ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಭಾರತ ತಂಡ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ವೇಳೆ ಅರ್ಶ್‌ದೀಪ್ ಸಿಂಗ್ ಗಾಯಗೊಂಡಿದ್ದು, ಕೆ.ಎಲ್ ರಾಹುಲ್ ಅಭ್ಯಾಸದಲ್ಲಿ ಭಾಗವಹಿಸಿಲ್ಲ. ಜಸ್‌ಪ್ರೀತ್ ಬುಮ್ರಾ ನಾಲ್ಕನೇ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ.
ಬೆಕೆನ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಸರಣಿಯಲ್ಲಿ ನಡೆದಿರುವ ಆರಂಭಿಕ 3 ಪಂದ್ಯಗಳ ಬಳಿಕ 1-2ರಲ್ಲಿ ಹಿನ್ನಡೆಯಲ್ಲಿರುವ ಟೀಂ ಇಂಡಿಯಾ, 4ನೇ ಟೆಸ್ಟ್ ಗೆದ್ದು ಸರಣಿ ಸಮಬಲಗೊಳಿಸಲು ಕಸರತ್ತು ಆರಂಭಿಸಿದೆ.
ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ 3ನೇ ಪಂದ್ಯ ಕೊನೆಗೊಂಡಿತ್ತು. ಆ ಬಳಿಕ ಬೆಕೆನ್‌ಹ್ಯಾಮ್‌ಗೆ ಆಗಮಿಸಿರುವ ಶುಭ್‌ಮನ್ ಗಿಲ್ ನಾಯಕತ್ವದ ತಂಡ ಗುರುವಾರ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿತು. ಆಟಗಾರರು ಕೆಲ ಕಾಲ ಫುಟ್ಬಾಲ್ ಆಡಿ, ವ್ಯಾಯಾಮ ಮಾಡಿದರು.
ವೇಗಿಗಳಾದ ಮೊಹಮದ್ ಸಿರಾಜ್, ವಿಕೆಟ್ ಕೀಪರ್ ರಿಷಭ್ ಪಂತ್, ಆಲ್ರೌಂಡರ್ ಶಾರ್ದೂಲ್ ಠಾಕೂರ್, ಬ್ಯಾಟರ್ ಸಾಯಿ ಸುದರ್ಶನ್ ಫುಟ್ಬಾಲ್ ಆಡುವುದು ಕಂಡುಬಂತು. ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್ ಕೆಲ ಕೆಲ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು.
ಅರ್ಶ್‌ದೀಪ್ ಸಿಂಗ್ ಕೈಬೆರಳಿಗೆ ಗಾಯ
ಭಾರತದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಬುಧವಾರ ಅಭ್ಯಾಸ ಶಿಬಿರದ ವೇಳೆ ಕೈ ಬೆರಳಿನ ಗಾಯಕ್ಕೆ ತುತ್ತಾದರು. ಸಾಯಿ ಸುದರ್ಶನ್ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಅರ್ಶ್‌ದೀಪ್ ಕೈಗೆ ಗಾಯವಾಯಿತು. ಬಳಿಕ ಅವರನ್ನು ವೈದ್ಯಕೀಯ ಸಿಬ್ಬಂದಿ ಉಪಚರಿಸಿದರು. ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಗೊತ್ತಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಅರ್ಶ್‌ದೀಪ್ ಸರಣಿಯ ಆರಂಭಿಕ 3 ಪಂದ್ಯಗಳಲ್ಲೂ ಆಡಿಲ್ಲ. ಆದರೆ ಬುಮ್ರಾ ಕೊನೆ 2 ಟೆಸ್ಟ್‌ಗಳ ಪೈಕಿ 1ರಲ್ಲಿ ಮಾತ್ರ ಆಡಲಿದ್ದು, ಅವರ ಗೈರಿನಲ್ಲಿ ಅರ್ಶ್‌ದೀಪ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ರಾಹುಲ್ ಗೈರು: ಕೆಲವು ಗಂಟೆಗಳ ಕಾಲ ನಡೆದ ಅಭ್ಯಾಸ ಶಿಬಿರದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕಾಣಿಸಿಕೊಳ್ಳಲಿಲ್ಲ. ಆದರೆ ಅವರು ಮುಂದಿನ ದಿನಗಳಲ್ಲಿ ಅಭ್ಯಾಸ ನಡೆಸಲಿದ್ದಾರೆ. ಉಳಿದಂತೆ ಕರುಣ್ ನಾಯರ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ ಸೇರಿ ಹಲವರು ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ಲೀಡ್ಸ್‌ನಲ್ಲಿ ನಡೆದಿದ್ದ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ, ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಆದರೆ ಲಾರ್ಡ್ಸ್‌ನಲ್ಲಿ ಗೆಲ್ಲಲು ತೀವ್ರ ಹೋರಾಟ ಪ್ರದರ್ಶಿಸಿದ್ದ ಹೊರತಾಗಿಯೂ ಭಾರತ ತಂಡ ಸೋಲು ಕಂಡಿತ್ತು. ಸರಣಿಯ 4ನೇ ಪಂದ್ಯ ಜು.23ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭಗೊಳ್ಳಲಿದೆ. ಕೊನೆ ಪಂದ್ಯ ಓವಲ್‌ನಲ್ಲಿ ಜು.31ಕ್ಕೆ ಶುರುವಾಗಲಿದೆ.
ಡು ಆರ್ ಡೈ ಟೆಸ್ಟ್‌ನಲ್ಲಿ ಬುಮ್ರಾ ಕಣಕ್ಕೆ?
ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ ಸರಣಿಯ ನಿರ್ಣಾಯಕ ಟೆಸ್ಟ್ ಎನಿಸಿಕೊಂಡಿರುವ 4ನೇ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಕಾರ್ಯದೊತ್ತಡ ಕಾರಣಕ್ಕೆ ಬುಮ್ರಾ ಈ ಸರಣಿಯ 5 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಮಾತ್ರ ಆಡಲಿದ್ದಾರೆ. ಈಗಾಗಲೇ 2 ಪಂದ್ಯ ಆಡಿರುವ ಅವರು ಮುಂದಿನ ಯಾವ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲವಿದೆ. ಈ ನಡುವೆ, ಅವರು 4ನೇ ಟೆಸ್ಟ್‌ನಲ್ಲಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಲಾರ್ಡ್ಸ್ ಟೆಸ್ಟ್‌ನಿಂದ 4ನೇ ಟೆಸ್ಟ್ ನಡುವೆ 9 ದಿನ ಬಿಡುವು ಇದೆ. ಅಲ್ಲದೆ, 4ನೇ ಟೆಸ್ಟ್‌ನಲ್ಲಿ ಸರಣಿಯ ನಿರ್ಣಾಯಕ ಆಗಿರುವುದರಿಂದ ಬೂಮ್ರಾರನ್ನು ಆಡಿಸುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ.
ಕರುಣ್ vs ಸಾಯಿ ನಡುವೆ ಪೈಪೋಟಿ
ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರಳಿರುವ ಕರುಣ್ ನಾಯರ್ ಈ ಬಾರಿ ಸರಣಿಯಲ್ಲಿ ಮಿಂಚಿಲ್ಲ. ಆರಂಭಿಕ 3 ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತಾದರೂ ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ ಮುಂದಿನ 2 ಟೆಸ್ಟ್‌ಗಳಿಂದ ಅವರನ್ನು ಕೈಬಿಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅವರ ಸ್ಥಾನಕ್ಕೆ ಯುವ ಬ್ಯಾಟರ್ ಸಾಯಿ ಸುದರ್ಶನ್ ಆಯ್ಕೆಯಾಗುವ ನಿರೀಕ್ಷೆಯಿದೆ. 23 ವರ್ಷದ ಎಡಗೈ ಬ್ಯಾಟರ್ ಸುದರ್ಶನ್ ಆರಂಭಿಕ ಪಂದ್ಯದಲ್ಲಿ ಆಡಿದ್ದರೂ ಬಳಿಕ 2 ಟೆಸ್ಟ್‌ನಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
