* ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ವರ್ಷ ಪೂರ್ತಿಗೊಳಿಸಿದ ವಿರಾಟ್ ಕೊಹ್ಲಿ* 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ* ದಶಕಗಳ ಕಾಲ ಟೀಂ ಇಂಡಿಯಾಗೆ ಆಸರೆಯಾಗಿರುವ ವಿರಾಟ್ ಕೊಹ್ಲಿ

ಸೌಥಾಂಪ್ಟನ್‌(ಜೂ.21): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ವರ್ಷ ಪೊರೈಸಿದ್ದಾರೆ. ಕಳೆದೊಂದು ದಶಕದಲ್ಲಿ ಕೊಹ್ಲಿ ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

2011ರ ಜೂ.20ರಂದು ವಿರಾಟ್‌, ಕಿಂಗ್‌ಸ್ಟನ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ಭಾರತ ತಂಡದ ನಾಯಕರಾಗಿ ನೇಮಕಗೊಂಡ ಕೊಹ್ಲಿ, ಸದ್ಯ 61ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದು ಅತಿಹೆಚ್ಚು ಪಂದ್ಯಗಳಲ್ಲಿ ನಾಯಕನಾದ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. 

ಕೊಹ್ಲಿಯ ವೃತ್ತಿಬದುಕಿನಲ್ಲಿ ಇದು 92ನೇ ಟೆಸ್ಟ್‌ ಆಗಿದ್ದು, ಈವರೆಗೂ ಕೊಹ್ಲಿ 52.31ರ ಸರಾಸರಿಯಲ್ಲಿ 7,534 ರನ್‌ ಗಳಿಸಿದ್ದಾರೆ. 27 ಶತಕ ಹಾಗೂ 25 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ವಿರಾಟ್ ಬಾರಿಸಿದ 27 ಶತಕಗಳ ಪೈಕಿ 14 ಶತಕಗಳು ತವರಿನಾಚೆ ಬಾರಿಸಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಮೈದಾನದಲ್ಲಿ ಕೊಹ್ಲಿ ಬಾಂಗ್ರಾ ಡ್ಯಾನ್ಸ್, ಗೆದ್ದರೆ ನಿಮ್ಮೊಂದಿಗೆ ಸ್ಟೆಪ್ಸ್ ಎಂದ ಫ್ಯಾನ್ಸ್!

ಧೋನಿ ಬಳಿಕ ಭಾರತ ಕ್ರಿಕೆಟ್ ತಂಡವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಗೆ ಅತಿ ಹೆಚ್ಚು(36) ಗೆಲುವು ತಂದುಕೊಟ್ಟ ನಾಯಕ ಎನ್ನುವ ದಾಖಲೆಯನ್ನು ನಿರ್ಮಿಸಿದ್ದಾರೆ. ಇದಷ್ಟೇ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎನ್ನುವ ದಾಖಲೆಯೂ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.