ಶುಭ್‌ಮನ್‌ ಗಿಲ್ ನಾಯಕತ್ವದ ಭಾರತ ತಂಡವು ಶ್ರೀಲಂಕಾ ವಿರುದ್ಧ ತನ್ನ ಐತಿಹಾಸಿಕ 600ನೇ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಆಗಸ್ಟ್ 15 ರಿಂದ ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆಟಗಾರರು ತರಬೇತಿ ಆರಂಭಿಸಿದ್ದು, ಭಾರತ ಈ ಮೈಲಿಗಲ್ಲು ತಲುಪಿದ ಮೂರನೇ ತಂಡವಾಗಲಿದೆ.

ಕೊಲಂಬೊ: ಐತಿಹಾಸಿಕ 600ನೇ ಟೆಸ್ಟ್‌ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಸಿದ್ಧತೆ ಆರಂಭಿಸಿದ್ದಾರೆ. 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲು ಶ್ರೀಲಂಕಾಗೆ ತೆರಳಿರುವ ಶುಭ್‌ಮನ್‌ ಗಿಲ್ ನಾಯಕತ್ವದ ಭಾರತ ತಂಡ, ಬುಧವಾರ ತರಬೇತಿ ಶುರು ಮಾಡಿಕೊಂಡಿತು.

ತಂಡದ ಎಲ್ಲಾ ಆಟಗಾರರು ನೆಟ್‌ ಪ್ರಾಕ್ಟೀಸ್‌ನಲ್ಲಿ ತೊಡಗಿಸಿಕೊಂಡರು. ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಯಶಸ್ವಿ ಜೈಸ್ವಾಲ್‌, ದೇವದತ್‌ ಪಡಿಕ್ಕಲ್‌ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ಸೇರಿದಂತೆ ಎಲ್ಲಾ ಬೌಲರ್‌ಗಳೂ ನೆಟ್ಸ್‌ನಲ್ಲಿ ಬೆವರಿಳಿಸಿದರು. ಶುಭ್‌ಮನ್‌ ಗಿಲ್‌, ಕೋಚ್‌ ಗೌತಮ್‌ ಗಂಭೀರ್ ಅವರು ಆಟಗಾರರ ಜೊತೆ ಮಾತುಕತೆಯಲ್ಲಿ ನಿರತವಾಗಿರುವ ಫೋಟೋಗಳನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.

600ನೇ ಟೆಸ್ಟ್‌:

ಆಗಸ್ಟ್‌ 15ರಿಂದ ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯ, ಭಾರತದ ಪಾಲಿನ 600ನೇ ಟೆಸ್ಟ್‌ ಆಗಿರಲಿದೆ. 1932ರ ಜೂನ್‌ನಲ್ಲಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತನ್ನ ಚೊಚ್ಚಲ ಟೆಸ್ಟ್‌ ಪಂದ್ಯವಾಡಿತ್ತು. ಈವರೆಗಿನ 599 ಟೆಸ್ಟ್‌ಗಳಲ್ಲಿ ತಂಡ 186ರಲ್ಲಿ ಗೆದ್ದಿದ್ದು, 188ರಲ್ಲಿ ಸೋಲನುಭವಿಸಿದೆ. 224 ಪಂದ್ಯಗಳು ಡ್ರಾಗೊಂಡಿದ್ದು, 1 ಪಂದ್ಯ ಟೈ ಆಗಿದೆ.

ಭಾರತ ತಂಡ 600ನೇ ಟೆಸ್ಟ್‌ ಆಡಿದ 3ನೇ ತಂಡ ಎಂಬ ಖ್ಯಾತಿಗೂ ಪಾತ್ರವಾಗಲಿದೆ. ಕ್ರಿಕೆಟ್‌ ಜನಕ ಎಂದು ಕರೆಸಿಕೊಳ್ಳುವ ಇಂಗ್ಲೆಂಡ್‌ 1097 ಟೆಸ್ಟ್‌ ಪಂದ್ಯಗಳನ್ನಾಡಿದ್ದರೆ, ಆಸ್ಟ್ರೇಲಿಯಾ ತಂಡ 882 ಟೆಸ್ಟ್‌ಗಳನ್ನಾಡಿವೆ. ಉಳಿದಂತೆ ವೆಸ್ಟ್‌ಇಂಡೀಸ್‌ 596, ನ್ಯೂಜಿಲೆಂಡ್‌ 487, ದಕ್ಷಿಣ ಆಫ್ರಿಕಾ 479, ಪಾಕಿಸ್ತಾನ 471 ಪಂದ್ಯಗಳಲ್ಲಿ ಕಣಕ್ಕಿಳಿದಿವೆ.

Scroll to load tweet…

ಸರಣಿಗೆ ಭಾರತದ 4 ನೆಟ್‌ ಬೌಲರ್ಸ್‌

ಲಂಕಾ ಸರಣಿಗೆ ಭಾರತ ತಂಡದಲ್ಲಿ ನಾಲ್ವರು ಬೌಲರ್‌ಗಳು ನೆಟ್‌ ಬೌಲರ್‌ಗಳಾಗಿರಲಿದ್ದಾರೆ. ಹರ್ಷ್‌ ದುಬೆ, ವಿಪ್ರಾಜ್‌ ನಿಗಮ್‌, ತನುಶ್‌ ಕೋಟ್ಯಾನ್‌ ಹಾಗೂ ಶಿವಾಂಗ್‌ ಕುಮಾರ್‌ ನೆಟ್ಸ್‌ ಅಭ್ಯಾಸದ ವೇಳೆ ಭಾರತೀಯ ಬ್ಯಾಟರ್‌ಗಳಿಗೆ ನೆರವಾಗಲಿದ್ದಾರೆ.

--

ಸುದರ್ಶನ್‌ ಶೀಘ್ರ ಲಂಕಾಗೆ ಪ್ರಯಾಣ

ಗಾಯದಿಂದ ಚೇತರಿಸಿಕೊಂಡು, ಪುನಶ್ಚೇತನ ಶಿಬಿರದಲ್ಲಿರುವ ಯುವ ಬ್ಯಾಟರ್‌ ಸಾಯಿ ಸುದರ್ಶನ್‌ ಸದ್ಯ ಇತರ ಆಟಗಾರರ ಜೊತೆ ಶ್ರೀಲಂಕಾಗೆ ಪ್ರಯಾಣಿಸಿಲ್ಲ. ಅವರು ಈಗ ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಲ್ಲಿದ್ದು, ಕೆಲ ದಿನಗಳಲ್ಲೇ ಫಿಟ್ನೆಸ್‌ ಸಾಬೀತುಪಡಿಸಿ, ವಾರಾಂತ್ಯದ ವೇಳೆ ಶ್ರೀಲಂಕಾಗೆ ತೆರಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.