ಹೈದರಾಬಾದ್(ಡಿ.06): ಬಾಂಗ್ಲಾದೇಶ ವಿರುದ್ಧದ ಸರಣಿ ಬಳಿಕ ಇದೀಗ ವೆಸ್ಟ್ ಇಂಡೀಸ್ ವಿರುದ್ದವೂ ಟೀಂ ಇಂಡಿಯಾ ಗೆಲುವಿನ ಓಟ ಮುಂದುವರಿದಿದೆ.  ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

ಇದನ್ನೂ ಓದಿ: ಮೊದಲ ಟಿ20; ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದ ವೆಸ್ಟ್ ಇಂಡೀಸ್!

ಗೆಲುವಿಗೆ 208 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಭಾರತ ದಿಟ್ಟ ಹೋರಾಟ ನೀಡಿತು.

ಇದನ್ನೂ ಓದಿ:ಸ್ಯಾಮ್ಸನ್ ಬದಲು ಪಂತ್‌ಗೆ ಸ್ಥಾನ; ಟೀಂ ಆಯ್ಕೆಗೆ ಫ್ಯಾನ್ಸ್ ಗರಂ!.

ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ತಲಾ ಅರ್ಧಶತಕ ದಾಖಲಿಸಿದರು. ರಾಹುಲ್ 40 ಎಸೆತದಲ್ಲಿ 5 ಬೌಂಡರಿ 4 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಔಟಾದರು. ರಾಹುಲ್ ಬಳಿಕ ರಿಷಬ್ ಪಂತ್ ಜೊತೆಗೂಡಿದ ಕೊಹ್ಲಿ ಇನಿಂಗ್ಸ್ ಮುಂದುವರಿಸಿದರು. ರಿಷಬ್ ಪಂತ್ 18 ರನ್ ಸಿಡಿಸಿ ಔಟಾದರು. ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಶ್ರೇಯಸ್ ಅಯ್ಯರ್ ವಿಕೆಟ್ ಪತನಗೊಂಡಿತು. ಈ ವೇಳೆ ಭಾರತದ ಗೆಲುವಿಗೆ 12 ಎಸೆತದಲ್ಲಿ 15 ರನ್ ಅವಶ್ಯಕತೆ ಇತ್ತು.

ಪಂದ್ಯದ ಕುತೂಹಲ ಹೆಚ್ಚಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಭಾರತೀಯ ಅಭಿಮಾನಿಗಳ ಆತಂಕ ದೂರ ಮಾಡಿದರು. 9 ಎಸೆತದಲ್ಲಿ ಗೆಲುವಿಗೆ 5 ರನ್ ಬೇಕಿತ್ತು. ಕೊಹ್ಲಿ ಸಿಕ್ಸರ್ ಸಿಡಿಸೋ ಮೂಲಕ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟರು. ಭಾರತ ಇನ್ನು 8 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ ಅಜೇಯ 94 ರನ್ ಸಿಡಿಸಿದರು. ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.