ಇಂಗ್ಲೆಂಡ್‌ ತಂಡವನ್ನು ಸೌಥಾಂಪ್ಟನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 50 ರನ್‌ಗಳಿಂದ ಮಣಿಸಿತು. ಅದರೊಂದಿಗೆ ರೋಹಿತ್ ಶರ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. 

ಸೌಥಾಂಪ್ಟನ್‌ (ಜುಲೈ 8): ಇಂಗ್ಲೆಂಡ್‌(England) ವಿರುದ್ಧ ಸೌಥಾಂಪ್ಟನ್‌ (Southampton) ಟಿ20 ಪಂದ್ಯದಲ್ಲಿ ಆಡುವ ಮೂಲಕ ರೋಹಿತ್ ಶರ್ಮ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದರು. ಮೊದಲ T20I ನಲ್ಲಿ ಆತಿಥೇಯ ತಂಡವನ್ನು 50 ರನ್‌ಗಳಿಂದ ಮಣಿಸುವ ಮೂಲಕ ಭಾರತ ಪ್ರಭುತ್ವ ಸಾಧಿಸಿತು.

ನಿಬಿಡ ಐಪಿಎಲ್‌ ನಂತರ, ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ T20I ಸರಣಿಯಿಂದ ರೋಹಿತ್ ಶರ್ಮ ವಿಶ್ರಾಂತಿ ಪಡೆದಿದ್ದರು. ಆ ಬಳಿಕ ಕೋವಿಡ್‌ಗೆ ತುತ್ತಾಗಿದ್ದರಿಂದ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದರು.

ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ, ರೋಹಿತ್ ಶರ್ಮ ಮಾರ್ಚ್ 2022 ರ ನಂತರ ಮೊದಲ ಬಾರಿಗೆ ಟೀಮ್‌ ಇಂಡಿಯಾ ಜೆರ್ಸಿ ಧರಿಸಿದ್ದಾರೆ. ಪ್ರವಾಸಿ ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ 238 ರನ್‌ ಗೆಲುವು ಸಾಧಿಸಿದ ಬಳಿಕ, ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದ ರೋಹಿತ್‌ ಶರ್ಮ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ, ಮುಂಬೈ ಇಂಡಿಯನ್ಸ್ ತಂಡ ನೀರಸ ನಿರ್ವಹಣೆ ತೋರಿ ಕೊನೆಯ ಸ್ಥಾನ ಪಡೆದಿತ್ತು.

ಆದರೆ, ಗುರುವಾರದಂದು ರೋಹಿತ್ ನಾಯಕತ್ವದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಗೆಲುವು ರೋಹಿತ್ ಅವರ ನಾಯಕನಾಗಿ ಸತತವಾಗಿ 13 ನೇ ಗೆಲುವು ಎನಿಸಿದೆ ಆ ಮೂಲಕ ಅವರು ಪುರುಷರ T20I ಇತಿಹಾಸದಲ್ಲಿ ಸತತ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ನಾಯಕ ಎನಿಸಿದರು.

ಇದಕ್ಕೂ ಮುನ್ನ ಸತತ 12 ಪಂದ್ಯಗಳಲ್ಲಿ ನಾಯಕನೊಬ್ಬ ಗೆಲುವು ದಾಖಲಿಸಿರುವುದು ಸಾಧನೆಯಾಗಿತ್ತು. ಅಫ್ಘಾನಿಸ್ತಾನದ ಅಸ್ಗರ್‌ ಅಫ್ಘಾನ್‌ ಹಾಗೂ ರೊಮೆನಿಯಾದ ರಮೇಶ್‌ ಸತೀಶನ್ ಈ ದಾಖಲೆ ಮಾಡಿದ್ದರು. 35 ವರ್ಷದ ರೋಹಿತ್ ಶರ್ಮ ಈಗ ಈ ದಾಖಲೆ ಮುರಿದಿದ್ದು, ಸತತ 13 ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ, ರೋಹಿತ್ ಇಲ್ಲಿಯವರೆಗೆ 29 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅವುಗಳಲ್ಲಿ 25 ರಲ್ಲಿ ಗೆಲುವಿನ ರುಚಿಯನ್ನು ಅನುಭವಿಸಿದ್ದಾರೆ ಮತ್ತು ನಾಲ್ಕರಲ್ಲಿ ಸೋತಿದ್ದಾರೆ, 86.20 ರ ಅತ್ಯುತ್ತಮ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. 

