ಹ್ಯಾಟ್ಸ್ ಆಫ್ ವಿರಾಟ್; ಅಪರೂಪದ ಅಭಿಮಾನಿಯ ಹೃದಯ ಗೆದ್ದ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆಲ್ಲುವುದು ಮಾತ್ರವಲ್ಲದೇ ವಿಶೇಷ ಚೇತನ ಅಭಿಮಾನಿಯ ಹೃದಯವನ್ನು ಗೆದ್ದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಇಂದೋರ್[ನ.17]: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು 130 ರನ್’ಗಳಿಂದ ಜಯಭೇರಿ ಬಾರಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ 1-0 ಮುನ್ನಡೆ ಸಾಧಿಸಿದೆ. ಮೈದಾನದಲ್ಲಿ ನಾಯಕತ್ವದ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ವಿರಾಟ್, ಮೈದಾನದಾಚೆಗೂ ವಿಶೇಷ ಚೇತನ ಅಭಿಮಾನಿಯ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
2014ರಲ್ಲಿ ಖಿನ್ನತೆ ಎದುರಿಸಿದ್ದೆ: ಸತ್ಯ ಒಪ್ಪಿಕೊಂಡ ಕೊಹ್ಲಿ!
ಇಂದೋರ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ದಿವ್ಯಾಂಗ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 24 ವರ್ಷದ ಫೂಜಾ ಶರ್ಮಾ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು, ಜತೆಗೆ ಹ್ಯಾಟ್ ಮೇಲೆ ಕೊಹ್ಲಿ ಹಸ್ತಾಕ್ಷರ ನೀಡಿದರು.
ಅಭಿಮಾನಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ವಿರಾಟ್ ಕೊಹ್ಲಿ ಪಾಲಿಗೆ ಹೊಸದೇನಲ್ಲ. ಈ ಹಿಂದೆಯೂ ಹಲವಾರು ಬಾರಿ ಕೊಹ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿಲ್ಲ. ಐಸಿಸಿ ಏಕದಿನ ವಿಶ್ವಕಪ್ ವೇಳೆ ವೃದ್ದೆ ಅಭಿಮಾನಿಯೊಬ್ಬರ ಜತೆ ಮಾತುಕತೆ ನಡೆಸಿ ಗಮನ ಸೆಳೆದಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ವೈಜಾಗ್ ಟೆಸ್ಟ್ ಪಂದ್ಯದಲ್ಲೂ ಅಭಿಮಾನಿಯ ಜತೆ ಮಾತಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
31 ವರ್ಷದ ಕೊಹ್ಲಿ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್’ನಲ್ಲಿ ನಿರಾಸೆ ಅನುಭವಿಸಿದ್ದರು. ಅಬು ಜಾಯೆದ್ ಬೌಲಿಂಗ್’ನಲ್ಲಿ ಕೊಹ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಆರಂಭವಾಗಲಿದ್ದು, ಈಡನ್ ಗಾರ್ಡನ್ಸ್ ಮೈದಾನ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸುವ ಸಾಧ್ಯತೆಯಿದೆ.