Asianet Suvarna News Asianet Suvarna News

ಭಾರತೀಯ ಕ್ರಿಕೆಟ್‌ನ ದಾದಾ, ಸೌರವ್‌ ಗಂಗೂಲಿಗೆ 50ನೇ ಜನ್ಮದಿನದ ಸಂಭ್ರಮ!

ವಿದೇಶದ ನೆಲದಲ್ಲೂ ಭಾರತ ಅಧಿಕಾರಯುತ ಗೆಲುವು ಸಾಧಿಸಬಹುದು ಎನ್ನುವ ಆತ್ಮವಿಶ್ವಾಸವನ್ನು ತಂಡದಲ್ಲಿ ತುಂಬಿದ, ಭಾರತ ಕ್ರಿಕೆಟ್‌ ತಂಡದ ದಾದಾ ಎನಿಸಿಕೊಂಡಿದ್ದ ನಾಯಕ, ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಶುಕ್ರವಾರ ತಮ್ಮ 50ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಹಾಲಿ, ಮಾಜಿ ಆಟಗಾರರು, ರಾಜಕಾರಣಿಗಳು ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ನಾಯಕನಿಗೆ ಜನ್ಮದಿನದ ಶುಭ ಕೋರಿದ್ದಾರೆ.
 

dada Of Indian Cricket Bcci president sourav ganguly 50th birthday san
Author
Bengaluru, First Published Jul 8, 2022, 10:42 AM IST

ನವದೆಹಲಿ (ಜುಲೈ 8): ಭಾರತೀಯ ಕ್ರಿಕೆಟ್‌ನ (Indian Cricket) ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರಾದ, ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ (Bcci president) ಸೌರವ್‌ ಗಂಗೂಲಿ (sourav ganguly) ಶುಕ್ರವಾರ ತಮ್ಮ 50ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಟೀಮ್‌ ಇಂಡಿಯಾದ ಹಾಲಿ ಹಾಗೂ ಮಾಜಿ ಆಟಗಾರರು, ದೇಶದ ಗಣ್ಯರು ಗಂಗೂಲಿಗೆ ಜನ್ಮದಿನದ ಶುಭ ಕೋರಿದ್ದಾರೆ.

ಆಸೀಸ್‌ ತನ್ನ ಸುವರ್ಣಯುಗವನ್ನು ಆಚರಿಸಿಕೊಳ್ಳುತ್ತಿದ್ದ ಸಮಯದಲ್ಲಿ ತಂಡದ ಅತ್ಯಂತ ಪ್ರಖ್ಯಾತ ನಾಯಕ ಸ್ಟೀವ್‌ ವಾ ಅವರನ್ನು ಟಾಸ್‌ ವೇಳೆ ತನಗಾಗಿ ಕಾಯುವಂತೆ ಮಾಡಿದ್ದ ಆಟಗಾರ ಸೌರವ್‌ ಗಂಗೂಲಿ. ಅದಲ್ಲದೆ, ತಾವು ನಾಯಕರಾದ ಹೊತ್ತಿನಲ್ಲಿ ವಿದೇಶದಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಸಾಧಿಸುವಂಥ ಆತ್ಮವಿಶ್ವಾಸವನ್ನು ತುಂಬಿದ ನಾಯಕ. ಕ್ರಿಕೆಟ್‌ ಕಾಶಿ ಎನಿಸಿಕೊಂಡಿದ್ದ ಲಾರ್ಡ್ಸ್‌ ಮೈದಾನದ ಬಾಲ್ಕನಿಯಲ್ಲಿ ಶರ್ಟ್‌ ಬಿಚ್ಚಿ ಸಂಭ್ರಮ ಆಚರಿಸುವ ಮೂಲಕ ಇಂಗ್ಲೆಂಡ್‌ ತಂಡವನ್ನು ಇಂಗ್ಲೆಂಡ್‌ ನೆಲದಲ್ಲಿಯೇ ಕೆಣಕಿದ ಸಾಹಸಿ. ಭಾರತೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಎಡಗೈ ಬ್ಯಾಟ್ಸ್‌ ಮನ್‌ ಎನಿಸಿಕೊಂಡಿರುವ ಗಂಗೂಲಿಗೆ ವಿಶ್ವದೆಲ್ಲೆಡೆಯಿಂದ ಜನ್ಮದಿನದ ಶುಭಾಷಯಗಳು ಬರುತ್ತಿವೆ.

"ಜನ್ಮದಿನದ ಶುಭಾಶಯಗಳು ದಾದಾ! ನೀವು ಉತ್ತಮ ಸ್ನೇಹಿತ, ಪ್ರಭಾವಶಾಲಿ ನಾಯಕ ಮತ್ತು ಯುವಕರು ಆದರ್ಶವಾಗಿ ಕಲಿಯಲು ಬಯಸುವ ಹಿರಿಯ.  ಈ  ವಿಶೇಷ ದಿನದಂದು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಬಯಸುತ್ತೇನೆ. ಯಾವಾಗಲೂ ನಿಮಗೆ ಸಾಕಷ್ಟು ಪ್ರೀತಿ ಮತ್ತು ಶುಭಾಶಯಗಳು ಬಯಸುತ್ತೇನೆ' ಎಂದು ನಾಯಕನಾದ ದಿನಗಳಲ್ಲಿ ಸೌರವ್‌ ಗಂಗೂಲಿ ಬಂಬಲಿದ ಸೂಪರ್‌ ಸ್ಟಾರ್‌ ಆಲ್ರೌಂಡರ್‌ ಯುವರಾಜ್‌ ಸಿಂಗ್‌ (Yuvraj Singh) ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.


