* ಪ್ರತಿಷ್ಠಿತ 2022ರ ವಿಸ್ಡನ್ ಪ್ರಶಸ್ತಿಗೆ ಪಾತ್ರರಾದ ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ* ಬುಮ್ರಾ, ರೋಹಿತ್ ಸೇರಿದಂತೆ ಐವರು ಕ್ರಿಕೆಟಿಗರಿಗೆ ವರ್ಷದ ವಿಸ್ಡನ್ ಪ್ರಶಸ್ತಿ ಗೌರವ* ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್‌ ವಿಶ್ವದ ಶ್ರೇಷ್ಠ ಆಟಗಾರ ಗೌರವ

ಲಂಡನ್‌(ಏ.22): ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ (Jasprit Bumrah) ಸೇರಿದಂತೆ ಐವರು ಕ್ರಿಕೆಟಿಗರು 2022ರ ವಿಸ್ಡನ್‌ ವರ್ಷದ ಕ್ರಿಕೆಟರ್‌ (2022 edition of Wisden Cricketers) ಗೌರವ ಪಡೆದಿದ್ದಾರೆ. ನ್ಯೂಜಿಲೆಂಡ್‌ ಬ್ಯಾಟರ್‌ ಡೆವೋನ್‌ ಕಾನ್‌ವೇ, ಇಂಗ್ಲೆಂಡ್‌ ವೇಗಿ ಓಲಿ ರಾಬಿನ್ಸನ್‌, ದ.ಆಫ್ರಿಕಾ ಮಹಿಳಾ ತಂಡದ ಡೇನ್‌ ವ್ಯಾನ್‌ ನೀಕರ್ಕ್ ಗೌರವಕ್ಕೆ ಪಾತ್ರರಾಗಿರುವ ಇತರ ಮೂರು ಕ್ರಿಕೆಟಿಗರು. ಇಂಗ್ಲೆಂಡ್‌ನ ಜೋ ರೂಟ್‌ ವಿಶ್ವದ ಶ್ರೇಷ್ಠ ಆಟಗಾರ ಎಂದು ಹೆಸರಿಸಲ್ಪಟ್ಟರೆ, ದ.ಆಫ್ರಿಕಾದ ಬ್ಯಾಟರ್‌ ಲಿಜೆಲ್ಲೆ ಲೀ ಶ್ರೇಷ್ಠ ಮಹಿಳಾ ಆಟಗಾರ್ತಿ, ಪಾಕಿಸ್ತಾನದ ಮೊಹಮದ್‌ ರಿಜ್ವಾನ್‌ ವಿಶ್ವದ ಶ್ರೇಷ್ಠ ಟಿ20 ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.

ರೋಹಿತ್‌ 14ನೇ ಬಾರಿ ಡಕೌಟ್‌: ದಾಖಲೆ!

ನವಿ ಮುಂಬೈ: ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಐಪಿಎಲ್‌ (IPL) ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್‌ ಎಂಬ ಅನಗತ್ಯ ದಾಖಲೆ ಬರೆದಿದ್ದಾರೆ. ಗುರುವಾರ ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಅವರು ತಾವೆದುರಿಸಿದ 2ನೇ ಎಸೆತದಲ್ಲಿ ಮುಖೇಶ್‌ ಚೌಧರಿಗೆ ವಿಕೆಟ್‌ ಒಪ್ಪಿಸಿದರು. ರೋಹಿತ್‌ ಐಪಿಎಲ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದು ಇದು 14ನೇ ಬಾರಿ. ಅಜಿಂಕ್ಯಾ ರಹಾನೆ, ಪಾರ್ಥಿವ್‌ ಪಟೇಲ್‌, ಅಂಬಟಿ ರಾಯಡು, ಮಂದೀಪ್‌ ಸಿಂಗ್‌, ಹರ್ಭಜನ್‌ ಸಿಂಗ್‌ ಹಾಗೂ ಪಿಯೂಶ್‌ ಚಾವ್ಲಾ ತಲಾ 13 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಮೊದಲ ಸ್ಪರ್ಧಾತ್ಮಕ ಟಿ20 ಪಂದ್ಯವಾಡಿದ ಹೃತಿಕ್‌!

ನವಿ ಮುಂಬೈ: ಗುರುವಾರ ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಪರ ಪಾದಾರ್ಪಣೆ ಮಾಡಿದ ಹೃತಿಕ್‌ ಶೊಕೀನ್‌ ದೆಹಲಿ ಮೂಲದ ಕ್ರಿಕೆಟಿಗ. ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಟಿ20 ಪಂದ್ಯವನ್ನಾಡಿದರು ಎನ್ನುವುದು ವಿಶೇಷ. ಅವರು ಈ ವರೆಗೂ 7 ಲಿಸ್ಟ್‌ ‘ಎ’ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಭಾರತ ಅಂಡರ್‌-19 ತಂಡದಲ್ಲೂ ಕಾಣಿಸಿಕೊಂಡಿದ್ದರು. ಮೊದಲ ಪಂದ್ಯದಲ್ಲಿ ಅವರು 25 ರನ್‌ ಗಳಿಸಿದ್ದಲ್ಲದೇ 4 ಓವರ್‌ ಬೌಲ್‌ ಮಾಡಿ ಕೇವಲ 23 ರನ್‌ ನೀಡುವ ಮೂಲಕ ಗಮನ ಸೆಳೆದರು.