ಭಾರತೀಯ ಕ್ರಿಕೆಟ್‌ನ ದಾದಾ, ಸೌರವ್‌ ಗಂಗೂಲಿಗೆ 50ನೇ ಜನ್ಮದಿನದ ಸಂಭ್ರಮ!

ಈ ನಡುವೆ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತದ ಪರವಾಗಿ ಆರಂಭಿಕನಾಗಿ ಕಣಕ್ಕಿಳಿದು 24 ರನ್‌ ಬಾರಿಸಿದರು. ಆಡುವ ವೇಳೆ ಉತ್ತಮ ಲಯದಲ್ಲಿದ್ದ ಹಾಗೆ ಕಾಣಿಸಿಕೊಂಡರು. ತಮ್ಮ ಸಂಕ್ಷಿಪ್ತ ಇನ್ನಿಂಗ್ಸ್‌ನಲ್ಲಿ ರೋಹಿತ್ T20I ನಾಯಕನಾಗಿ ವೇಗವಾಗಿ 1000 ರನ್ ಗಳಿಸಿದ ಭಾರತದ ದಾಖಲೆಯನ್ನು ಮಾಡಿದರು. ರೋಹಿತ್‌ ಶರ್ಮ ಕೇವಲ 29 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಆ ಮೂಲಕ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದರು. ವಿರಾಟ್‌ ಕೊಹ್ಲಿ 30 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಶನಿವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಲಂಕಾ ವಿರುದ್ಧ 39 ರನ್‌ ಗೆಲುವು, ಹರ್ಮನ್‌ ಪಡೆ 3-0 ಕ್ಲೀನ್‌ಸ್ವೀಪ್‌

ಕೆಟ್ಟ ಫೀಲ್ಡಿಂಗ್‌ ಬಗ್ಗೆ ರೋಹಿತ್‌ ಬೇಸರ: "ನಾವು ಮೈದಾನದಲ್ಲಿ ಕೆಟ್ಟ ನಿರ್ವಹಣೆ ತೋರಿದೆವು. ಕೆಲವು ಕ್ಯಾಚ್‌ಗಳನ್ನು ತೆಗೆದುಕೊಳ್ಳಬೇಕಾಗಿತ್ತು. ನಾವು ಆ ವಿಭಾಗದಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ. ಅದರ ಗೆಲುವಿನ ಬಗ್ಗೆ ಹೆಮ್ಮೆಪಡುವುದಿಲ್ಲ" ಎಂದು ಮೊದಲ ಟಿ20 ಗೆಲುವಿನ ಬಳಿಕ ರೋಹಿತ್‌ ಶರ್ಮ ಹೇಳಿದ್ದಾರೆ. ಬಾಲ್‌ನಿಂದ ಉತ್ತಮ ಪ್ರದರ್ಶನ ಮೂಡಿ ಬಂದಿತು. ಪಿಚ್ ನಿಜವಾಗಿಯೂ ಉತ್ತಮವಾಗಿತ್ತು. ನಮ್ಮ ಬ್ಯಾಟಿಂಗ್‌ ಕೂಡ ಉತ್ತಮವಾಗಿತ್ತು. ಉತ್ತಮ ಶಾಟ್‌ಗಳನ್ನು ಬ್ಯಾಟ್ಸ್‌ ಮನ್‌ಗಳು ಬಾರಿಸಿದರು. ಪಂದ್ಯದ ಯಾವಯದೇ ಹಂತದಲ್ಲಿ ನಾವುಗಳು ಕೆಟ್ಟ ಶಾಟ್‌ ಬಾರಿಸಿದೆವು ಎಂದು ಅನಿಸಲಿಲ್ಲ ಎಂದು ಪಂದ್ಯದ ಬಳಿಕ ಹೇಳಿದ್ದಾರೆ. ಪವರ್‌ ಪ್ಲೇ ಹಂತದಲ್ಲಿ ಉತ್ತಮವಾಗಿ ಆಟವಾಡುವುದು, ಸಾಧ್ಯವಾದಷ್ಟು ಉತ್ತಮ ರನ್‌ಗಳನ್ನು ಈ ಹಂತದಲ್ಲಿ ಬಾರಿಸುವುದು ಎಲ್ಲಾ ತಂಡಗಳ ಮಂತ್ರವಾಗಿದೆ ಎಂದು ಹೇಳಿದ್ದಾರೆ.