

ಸುರೇಶ್ ರೈನಾ ಟೀಂ ಪ್ಲೇಯರ್ ಎಂದು ಗುಣಗಾನ ಮಾಡಿದ ರಾಹುಲ್ ದ್ರಾವಿಡ್

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಸುರೇಶ್ ಅವರನ್ನು ಕೊಂಡಾಡಿದ್ದಾರೆ. ಅಷ್ಟಕ್ಕೂ ದ್ರಾವಿಡ್ ಏನಂದ್ರು ಅನ್ನೋದನ್ನು ನೀವೇ ನೋಡಿ.

Team India Former Captain Rahul Dravid hails Suresh Raina As Team Man
Author
Bengaluru, First Published Aug 19, 2020, 4:48 PM IST

ಬೆಂಗಳೂರು(ಆ.19): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕೆಲವೇ ನಿಮಿಷಗಳಲ್ಲೇ ಮತ್ತೋರ್ವ ಅನುಭವಿ ಆಟಗಾರ ಸುರೇಶ್ ರೈನಾ ಕೂಡಾ ತಮ್ಮ ಒಂದೂವರೆ ದಶಕಗಳ ಕಾಲ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಗುಡ್‌ ಬೈ ಹೇಳಿದರು. ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಉತ್ತರ ಪ್ರದೇಶದ ಎಡಗೈ ಬ್ಯಾಟ್ಸ್‌ಮನ್ ಸಾಧನೆಯನ್ನು ಕೊಂಡಾಡಿದ್ದಾರೆ.

ಅಂಡರ್ 19 ಹಾಗೂ ಭಾರತ 'ಎ' ಪರ ಗಮನಾರ್ಹ ಪ್ರದರ್ಶನ ತೋರುವ ಮೂಲಕ 2000ನೇ ಇಸವಿಯ ಮಧ್ಯಭಾಗದಲ್ಲಿ ಅಂದರೆ 2004-05ರ ವೇಳೆಗೆ ರೈನಾ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರೊಬ್ಬ ಟೀಂ ಪ್ಲೇಯರ್ ಆಗಿದ್ದು, ಕಳೆದೊಂದು ದಶಕಗಳ ಕಾಲ ಟೀಂ ಇಂಡಿಯಾಗೆ ಅತ್ಯುತ್ತಮ ಕಾಣಿಕೆ ನೀಡಿದ್ದಾರೆ ಎಂದು ಬಿಸಿಸಿಐ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಸಾಕಷ್ಟು ಸ್ಮರಣೀಯ ಗೆಲುವುಗಳನ್ನು ದಾಖಲಿಸಿದೆ. ಸಾಕಷ್ಟು ಅವಿಸ್ಮರಣೀಯ ಗೆಲುವಿನ ತಂಡದಲ್ಲಿ ಸುರೇಶ್ ರೈನಾ ಇದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಅದರಲ್ಲೂ ವೈಟ್ ಬಾಲ್‌ ಕ್ರಿಕೆಟ್‌ಗೆ ಸುರೇಶ್ ರೈನಾ ಕೊಡುಗೆ ಅತ್ಯದ್ಭುತ. ಅವರು ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ಆಟಗಾರ. ಬ್ಯಾಟಿಂಗ್ ಮಾತ್ರವಲ್ಲದೇ ಚುರುಕಿನ ಕ್ಷೇತ್ರ ರಕ್ಷಣೆಯ ಮೂಲಕವೂ ತಂಡಕ್ಕೆ ರೈನಾ ಉಪಯುಕ್ತ ಕಾಣಿಕೆ ನೀಡಿದ್ದಾರೆ ಎಂದು ರಾಹುಲ್ ಕೊಂಡಾಡಿದ್ದಾರೆ.

ಧೋನಿ ಬೆನ್ನಲ್ಲೇ ಟೀಂ ಇಂಡಿಯಾಗೆ ಸುರೇಶ್ ರೈನಾ ವಿದಾಯ..!

ರೈನಾ ಕುರಿತಂತೆ ಮತ್ತೊಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಅದೇನೆಂದರೆ ರೈನಾ ಎಲ್ಲಾ ಕ್ಲಿಷ್ಠಕರ ಸವಾಲುಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮಧ್ಯಮ ಹಾಗೂ ಕೆಳಕ್ರಮಾಂಕದಲ್ಲಿ ಟೀಂ ಇಂಡಿಯಾ ಪಾಲಿಗೆ ರೈನಾ ಆಸರೆಯಾಗಿದ್ದರು. ಒಂದು ವೇಳೆ ಅಗ್ರ ಕ್ರಮಾಂಕದಲ್ಲಿ ರೈನಾ ಬ್ಯಾಟಿಂಗ್ ಮಾಡಿದ್ದರೆ ಮತ್ತಷ್ಟು ರನ್ ಬಾರಿಸುತ್ತಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ನಂ.3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ರೈನಾ ಅಸಾಧಾರಣ ಸಾಧನೆ ಮಾಡಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಕಳೆದೊಂದು ದಶಕವನ್ನು ಗಮನಿಸಿದರೆ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ ಎಷ್ಟು ಅದ್ಭುತ ಆಟಗಾರ ಎಂದು ಗೊತ್ತಾಗುತ್ತದೆ. ಆದರೆ ಭಾರತ ತಂಡದ ಪರ ರೈನಾ ಹೆಚ್ಚಾಗಿ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲೇ ಬ್ಯಾಟ್ ಬೀಸಿದ್ದಾರೆ. ಮೈದಾನ ಕ್ಲಿಷ್ಟಕರ ಭಾಗಗಳಲ್ಲಿ ರೈನಾ ಫೀಲ್ಡಿಂಗ್ ಮಾಡಿದ್ದಾರೆ. ಕೆಲವೊಮ್ಮೆ ಉಪಯುಕ್ತ ಬೌಲಿಂಗ್ ಕಾಣಿಕೆಯನ್ನು ನೀಡಿದ್ದಾರೆ. ಅವರೊಬ್ಬ ಟೀಂ ಪ್ಲೇಯರ್. ತಮ್ಮ ಹುರುಪಿನ ಪ್ರದರ್ಶನದ ಮೂಲಕ ಇತರರನ್ನು ಹುರಿದುಂಬಿಸುತ್ತಿದ್ದರು ಎಂದು ರಾಹುಲ್ ದ್ರಾವಿಡ್ ಎಡಗೈ ಬ್ಯಾಟ್ಸ್‌ಮನ್ ರೈನಾ ಅವರನ್ನು ಕೊಂಡಾಡಿದ್ದಾರೆ.

ರಾಹುಲ್ ದ್ರಾವಿಡ್ ಸುರೇಶ್ ರೈನಾ ಬಗ್ಗೆ ಏನೆಲ್ಲಾ ಮಾತನಾಡಿದ್ರು ಅನ್ನೋದನ್ನು ಅವರ ಮಾತುಗಳಲ್ಲೇ ಕೇಳಿ..

 

 

Follow Us:
Download App:
  • android
  • ios