Devon Conway ಪ್ರೀ ವೆಡ್ಡಿಂಗ್ ಪಾರ್ಟಿ: ಟ್ರೆಡಿಷನಲ್‌ ಲುಕ್‌ನಲ್ಲಿ CSK ಆಟಗಾರರು ಶೈನಿಂಗ್..!

ಏಷ್ಯಾಕಪ್‌ ಟಿ20 ಟೂರ್ನಿ ಲಂಕಾದಿಂದ ಯುಎಇಗೆ?

ಕೊಲಂಬೊ(ಏ.22): ಇದೇ ವರ್ಷ ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 11ರ ವರೆಗೂ ಶ್ರೀಲಂಕಾದಲ್ಲಿ ನಡೆಯಬೇಕಿರುವ ಏಷ್ಯಾ ಕಪ್‌ ಟಿ20 ಟೂರ್ನಿಯು ಯುಎಇಗೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತವೆನಿಸಿದೆ. ಲಂಕಾದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕೂಡಾ ದ್ವೀಪ ರಾಷ್ಟ್ರಕ್ಕೆ ಪ್ರಯಾಣಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಟೂರ್ನಿ ಸ್ಥಳಾಂತರಗೊಂಡರೆ 6 ಮಿಲಿಯನ್‌ ಡಾಲರ್‌(ಸುಮಾರು 45.7 ಕೋಟಿ ರು.) ನಷ್ಟವಾಗುವ ಸಾಧ್ಯತೆ ಇದೆ ಎಂದು ಲಂಕಾ ಕ್ರಿಕೆಟ್‌ ಮಂಡಳಿ ಆತಂಕ ವ್ಯಕ್ತಪಡಿಸಿದೆ. ಟೂರ್ನಿ ಆಯೋಜನೆ ಬಗ್ಗೆ ಐಪಿಎಲ್‌ ಫೈನಲ್‌ ಬಳಿಕ ಏಷ್ಯನ್‌ ಕ್ರಿಕೆಟ್‌ ಸಮಿತಿ(ಎಸಿಸಿ) ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಮಹಿಳಾ ಟಿ20: ರಾಜ್ಯ ತಂಡಕ್ಕೆ 3ನೇ ಸೋಲು

ರಾಜ್‌ಕೋಟ್‌: ರಾಷ್ಟ್ರೀಯ ಮಹಿಳಾ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಹ್ಯಾಟ್ರಿಕ್‌ ಸೋಲನುಭವಿಸಿದ್ದು, ನಾಕೌಟ್‌ ರೇಸ್‌ನಿಂದ ಹೊರಬಿದ್ದಿದೆ. ಎಲೈಟ್‌ ‘ಸಿ’ ಗುಂಪಿನಲ್ಲಿರುವ ರಾಜ್ಯ ತಂಡ ಗುರುವಾರ ಹಿಮಾಚಲ ಪ್ರದೇಶ ವಿರುದ್ಧ 7 ವಿಕೆಟ್‌ಗಳಿಂದ ಸೋತಿತು. ಮೊದಲು ಬ್ಯಾಟ್‌ ಮಾಡಿದ ರಾಜ್ಯ 6 ವಿಕೆಟ್‌ ಕಳೆದುಕೊಂಡು 106 ರನ್‌ ಕಲೆ ಹಾಕಿತು. ಶುಭಾ(49), ನಿಕಿ ಪ್ರಸಾದ್‌(29) ಮಾತ್ರ ಹೋರಾಟ ಪ್ರದರ್ಶಿಸಿದರು. ಸುಲಭ ಗುರಿ ಬೆನ್ನತ್ತಿದ ಹಿ.ಪ್ರದೇಶ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿತು. ನಾಯಕಿ ಸುಶ್ಮಾ ವರ್ಮಾ(52) ಅರ್ಧಶತಕ ಬಾರಿಸಿದರು. ಪ್ರತ್ಯೂಷಾ 10 ರನ್‌ಗೆ 3 ವಿಕೆಟ್‌ ಕಿತ್ತರು. ರಾಜ್ಯ ತಂಡ ಶುಕ್ರವಾರ ಮಧ್ಯಪ್ರದೇಶ ವಿರುದ್ಧ ಆಡಲಿದೆ.