T20 World Cup: ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India) ಸತತ ಎರಡು ಸೋಲು ಕಾಣುವ ಮೂಲಕ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿಕೊಂಡಿದೆ. ಪಾಕಿಸ್ತಾನ (Pakistan) ಹಾಗೂ ನ್ಯೂಜಿಲೆಂಡ್ (New Zealand) ವಿರುದ್ದ ಟೀಂ ಇಂಡಿಯಾ ಸೋಲು ಕಂಡಿದ್ದರೂ ಸಹಾ, ಟೀಂ ಇಂಡಿಯಾ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ, ಸ್ವಲ್ಪ ಅದೃಷ್ಟ ಕೈ ಹಿಡಿದರೂ ಸಾಕು, ಟೀಂ ಇಂಡಿಯಾ ಸೆಮೀಸ್‌ಗೇರಲಿದೆ. ಟೀಂ ಇಂಡಿಯಾ ಸೆಮೀಸ್ ಲೆಕ್ಕಾಚಾರ ಹೇಗಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇದೀಗ ಸತತ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸೆಮೀಸ್ ಹಾದಿಯನ್ನು ಕಗ್ಗಂಟು ಮಾಡಿಕೊಂಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ 10 ವಿಕೆಟ್‌ಗಳ ಅಂತರದ ಸೋಲು ಕಂಡಿದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಸೋಲು ಕಂಡು ಮುಖಭಂಗ ಅನುಭವಿಸಿದೆ.
ಸತತ ಎರಡು ಸೋಲುಗಳ ಹೊರತಾಗಿಯೂ ಟೀಂ ಇಂಡಿಯಾ ಇನ್ನೂ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ. ಇನ್ನುಳಿದ ಪಂದ್ಯಗಳಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ, ಅದೃಷ್ಟ ಕೂಡಾ ಕೈ ಹಿಡಿದರೆ ಟೀಂ ಇಂಡಿಯಾ ಈಗಲೂ ಸೆಮಿ ಫೈನಲ್ ಪ್ರವೇಶಿಸಬಹುದಾಗಿದೆ.
ಗ್ರೂಪ್ 2ನಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ತಾನಾಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಸೆಮೀಸ್ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಇನ್ನು ಗ್ರೂಪ್ 2ನಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು 3 ಪಂದ್ಯಗಳನ್ನಾಡಿ 2 ಪಂದ್ಯಗಳನ್ನು ಜಯಿಸಿದೆ. ಇನ್ನು ನ್ಯೂಜಿಲೆಂಡ್ ಒಂದು ಪಂದ್ಯದಲ್ಲಿ ಗೆಲುವಿನ ರುಚಿ ಕಂಡಿದೆ. ಸ್ಕಾಟ್ಲೆಂಡ್ ಎದುರು ಭಾರೀ ಅಂತರದ ಗೆಲುವು ಸಾಧಿಸಿರುವ ಅಫ್ಘಾನ್ ತಂಡವು ಇನ್ನೂ ನ್ಯೂಜಿಲೆಂಡ್ ತಂಡವನ್ನು ಎದುರಿಸಿಲ್ಲ.
ಆಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ಎದುರು ಸಣ್ಣ ಅಂತರದ ಗೆಲುವನ್ನು ಸಾಧಿಸಿದರೆ, ಟೀಂ ಇಂಡಿಯಾ ಸೆಮೀಸ್ ಹಾದಿ ಸುಗಮವಾಗಲಿದೆ.
ind vs afg
ಇದಾದ ಬಳಿಕ ಟೀಂ ಇಂಡಿಯಾ ಆಫ್ಘಾನಿಸ್ತಾನ ಎದುರು ಭಾರೀ ಅಂತರದ ಗೆಲುವು ಸಾಧಿಸಬೇಕಿದೆ. ಹೀಗಾದರೆ ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ಭಾರತ ಉಳಿದ ಎಲ್ಲಾ ಪಂದ್ಯಗಳನ್ನು ಜಯಿಸಿದರು ತಮ್ಮ ಖಾತೆಯಲ್ಲಿ 6 ಅಂಕಗಳನ್ನು ಹೊಂದಲಿವೆ.
ಒಂದು ವೇಳೆ ಟೀಂ ಇಂಡಿಯಾ ಕ್ರಿಕೆಟ್ ಶಿಶುಗಳಾದ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳ ಎದುರು ಭಾರೀ ಅಂತರದ ಗೆಲುವು ಸಾಧಿಸಿದರೆ, ಗ್ರೂಪ್ 2ನಲ್ಲಿ ಎರಡನೇ ತಂಡವಾಗಿ ಟೀಂ ಇಂಡಿಯಾ ಸೆಮೀಸ್ ಪ್ರವೇಶಿಸಲಿದೆ.
ಭಾರತದ ಪಾಲಿನ ಪಂದ್ಯನ ಪಂದ್ಯಗಳು ಹೀಗಿವೆ ನೋಡಿ: ಆಫ್ಘಾನಿಸ್ತಾನ(ನವೆಂಬರ್ 03), ಸ್ಕಾಟ್ಲೆಂಡ್(ನವೆಂಬರ್ 05) ಹಾಗೂ ನಮೀಬಿಯಾ(ನವೆಂಬರ್ 08) ಈ ಮೂರೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಭಾರೀ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.