ಕೊರೋನಾ ವಿರುದ್ದ ಹೋರಾಟಕ್ಕಿಳಿದ ವಿರಾಟ್ ಕೊಹ್ಲಿ..!
ನವದೆಹಲಿ: ಕೊರೋನಾ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಹೀಗಿರುವಾಗಲೇ ಸಮಯ ವ್ಯರ್ಥಮಾಡದ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೋವಿಡ್ ವಿರುದ್ದದ ಹೋರಾಟಕ್ಕೆ ಅಖಾಡಕ್ಕಿಳಿದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಿಟ್ಟ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಬಯೋ ಬಬಲ್‌ನೊಳಗೆ ಕೋವಿಡ್ 19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಎಲ್ಲಾ ಆಟಗಾರರು ಬಯೋ ಬಬಲ್‌ನಿಂದ ನೇರವಾಗಿ ತಮ್ಮ ಮನೆ ಸೇರಿಕೊಳ್ಳಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಹಲವು ವಿದೇಶಿ ಕ್ರಿಕೆಟಿಗರು ತಮ್ಮ ತವರು ಸೇರಿಕೊಂಡಿದ್ದಾರೆ.
ಆದರೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ವಿರುದ್ದ ಹೋರಾಟಕ್ಕಿಳಿದಿದ್ದಾರೆ.
ದೇಶ ಕೋವಿಡ್ ವಿರುದ್ದ ಹೋರಾಡುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಈ ಪಿಡುಗಿನ ವಿರುದ್ದ ಜಾಗೃತಿ ಮೂಡಿಸುತ್ತಿರುವ ಯುವ ಸೇನಾ ಸದಸ್ಯ ರಾಹುಲ್ ಎನ್ ಕನಲ್ ಜತೆ ಮಾತುಕತೆ ನಡೆಸಿ ಯಾವ ರೀತಿ ಕಾರ್ಯಪ್ರೌವೃತ್ತರಾಗಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ವಿಚಾರವನ್ನು ಟ್ವೀಟ್ ಮಾಡಿರುವ ರಾಹುಲ್, ನಮ್ಮ ನಾಯಕನನ್ನು ಭೇಟಿಯಾದೆ. ಕೋವಿಡ್ ವಿರುದ್ದದ ಹೋರಾಟಕ್ಕೆ ಅವರು ಕೈ ಜೋಡಿಸಿದ್ದಾರೆ. ಅವರ ಈ ಪ್ರಯತ್ನಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಈ ಹಿಂದೆಯೂ ಕೊರೋನಾ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.