ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹರಾರೆ: ಭಾರತದ ಆಲ್ರೌಂಡ್‌ ಆಟದ ಮುಂದೆ ಮಂಡಿಯೂರಿದ ಆತಿಥೇಯ ಜಿಂಬಾಬ್ವೆ 3ನೇ ಟಿ20 ಪಂದ್ಯದಲ್ಲಿ 23 ರನ್‌ ಸೋಲನುಭವಿಸಿದೆ. ಇದರೊಂದಿಗೆ ಶುಭ್‌ಮನ್‌ ಗಿಲ್‌ ಪಡೆ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 4 ವಿಕೆಟ್‌ಗೆ 182 ರನ್‌ ಕಲೆಹಾಕಿತು. ಉತ್ತಮ ಆರಂಭ ಪಡೆದು 3 ಓವರಲ್ಲಿ 41 ರನ್‌ ಬಾರಿಸಿದ್ದ ಭಾರತ ಬಳಿಕ ಮಂಕಾಯಿತು. ನಂತರ 9 ಓವರ್‌ಗಳಲ್ಲಿ ತಂಡ ಗಳಿಸಿದ್ದು ಕೇವಲ 48 ರನ್‌. ಈ ನಡುವೆ ತಂಡ ಜೈಸ್ವಾಲ್‌(27 ಎಸೆತದಲ್ಲಿ 36), ಅಭಿಷೇಕ್‌ ಶರ್ಮಾ(10) ವಿಕೆಟ್‌ ಕಳೆದುಕೊಂಡಿತು. ಆದರೆ ಗಿಲ್‌ ಹಾಗೂ ಋತುರಾಜ್ ಗಾಯಕ್ವಾಡ್‌ ಅಬ್ಬರಿಸಿ ತಂಡದ ರನ್‌ ವೇಗ ಹೆಚ್ಚಿಸಿದರು.

ಉಡುಪಿಯಲ್ಲಿ ಬಗೆಬಗೆಯ ಮೀನು ತಿಂದ ಸೂರ್ಯಕುಮಾರ್! ವಿಶ್ವಕಪ್ ಹೀರೋ ಆರ್ಡರ್‌ ಮಾಡಿದ್ದು ಇದು!

ಕೊನೆ 8 ಓವರಲ್ಲಿ ತಂಡ 93 ರನ್‌ ಸಿಡಿಸಿತು. ಗಿಲ್ 49 ಎಸೆತಗಳಲ್ಲಿ 66 ರನ್‌ ಸಿಡಿಸಿದರೆ, ಗಾಯಕ್ವಾಡ್‌ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 49 ರನ್‌ ಚಚ್ಚಿದರು. ಸ್ಯಾಮನ್ಸ್‌ 12 ರನ್‌ ಕೊಡುಗೆ ನೀಡಿದರು. ದೊಡ್ಡ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಹೋರಾಟ ಪ್ರದರ್ಶಿಸಿತು. ಆದರೆ 6 ವಿಕೆಟ್‌ಗೆ 159 ರನ್‌ ಗಳಿಸಲಷ್ಟೇ ಶಕ್ತವಾಯಿತು.

7 ಓವರಲ್ಲಿ 39 ರನ್‌ಗೆ 5 ವಿಕೆಟ್‌ ಕಳೆದುಕೊಂಡ ತಂಡ ಇನ್ನೇನು ಆಲೌಟಾಯಿತು ಎಂಬ ಸ್ಥಿತಿಯಲ್ಲಿತ್ತು. ಆದರೆ ಡಿಯಾನ್‌ ಮೈರ್ಸ್‌ ಹೋರಾಟ ಬಿಡಲಿಲ್ಲ. 49 ಎಸೆತಗಳಲ್ಲಿ ಔಟಾಗದೆ 65 ರನ್‌ ಸಿಡಿಸಿದ ಅವರು, ತಂಡದ ಸೋಲಿನ ಅಂತರ ತಗ್ಗಿಸಿದರು. ಕ್ಲೈವ್‌ ಮಡಂಡೆ 26 ಎಸೆತಗಳಲ್ಲಿ 37, ಮಸಕಜ 10 ಎಸೆತದಲ್ಲಿ ಔಟಾಗದೆ 18 ರನ್‌ ಗಳಿಸಿದರು.

ಟಿ20 ಗೆಲುವಿಗೆ ಬಿಸಿಸಿಐ ಘೋಷಿಸಿದ 2.5 ಕೋಟಿ ಬೋನಸ್ ಸ್ವೀಕರಿಸಲು ನಿರಾಕರಿಸಿದ ದ್ರಾವಿಡ್!

ತಮ್ಮ ಸ್ಪಿನ್‌ ಮೋಡಿ ಮೂಲಕ ಜಿಂಬಾಬ್ವೆಯನ್ನು ಕಾಡಿದ ವಾಷಿಂಗ್ಟನ್‌ ಸುಂದರ್‌ 4 ಓವರಲ್ಲಿ 15 ರನ್‌ಗೆ 3 ವಿಕೆಟ್‌ ಕಿತ್ತರು.

ಸ್ಕೋರ್‌: 
ಭಾರತ 20 ಓವರಲ್ಲಿ 182/4 (ಗಿಲ್‌ 66, ಋತುರಾಜ್‌ 49, ರಝಾ 2-24) 
ಜಿಂಬಾಬ್ವೆ 20 ಓವರಲ್ಲಿ 159/6 (ಮೈರ್ಸ್‌ 65*, ಸುಂದರ್‌ 3-15, ಆವೇಶ್‌ 2-39) 
ಪಂದ್ಯಶ್ರೇಷ್ಠ: ವಾಷಿಂಗ್ಟನ್‌ ಸುಂದರ್‌