ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ಮುಂದೆ ಸಾಲು ಸಾಲು ಸವಾಲುಗಳಿವೆ. ಗಂಭೀರ್ ಮುಂದಿರುವ ಚಾಲೆಂಜ್‌ಗಳು ಯಾವುವು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿರುವ ಗೌತಮ್‌ ಗಂಭೀರ್‌ ಮುಂದೆ ಸಾಲು ಸಾಲು ಸವಾಲುಗಳಿವೆ. 2027ರ ವರೆಗೂ ಗಂಭೀರ್‌ ಕೋಚ್‌ ಆಗಿ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದು, ಈ ಅವಧಿಯಲ್ಲಿ ಭಾರತ ತಂಡ 2 ಬಾರಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌, ತಲಾ ಒಂದು ಟಿ20 ಹಾಗೂ ಏಕದಿನ ವಿಶ್ವಕಪ್‌ಗಳನ್ನು ಆಡಲಿದೆ.

ಇದೇ ತಿಂಗಳು 27ರಿಂದ ಶ್ರೀಲಂಕಾ ವಿರುದ್ಧದ ಏಕದಿನ, ಟಿ20 ಸರಣಿಗಳಿಂದ ಗಂಭೀರ್‌ರ ಯುಗ ಆರಂಭಗೊಳ್ಳಲಿದೆ. ಪ್ರಮುಖವಾಗಿ ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯು ಭಾರತ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಲಿದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸಬಹುದು.

ಇನ್ನು 2025ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿ ನಡೆಯಲಿದ್ದು, 2013ರ ಬಳಿಕ ಭಾರತ ಈ ಪ್ರಶಸ್ತಿ ಗೆದ್ದಿಲ್ಲ. 2025ರಲ್ಲಿ ಇಂಗ್ಲೆಂಡ್‌ನಲ್ಲಿ 5 ಟೆಸ್ಟ್‌ ಪಂದ್ಯಗಳ ಸರಣಿ, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

3ನೇ ಟಿ20: ಭಾರತದ ಆಲ್ರೌಂಡ್‌ ಆಟಕ್ಕೆ ಶರಣಾದ ಜಿಂಬಾಬ್ವೆ

2025-27ರ ಅವಧಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಭಾರತ 2027ರ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಬಹುದು. ಇನ್ನು 2027ರ ಏಕದಿನ ವಿಶ್ವಕಪ್‌ ಗಂಭೀರ್‌ರ ಪಾಲಿಗೆ ಅತ್ಯಂತ ಮಹತ್ವದೆನಿಸಲಿದೆ.

ಭಾರತ ತಂಡಕ್ಕೆ ಅಭಿಷೇಕ್‌ ನಾಯರ್‌ ಹೊಸ ಬ್ಯಾಟಿಂಗ್‌ ಕೋಚ್‌?

ನವದೆಹಲಿ: ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ನೂತನ ಪ್ರಧಾನ ಕೋಚ್‌ ಆಗಿ ನೇಮಕಗೊಂಡ ಬೆನ್ನಲ್ಲೇ ಸಹಾಯಕ ಕೋಚ್‌ಗಳ ನೇಮಕದ ಬಗ್ಗೆ ಕುತೂಹಲ ಶುರುವಾಗಿದೆ. ಗಂಭೀರ್‌ ಜೊತೆ ಕೆಕೆಆರ್‌ ತಂಡದಲ್ಲಿ ಕೆಲಸ ಮಾಡಿದ, ಮಾಜಿ ಕ್ರಿಕೆಟಿಗ ಅಭಿಷೇಕ್‌ ನಾಯರ್‌ಗೆ ಬ್ಯಾಟಿಂಗ್‌ ಕೋಚ್‌ ಹುದ್ದೆ ಸಿಗಲಿದೆ ಎನ್ನಲಾಗುತ್ತಿದೆ. ನಾಯರ್‌ರ ಹೆಸರನ್ನು ಗಂಭೀರ್‌ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಕನ್ನಡಿಗ, ಆರ್‌ಸಿಬಿ ಮಾಜಿ ಕ್ರಿಕೆಟಿಗನೇ ಬೌಲಿಂಗ್ ಕೋಚ್ ಆಗಬೇಕು: ಪಟ್ಟು ಹಿಡಿದ ಗೌತಮ್ ಗಂಭೀರ್..!

ಇದೇ ವೇಳೆ ಬೌಲಿಂಗ್‌ ಕೋಚ್‌ ಆಗಿ ಲಕ್ಷ್ಮೀಪತಿ ಬಾಲಾಜಿ ಅಥವಾ ಕರ್ನಾಟಕದ ವಿನಯ್‌ ಕುಮಾರ್‌ರನ್ನು ನೇಮಕ ಮಾಡುವಂತೆ ಗಂಭೀರ್‌ ಕೇಳಿದ್ದಾರೆ ಎನ್ನಲಾಗುತ್ತಿದೆಯಾದರೂ, ಈ ಬಗ್ಗೆ ಖಚಿತತೆ ಇಲ್ಲ. ದ್ರಾವಿಡ್‌ರ ಅವಧಿಯಲ್ಲಿ ಫೀಲ್ಡಿಂಗ್‌ ಕೋಚ್‌ ಆಗಿದ್ದ ಟಿ.ದಿಲೀಪ್‌, ಮತ್ತೊಂದು ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಿ20 ರ್‍ಯಾಂಕಿಂಗ್‌: 7ನೇ ಸ್ಥಾನಕ್ಕೇರಿದ ಋತುರಾಜ್‌ ಗಾಯಕ್ವಾಡ್

ದುಬೈ: ಭಾರತದ ಯುವ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಅವರು ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 13 ಸ್ಥಾನ ಪ್ರಗತಿ ಸಾಧಿಸಿದರು.

ತಾರಾ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ 2ನೇ ಸ್ಥಾನ ಕಾಯ್ದುಕೊಂಡಿದ್ದು, ಆಸ್ಟ್ರೇಲಿಯಾದ ಟ್ರ್ಯಾವಿಸ್‌ ಹೆಡ್‌ ಅಗ್ರಸ್ಥಾನದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಅಭಿಷೇಕ್‌ ಶರ್ಮಾ ಮೊದಲ ಬಾರಿ ರ್‍ಯಾಂಕಿಂಗ್‌ ಪಟ್ಟಿ ಪ್ರವೇಶಿಸಿದ್ದು, 75ನೇ ಸ್ಥಾನದಲ್ಲಿದ್ದಾರೆ. ಆದರೆ ಭಾರತದ ಬೌಲರ್‌ಗಳು ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಅಕ್ಷರ್‌ 2 ಸ್ಥಾನ ಕುಸಿದು 9ನೇ, ಕುಲ್ದೀಪ್‌ 3 ಸ್ಥಾನ ಕುಸಿದು 11 ಹಾಗೂ ಬುಮ್ರಾ 2 ಸ್ಥಾನ ಕೆಳಕ್ಕೆ ಜಾರಿ 14ನೇ ಸ್ಥಾನ ತಲುಪಿದ್ದಾರೆ.