T20 World Cup: ಟೀಂ ಇಂಡಿಯಾ ನೀರಸ ಪ್ರದರ್ಶನಕ್ಕೆ ಕಿಡಿಕಾರಿದ ಕ್ರಿಕೆಟ್ ಅಭಿಮಾನಿಗಳು..!
* ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸತತ 2 ಸೋಲು ಕಂಡ ಟೀಂ ಇಂಡಿಯಾ
* ಭಾರತದ ನೀರಸ ಪ್ರದರ್ಶನಕ್ಕೆ ವ್ಯಾಪಕ ಟೀಕೆ
* ಟೀಂ ಇಂಡಿಯಾ ಸೆಮೀಸ್ ಕನಸು ಬಹುತೇಕ ಭಗ್ನ
ಬೆಂಗಳೂರು(ನ.01): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India), ನ್ಯೂಜಿಲೆಂಡ್ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಸೆಮೀಸ್ ಹಾದಿಯನ್ನು ಮತ್ತಷ್ಟು ದುರ್ಗಮಗೊಳಿಸಿಕೊಂಡಿದೆ. ಭಾರತದ ಎದುರು ನ್ಯೂಜಿಲೆಂಡ್ ತಂಡವು 8 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿದೆ. ಪಾಕಿಸ್ತಾನ ಎದುರು ಮೊದಲ ಪಂದ್ಯ ಸೋತಿದ್ದ ಭಾರತ, ಇದಾದ ಬಳಿಕ ಕಿವೀಸ್ ಎದುರು ಮುಗ್ಗರಿಸಿದೆ. ಟೀಂ ಇಂಡಿಯಾದ ಈ ನೀರಸ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಭಾರತ ನೀಡಿದ್ದ 111 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಕೇವಲ 14.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಕಿವೀಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿನ್ ಹಾಗೂ ಡೇರಲ್ ಮಿಚೆಲ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಗಪ್ಟಿಲ್ 17 ಎಸೆತಗಳಲ್ಲಿ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಡೇರೆಲ್ ಮಿಚೆಲ್ 35 ಎಸೆತಗಳಲ್ಲಿ 49 ರನ್ ಬಾರಿಸಿ ಜಸ್ಪ್ರೀತ್ ಬುಮ್ರಾ (Jasprit Bumrah) ಗೆ ಎರಡನೇ ಬಲಿಯಾದರು. ಇನ್ನು ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್ (Kane Williams) 31 ಎಸೆತಗಳಲ್ಲಿ ಅಜೇಯ 33 ರನ್ ಬಾರಿಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.
T20 World Cup: ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ ಸೋಲಿಗೆ ಕಾರಣವೇನು..?
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಒತ್ತಡದಲ್ಲೇ ಬ್ಯಾಟಿಂಗ್ ಮಾಡಿತ್ತು. ಸೂರ್ಯಕುಮಾರ್ ಯಾದವ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್(4) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಕೆ.ಎಲ್ ರಾಹುಲ್(16) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ. ರೋಹಿತ್ 14 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಕೊಹ್ಲಿ 17 ಎಸೆತಗಳನ್ನು ಎದುರಿಸಿ ಕೇವಲ 9 ರನ್ ಬಾರಿಸಿ ಪೆವಿಲಿಯನ್ ಹಾದಿ ಸೇರಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಕೂಡಾ ಅಬ್ಬರಿಸಲು ವಿಫಲರಾದರು. ಕೊನೆಯಲ್ಲಿ ಜಡೇಜಾ 26 ರನ್ ಬಾರಿಸಿದರಾದರೂ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾದ ನೀರಸ ಪ್ರದರ್ಶನಕ್ಕೆ ವಿರೇಂದ್ರ ಸೆಹ್ವಾಗ್, ಶೋಯೆಬ್ ಅಖ್ತರ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಕ್ರಿಕೆಟ್ ಪಂಡಿತರು ಬೇಸರ ಹೊರಹಾಕಿದ್ದಾರೆ.
ಭಾರತದಿಂದ ನೀರಸ ಪ್ರದರ್ಶನ ಮೂಡಿಬಂತು. ಭಾರತದಿಂದ ಉತ್ತಮ ಹಾಗೂ ಬಲಿಷ್ಠ ಪ್ರದರ್ಶನವನ್ನು ನಿರೀಕ್ಷಿಸಿದ್ದೆ ಎಂದು ಅಖ್ತರ್ ಹೇಳಿದ್ದಾರೆ.
ಭಾರತ ನೀರಾಸೆ ಮೂಡಿಸಿತು. ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ತೋರಿತು. ಭಾರತ ತಂಡದ ಮನೋಭಾವ ಅಷ್ಟೊಂದು ಉತ್ತಮವಾಗಿರಲಿಲ್ಲ. ಪಾಕ್ ವಿರುದ್ದದ ಪಂದ್ಯದಂತೆ ಅನಗತ್ಯ ಶಾಟ್ ಮಾಡುವ ಮೂಲಕ ಬೆಲೆ ತೆತ್ತಿತು. ನ್ಯೂಜಿಲೆಂಡ್ ಬಹುತೇಕ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿದೆ. ಭಾರತಕ್ಕಿದು ಆಘಾತ ಹಾಗೂ ಈ ಸೋಲನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಈ ಸೋಲು ಭಾರತಕ್ಕೆ ಎದುರಾದ ದೊಡ್ಡ ಹೊಡೆತ. ಬ್ಯಾಟ್ಸ್‌ಮನ್‌ಗಳು ಆಡಿದ ರೀತಿ ನಿಜಕ್ಕೂ ಪ್ರಶ್ನಾರ್ಹವಾಗಿದೆ. ನ್ಯೂಜಿಲೆಂಡ್ ಉತ್ತಮವಾಗಿ ಬೌಲಿಂಗ್ ಮಾಡಿತು. ಭಾರತ ಎದುರು ಕಿವೀಸ್ ಭಾರೀ ಅಂತರದ ಗೆಲುವು ದಾಖಲಿಸುವ ನೆಟ್ ರನ್ ರೇಟ್‌ಗೂ ಹೊಡೆತ ಕೊಟ್ಟಿದೆ. ಇದರೊಂದಿಗೆ ಟೀಂ ಇಂಡಿಯಾದ ಸೆಮೀಸ್ ಕನಸು ದೂರದ ಕನಸಾಗಿದೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಇದಷ್ಟೇ ಅಲ್ಲದೇ ಅಜಯ್ ರಾತ್ರ, ರೋಹನ್ ಗವಾಸ್ಕರ್ ಸೇರಿದಂತೆ ಹಲವು ಹಿರಿಯ ಆಟಗಾರರು ಟ್ವೀಟ್ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.