ಬೆಂಗಳೂರು(ಜ.01): ಕೊರೋನಾದಿಂದಾಗಿ 2020ರಲ್ಲಿ ಹೆಚ್ಚಾಗಿ ಮೈದಾನಕ್ಕಿಳಿಯದ ಭಾರತ ಕ್ರಿಕೆಟ್‌ ತಂಡ, 2021ರಲ್ಲಿ ನಿರಂತರವಾಗಿ ಸರಣಿಗಳನ್ನು ಆಡಲಿದೆ. ತಂಡಕ್ಕೆ ಒಂದಾದ ಮೇಲೊಂದು ಸವಾಲು ಎದುರಾಗಲಿದ್ದು, 2021ರ ಏಷ್ಯಾಕಪ್‌ ಹಾಗೂ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಗಳನ್ನು ಬಿಟ್ಟು ತಂಡ 16 ಏಕದಿನ, 23 ಟಿ20 ಹಾಗೂ 14 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದರ ಜೊತೆಗೆ ಏಪ್ರಿಲ್‌-ಮೇ ತಿಂಗಳಲ್ಲಿ ಐಪಿಎಲ್‌ ಟೂರ್ನಿಯಲ್ಲೂ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಭಾರತದ ವೇಳಾಪಟ್ಟಿಇಂತಿದೆ.

ಭಾರತ-ಆಸ್ಪ್ರೇಲಿಯಾ, ಜನವರಿ

ಸದ್ಯ ಚಾಲ್ತಿಯಲ್ಲಿರುವ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಟೆಸ್ಟ್‌ ಸರಣಿಯಲ್ಲಿ 2 ಟೆಸ್ಟ್‌ ಬಾಕಿ ಇದ್ದು, ಜ.7ರಿಂದ 3ನೇ ಹಾಗೂ ಜ.15ರಿಂದ 4ನೇ ಟೆಸ್ಟ್‌ ನಡೆಯಲಿದೆ.

ಭಾರತ-ಇಂಗ್ಲೆಂಡ್‌, ಫೆಬ್ರವರಿಯಿಂದ ಮಾರ್ಚ್

ಆಸ್ಪ್ರೇಲಿಯಾದಿಂದ ವಾಪಸಾಗುತ್ತಿದ್ದಂತೆ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ 4 ಟೆಸ್ಟ್‌, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಗಳನ್ನು ಆಡಲಿದೆ.

ಐಪಿಎಲ್‌ 2021, ಏಪ್ರಿಲ್‌ನಿಂದ ಮೇ

ಕೊರೋನಾದಿಂದಾಗಿ 2020ರ ಐಪಿಎಲ್‌ ಯುಎಇಗೆ ಸ್ಥಳಾಂತರಗೊಂಡಿತ್ತು. 2021ರ ಆವೃತ್ತಿ ಭಾರತದಲ್ಲೇ ನಡೆಯಲಿದ್ದು, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಆಯೋಜನೆಗೊಳ್ಳಲಿದೆ.

ಭಾರತ-ಲಂಕಾ ಹಾಗೂ ಏಷ್ಯಾಕಪ್‌, ಜೂನ್‌ನಿಂದ ಜುಲೈ

ಐಪಿಎಲ್‌ ಮುಗಿದ ಮೇಲೆ ಭಾರತ ತಂಡ ಶ್ರೀಲಂಕಾಕ್ಕೆ ತೆರಳಲಿದ್ದು 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಸರಣಿ ಬಳಿಕ ತಂಡ ಲಂಕಾದಲ್ಲೇ ಉಳಿಯಲಿದ್ದು, ಏಷ್ಯಾಕಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಸೆಣಸಲಿದೆ.

ಭಾರತ-ಜಿಂಬಾಬ್ವೆ, ಜುಲೈ

ಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆಗೆ ತೆರಳಲಿದ್ದು, ಸೀಮಿತ ಓವರ್‌ ಸರಣಿಗಳನ್ನು ಆಡಲಿದೆ. ಕೊರೋನಾದಿಂದಾಗಿ ಜಿಂಬಾಬ್ವೆ ಪ್ರವಾಸ 2021ಕ್ಕೆ ಮುಂದೂಡಲ್ಪಟ್ಟಿತ್ತು.

ಭಾರತ-ಇಂಗ್ಲೆಂಡ್‌, ಆಗಸ್ಟ್‌ನಿಂದ ಸೆಪ್ಟೆಂಬರ್‌

ಜಿಂಬಾಬ್ವೆಯಿಂದ ಹಿಂದಿರುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು, ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ 5 ಟೆಸ್ಟ್‌ಗಳನ್ನು ಆಡಲಿದೆ. ಈ ಸರಣಿ ಮುಂದಿನ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ.

ಭಾರತ-ದ.ಆಫ್ರಿಕಾ, ಅಕ್ಟೋಬರ್‌

ಇಂಗ್ಲೆಂಡ್‌ನಿಂದ ವಾಪಸ್‌ ಬಂದ ಮೇಲೆ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಆತಿಥ್ಯ ವಸಲಿದೆ. ಟಿ20 ವಿಶ್ವಕಪ್‌ಗೂ ಮುನ್ನ ಮಹತ್ವದ ಸರಣಿಯನ್ನು ಆಡಲಿದೆ.

ಐಸಿಸಿ ಟಿ20 ವಿಶ್ವಕಪ್‌, ಅಕ್ಟೋಬರ್‌ನಿಂದ ನವೆಂಬರ್‌

2020ರ ಟಿ20 ವಿಶ್ವಕಪ್‌ 2021ಕ್ಕೆ ಮುಂದೂಡಲ್ಪಟ್ಟಿದೆ. ಟೂರ್ನಿ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳಲಿದ್ದು, ಭಾರತ 2ನೇ ಬಾರಿಗೆ ಚಾಂಪಿಯನ್‌ ಆಗುವ ಗುರಿ ಹೊಂದಿದೆ.

ಭಾರತ-ನ್ಯೂಜಿಲೆಂಡ್‌, ನವೆಂಬರ್‌ನಿಂದ ಡಿಸೆಂಬರ್‌

ಟಿ20 ವಿಶ್ವಕಪ್‌ ಮುಗಿದ ಬೆನ್ನಲ್ಲೇ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ 2 ಟೆಸ್ಟ್‌ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಸೆಣಸಲಿದೆ.

ಭಾರತ-ದ.ಆಫ್ರಿಕಾ, ಡಿಸೆಂಬರ್‌

ಡಿಸೆಂಬರ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಟೆಸ್ಟ್‌ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.