"ಒಬ್ಬ ಉತ್ತಮ ಬ್ಯಾಟ್ಸ್‌ಮನ್‌ನಿಂದ ಅತ್ಯುತ್ತಮ ನಾಯಕ ಮತ್ತು ಈಗ ಒಟ್ಟಾರೆಯಾಗಿ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುವವರೆಗೆ- ಈ ಹಂತದಲ್ಲಿ ನನ್ನ ನೆಚ್ಚಿನ ನಾಯಕ ಮತ್ತು ಮಾರ್ಗದರ್ಶಕರಾದ ಸೌರವ್‌ ಗಂಗೂಲಿಗೆ ಜನ್ಮದಿನದ ಶುಭ ಹಾರೈಸುತ್ತೇನೆ' ಎಂದು ಗಂಗೂಲಿಯ ಬೆಂಬಲದಿಂದ ತಂಡದಲ್ಲಿ ದೊಡ್ಡ ಹೆಸರು ಮಾಡಿದ ಮೊಹಮದ್ ಕೈಫ್‌ (Mohammed Kaif) ಬರೆದುಕೊಂಡಿದ್ದಾರೆ. ಭಾರತದ ಪರವಾಗಿ 424 ಪಂದ್ಯಗಳನ್ನು ಅಡಿರುವ ಸೌರವ್‌ ಗಂಗೂಲಿ 18, 575 ರನ್‌ ಬಾರಿಸಿದ್ದಾರೆ. ಇದರಲ್ಲಿ 38 ಶತಕ ಹಾಗೂ 107 ಅರ್ಧಶತಕಗಳು ಸೇರಿವೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ ಜನ್ಮದಿನದ ಶುಭಾಶಯಗಳು. ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ದೇವರು ನೀಡಲಿ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಟ್ವೀಟ್‌ ಮಾಡಿದ್ದಾರೆ.

ವಿಂಬಲ್ಡನ್‌ನಲ್ಲಿ ಟೆನಿಸ್‌ ಪಂದ್ಯ ವೀಕ್ಷಿಸಿ ಬರ್ತ್‌ಡೇ ಸಂಭ್ರಮ ಆಚರಿಸಿದ ಎಂಎಸ್‌ಡಿ!

2004 ರಲ್ಲಿ ಎಂಎಸ್ ಧೋನಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಗಂಗೂಲಿ  ಮೆನ್ ಇನ್ ಬ್ಲೂ ತಂಡದ ನಾಯಕರಾಗಿದ್ದರು. ಮೊದಲ ಪಂದ್ಯದಲ್ಲಿ ಧೋನಿ ಶೂನ್ಯಕ್ಕೆ ಔಟಾದರೂ, ಸೌರವ್‌ ಗಂಗೂಲಿ, ಧೋನಿಯ ಆಟದ ಮೇಲೆ ವಿಶ್ವಾಸವಿಟ್ಟು ಅವರಿಗೆ ಹೆಚ್ಚಿನ ಅವಕಾಶವನ್ನು ನೀಡಿದ್ದರು. ಇದರಿಂದಾಗಿ ಗಂಗೂಲಿ ತಮ್ಮ ಕೊನೆಯ ಟೆಸ್ಟ್‌ ಆಡುವಾಗ ಎಂಎಸ್‌ ಧೋನಿ ತಂಡದ ಜವಾಬ್ದಾರಿಯುತ ಆಟಗಾರನ ಪಟ್ಟದಲ್ಲಿದ್ದರು.

HBD Devdutt Padikkal: ಕನ್ನಡಿಗ ಪಡಿಕ್ಕಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್‌ಗೆ ದೊಡ್ಡ ಆಸ್ತಿ. 2000 ರ ದಶಕದಲ್ಲಿ ಭಾರತೀಯ ಕ್ರಿಕೆಟ್ ಅನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಗಂಗೂಲಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಶತಕ, ಪಾದಾಪರ್ಣೆಯ ಟೆಸ್ಟ್‌ ಪಂದ್ಯದಲ್ಲಿಯೇ ಶತಕ ಸಿಡಿಸಿದ ಅಪರೂಪದ ದಾಖಲೆಗಳನ್ನು ಹೊಂದಿದ್ದಾರೆ. ಏಕದಿನದಲ್ಲಿ 10 ಸಾವಿರಕ್ಕೂ ಅಧಿಕ ರನ್‌, ಟೆಸ್ಟ್‌ನಲ್ಲಿ 7 ಸಾವಿರಕ್ಕೂ ಅಧಿಕ ರನ್, ಭಾರತವನ್ನು 2003 ವಿಶ್ವಕಪ್‌ನ ಫೈನಲ್‌ಗೇರಿಸಿದ್ದ ದಾಖಲೆಗಳನ್ನು ಇವರು ಹೊಂದಿದ್ದಾರೆ.

 

Follow Us:
Download App:
  • android
  • ios