ನವದೆಹಲಿ(ಜ.02): ಹಿರಿಯ ಆಟಗಾರ ರೋಹಿತ್‌ ಶರ್ಮಾ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್‌ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ ಜ.7ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ರೋಹಿತ್‌ ಕಣಕ್ಕಿಳಿಯುವುದು ಖಚಿತವಾಗಿದೆ.

ಕಾಯಂ ನಾಯಕ ವಿರಾಟ್‌ ಕೊಹ್ಲಿ ಮೊದಲ ಟೆಸ್ಟ್‌ ಬಳಿಕ ಭಾರತಕ್ಕೆ ವಾಪಸಾದ ಮೇಲೆ ಅಜಿಂಕ್ಯ ರಹಾನೆ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. 2ನೇ ಟೆಸ್ಟ್‌ನಲ್ಲಿ ಚೇತೇಶ್ವರ್‌ ಪೂಜಾರಗೆ ಉಪನಾಯಕನ ಪಟ್ಟ ನೀಡಲಾಗಿತ್ತು. ಆದರೆ ತಂಡದ ಆಡಳಿತ ರೋಹಿತ್‌ ತಂಡ ಕೂಡಿಕೊಳ್ಳುತ್ತಿದ್ದಂತೆ ಅವರಿಗೇ ಉಪನಾಯಕನ ಪಟ್ಟ ನೀಡಬೇಕು ಎಂದು ಮೊದಲೇ ನಿರ್ಧರಿಸಿತ್ತು ಎಂದು ತಂಡದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಭಾರತ ಸೀಮಿತ ಓವರ್‌ ತಂಡಗಳ ಉಪನಾಯಕನಾಗಿ ಕಾರ‍್ಯನಿರ್ವಹಿಸುತ್ತಿರುವ ರೋಹಿತ್‌, ಐಪಿಎಲ್‌ ವೇಳೆ ಗಾಯಗೊಂಡ ಕಾರಣ ಆಸ್ಪ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಅವರ ಅನುಪಸ್ಥಿತಿಯಲ್ಲಿ ಕೆ.ಎಲ್‌.ರಾಹುಲ್‌ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು.

2021ರಲ್ಲಿ ಟೀಂ ಇಂಡಿಯಾ ಮುಂದಿದೆ ಬಿಗ್‌ ಚಾಲೆಂಜ್‌!

ಮುಂಬೈಕರ್‌ಗಳಿಗೆ ಅದೃಷ್ಟ!: ಸದ್ಯ ಭಾರತ ಟೆಸ್ಟ್‌ ತಂಡದ ನಾಯಕ ಹಾಗೂ ಉಪನಾಯಕ ಇಬ್ಬರೂ ಮುಂಬೈನವರೇ ಆದಂತಾಗಿದೆ. 2ನೇ ಟೆಸ್ಟ್‌ನಲ್ಲಿ ರಹಾನೆ ತಮ್ಮ ಬ್ಯಾಟಿಂಗ್‌ ಹಾಗೂ ನಾಯಕತ್ವ ಎರಡರಲ್ಲೂ ಗಮನ ಸೆಳೆದಿದ್ದರು. 5 ಬಾರಿ ಐಪಿಎಲ್‌ ಗೆದ್ದ ಏಕೈಕ ನಾಯಕ ಎನಿಸಿಕೊಂಡಿರುವ ರೋಹಿತ್‌ ತಂಡಕ್ಕೆ ಸೇರ್ಪಡೆಗೊಂಡು ಉಪನಾಯಕನ ಜವಾಬ್ದಾರಿ ಗಳಿಸಿರುವುದು, ಉಳಿದೆರಡು ಟೆಸ್ಟ್‌ಗಳಲ್ಲಿ ರಹಾನೆ ಮತ್ತಷ್ಟು ಪರಿಣಾಮಕಾರಿಯಾಗಿ ತಂಡವನ್ನು ಮುನ್ನಡೆಸಲು ನೆರವಾಗಲಿದೆ.