ನವದೆಹಲಿ(ಫೆ.20): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, 2014ರ ಇಂಗ್ಲೆಂಡ್‌ ಪ್ರವಾಸದ ವೇಳೆ ಖಿನ್ನತೆಗೆ ಒಳಗಾಗಿದ್ದಾಗಿ ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್‌ನ ಖ್ಯಾತ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಮಾರ್ಕ್ ನಿಕೋಲಸ್‌ರೊಂದಿಗೆ ನಡೆಸಿರುವ ಸಂವಾದದಲ್ಲಿ ಕೊಹ್ಲಿ ಈ ವಿಷಯ ತಿಳಿಸಿದ್ದಾರೆ.

‘ಎಷ್ಟೇ ಪ್ರಯತ್ನಿಸಿದರೂ ರನ್‌ ಗಳಿಸಲು ಸಾಧ್ಯವಾಗದೆ ಇದ್ದಾಗ ಬಹಳ ನೊಂದಿದ್ದೆ. ಅದರಿಂದ ಖಿನ್ನತೆಗೆ ಒಳಗಾದೆ. ಬಹಳ ಒಂಟಿತನ ಕಾಡಲು ಶುರುವಾಗಿತ್ತು’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. 2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ 5 ಟೆಸ್ಟ್‌ ಪಂದ್ಯಗಳಲ್ಲಿ ಕ್ರಮವಾಗಿ 1,8,25,00,39,28,00,7 ಹಾಗೂ 6 ರನ್ ಅಂದರೆ 10 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 13.40 ಸರಾಸರಿಯಲ್ಲಿ ರನ್‌ ಗಳಿಸಿದ್ದರು. ಆದರೆ ಇದಾದ ಬಳಿಕ ಅಸ್ಟ್ರೇಲಿಯಾ ಪ್ರವಾಸದಲ್ಲಿ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದ ವಿರಾಟ್ ಕೊಹ್ಲಿ 692 ರನ್ ಚಚ್ಚಿದ್ದರು. 

ಇದೇ ವೇಳೆ ಮಾನಸಿಕ ಆರೋಗ್ಯ ಬಗ್ಗೆ ಗಮನ ಹರಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರಬರಲು ವೃತ್ತಿಪರರ ಸಲಹೆ, ಸಹಾಯ ಪಡೆಯಬೇಕು ಎಂದು ಯುವಕರಿಗೆ ಕೊಹ್ಲಿ ಕಿವಿಮಾತು ಹೇಳಿದ್ದಾರೆ.

ಕಡು ಬಡತನ, ಟೆಂಪೋ ಡ್ರೈವರ್ ಮಗ ಸಕಾರಿಯಾ ಕಣ್ಣೀರು ಒರೆಸಿದ ಐಪಿಎಲ್ ಹರಾಜು!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಅಹಮದಾಬಾದ್‌ನಲ್ಲಿದ್ದು, ಇಂಗ್ಲೆಂಡ್‌ ವಿರುದ್ದದ ಮೂರನೇ ಟೆಸ್ಟ್‌ಗೆ ಸಜ್ಜಾಗುತ್ತಿದ್ದಾರೆ. ಸರ್ದಾರ್‌ ಪಟೇಲ್‌ ಮೈದಾನದಲ್ಲಿ ಫೆಬ್ರವರಿ 24ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ನೂತನ ಮೈದಾನದಲ್ಲಿ ಪಿಂಕ್ ಬಾಲ್ ಟೆಸ್ಟ್‌ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಭಾರತ-ಇಂಗ್ಲೆಂಡ್‌ ನಡುವಿನ 4 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಿಗೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿತ್ತು. ಮೊದಲ ಟೆಸ್ಟ್‌ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್‌ ಜಯಿಸಿದ್ದರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ 317 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ 1-1ರಲ್ಲಿ ಸರಣಿ ಸಮಬಲ ಸಾಧಿಸಿತ್ತು.