* ವಿರಾಟ್ ಕೊಹ್ಲಿ ಪುತ್ರಿ ವಮಿಕಾಗೆ ಎದುರಾಯ್ತು ರೇಪ್ ಬೆದರಿಕೆ* ವಿರುಷ್ಕಾ ಪುತ್ರಿ ವಮಿಕಾ 9 ತಿಂಗಳ ಮಗು* ಶಮಿ ಪರ ಕೊಹ್ಲಿ ಬ್ಯಾಟ್‌ ಬೀಸಿದ ಬೆನ್ನಲ್ಲೇ ಈ ಬೆದರಿಕೆ?

ಬೆಂಗಳೂರು(ನ.01): ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಪ್ರತಿಕ್ರಿಯಿಸುವ ರೀತಿಯನ್ನು ಗಮನಿಸಿದರೆ, ಸಮಾಜ ಯಾವ ಕಡೆ ಸಾಗುತ್ತಿದೆ ಎನ್ನುವುದನ್ನು ಊಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಅದಕ್ಕೆ ಪುಷ್ಠಿಕೊಡುವಂತೆ ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರ 9 ತಿಂಗಳ ಪುತ್ರಿ ವಮಿಕಾಗೀಗ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.

ಅಚ್ಚರಿ ಎನಿಸಿದರೂ ಈ ವಿಷಯ ಸತ್ಯ. @Criccrazyygirl ಎನ್ನುವ ಟ್ವಿಟರ್‌ ಅಕೌಂಟ್‌ನಿಂದ ವಮಿಕಾ (Vamika) ಗೆ ರೇಪ್ ಬೆದರಿಕೆ ಬಂದಿದೆ. ಇದಾದ ಬಳಿಕ ಆ ಟ್ವೀಟ್‌ ಅನ್ನು ಅಳಿಸಿ ಹಾಕಲಾಗಿದೆ. ಆ ಟ್ವೀಟ್‌ ಮಾಡಿದ ವ್ಯಕ್ತಿ ಯಾರೆಂದು ಇದುವರೆಗೂ ಪತ್ತೆಯಾಗಿಲ್ಲ. ಟ್ವೀಟ್‌ ಅಳಿಸಿ ಹಾಕಿದ್ದರೂ ಸಹಾ, ಹಲವೆಡೆ ಆ ಸ್ಕ್ರೀನ್‌ಶಾಟ್ ಸಾಕಷ್ಟು ವೈರಲ್ ಆಗಿದೆ.

ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ 10 ವಿಕೆಟ್‌ಗಳ ಅಂತರದ ಸೋಲು ಕಂಡ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ (Mohammed Shami) ಮೇಲೆ ಧರ್ಮದ ಆಧಾರದ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮಾಡಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ಇಂತಹ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ‘ಬೆನ್ನು ಮೂಳೆ ಹೊಂದಿಲ್ಲದ ಕೆಲವು ಜನರು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿಯ ಕುರಿತು ಅವಹೇಳನ ಮಾಡುತ್ತಿದ್ದಾರೆ. ಧರ್ಮವನ್ನು ಮುಂದಿಟ್ಟು ಟೀಕಿಸುವುದು ಮನುಷ್ಯತ್ವದ ಅತ್ಯಂತ ಕೀಳು ಮನೋಭಾವ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

T20 World Cup: ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!

ಧರ್ಮ ಅತ್ಯಂತ ಪವಿತ್ರ ಹಾಗೂ ವೈಯುಕ್ತಿಕ ವಿಷಯ. ನಾವಿಲ್ಲಿ ಮೈದಾನದಲ್ಲಿ ಏನು ಮಾಡುತ್ತಿದ್ದೇವೆ ಎನ್ನುವುದನ್ನು ಅರಿವಿಲ್ಲದೇ ಕೆಲವು ಜನರು ಹೀಗೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ ಎಂದು ಕೊಹ್ಲಿ ಹೇಳಿದ್ದರು. ವಿರಾಟ್ ಕೊಹ್ಲಿ ಈ ರೀತಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ನೆಟ್ಟಿಗನೊಬ್ಬ ವಿಷ ಕಾರಿದ್ದಾನೆ. 

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳನ್ನು ಸೋಲುವ ಮೂಲಕ ಬಹುತೇಕ ಸೆಮಿಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಹೀಗಿದ್ದೂ ಒಂದು ವೇಳೆ ಪವಾಡ ನಡೆದರೆ ಈಗಲೂ ಸಹಾ ಟೀಂ ಇಂಡಿಯಾ ಸೆಮೀಸ್‌ಗೇರಬಹುದಾಗಿದೆ.

ಆಟಗಾರರ ಮಕ್ಕಳ ಮೇಲಿನ ರೇಪ್ ಬೆದರಿಕೆ ಇದೇ ಮೊದಲೇನಲ್ಲ: 

ಟೀಂ ಇಂಡಿಯಾ ಹಾಲಿ ನಾಯಕ ವಿರಾಟ್ ಕೊಹ್ಲಿ ಮಗುವಿಗೆ ಎದುರಾದಂತೆ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಪುತ್ರಿ ಝಿವಾ ಕೂಡಾ ಕಳೆದ ವರ್ಷ ಅತ್ಯಾಚಾರದ ಬೆದರಿಕೆ ಎದುರಿಸಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದರ ಬೆನ್ನಲ್ಲೇ 5 ವರ್ಷದ ಧೋನಿ ಪುತ್ರಿ ಝಿವಾಳನ್ನು ರೇಪ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಗುಜರಾತಿನ ಕಛ್ ಜಿಲ್ಲೆಯ ನಮ್ಮ ಕಪಾಯದ ನಿವಾಸಿಯೊಬ್ಬ ಧೋನಿ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಝಿವಾಗೆ ಬೆದಿರಿಕೆ ಹಾಕಿರುವುದು ಪತ್ತೆಯಾಗಿತ್ತು.

T20 World Cup: ಟೀಂ ಇಂಡಿಯಾ ನೀರಸ ಪ್ರದರ್ಶನಕ್ಕೆ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು..!

ಕ್ರಿಕೆಟ್‌ ಅನ್ನು ಒಂದು ಧರ್ಮವೆಂದು ಆರಾಧಿಸುವ ನಾಡಿನಲ್ಲಿ ಇಂತಹ ವಿಕೃತ ಮನಸ್ಸುಗಳಿವೆ ಎಂದರೆ ನಂಬಲು ಕಷ್ಟವಾಗುತ್ತಿದೆ. ಕ್ರಿಕೆಟ್‌ ಮೇಲೆ ಅಭಿಮಾನವಿರಬೇಕು ಹಾಗಂತ ಈ ರೀತಿಯ ವಿಕೃತಿಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಪೊಲೀಸರು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.