ಕೋಲ್ಕತಾ(ನ.22): ಭಾರತ-ಬಾಂಗ್ಲಾ​ದೇಶ ನಡು​ವಿನ ಐತಿ​ಹಾ​ಸಿಕ ಹಗ​ಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ. ಮೊದಲ ಬಾರಿಗೆ ಎರಡೂ ತಂಡ​ಗಳು ಪಿಂಕ್‌ ಬಾಲ್‌ನಲ್ಲಿ ಆಡ​ಲಿದ್ದು, ಅಭಿ​ಮಾ​ನಿ​ಗ​ಳಲ್ಲಿ ನಿರೀಕ್ಷೆ ಹೆಚ್ಚಾ​ಗಿದೆ.

ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಮಾನ್ಯತೆ ನೀಡಿದ 7 ವರ್ಷಗಳ ಬಳಿಕ ಕೊನೆಗೂ ಹಗಲು-ರಾತ್ರಿ ಟೆಸ್ಟ್‌ ಆಡಲು ಬಿಸಿ​ಸಿ​ಐ ಒಪ್ಪಿ​ಕೊಂಡಿದ್ದು, ಈ ಬೆಳ​ವ​ಣಿ​ಗೆಗೆ ನೂತನ ಅಧ್ಯಕ್ಷ ಸೌರವ್‌ ಗಂಗೂ​ಲಿಯೇ ಕಾರಣ. ಗಂಗೂ​ಲಿ ಭಾರತ ತಂಡದ ಆಟ​ಗಾ​ರ​ರ ಮನ​ವೊ​ಲಿ​ಸಿ​ದ್ದ​ಲ್ಲದೆ, ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡ​ಳಿ (ಬಿ​ಸಿ​ಬಿ)ಯನ್ನೂ ಹಗ​ಲು-ರಾತ್ರಿ ಪಂದ್ಯವಾ​ಡಲು ಒಪ್ಪಿ​ಸಿ​ದರು.

ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆಯಲು ಕೊಹ್ಲಿ ರೆಡಿ..!

ಪಂದ್ಯ​ಕ್ಕಾಗಿ ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿ​ಎಬಿ) ಸಕಲ ಸಿದ್ಧತೆ ಮಾಡಿ​ಕೊಂಡಿದ್ದು, ಕೋಲ್ಕತಾ ನಗರ ಗುಲಾಬಿ ಬಣ್ಣದಿಂದ ಕಂಗೊ​ಳಿ​ಸು​ತ್ತಿದೆ. ಭಾರ​ತದ ಕ್ರಿಕೆಟ್‌ ಕಾಶಿ ಈಡನ್‌ ಗಾರ್ಡನ್ಸ್‌ಗೆ ಹೊಸ ರೂಪ ನೀಡಲಾಗಿದ್ದು, ಮೊದಲ 4 ದಿನ​ಗಳ ಟಿಕೆಟ್‌ಗಳು ಸಂಪೂ​ರ್ಣ​ವಾಗಿ ಮಾರಾಟವಾಗಿವೆ ಎಂದು ಗಂಗೂಲಿ ತಿಳಿ​ಸಿ​ದ್ದಾರೆ. ಪಂದ್ಯ​ಕ್ಕಾಗಿ ವಿಶೇಷ ಮಾಸ್ಕಟ್‌ಗಳನ್ನು ಪರಿ​ಚ​ಯಿ​ಸ​ಲಾ​ಗಿದೆ. ಭಾರ​ತೀಯ ಸೇನೆಯ ಪ್ಯಾರಾ ಟ್ರೂಪರ್‌ಗಳು ಆಗಸದಿಂದ ಮೈದಾ​ನಕ್ಕೆ ಜಿಗಿದ್ದು ಪಂದ್ಯದ ಚೆಂಡನ್ನು ನಾಯ​ಕ​ರಿಗೆ ಹಸ್ತಾಂತ​ರಿ​ಸ​ಲಿ​ದ್ದಾರೆ.

ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸುತ್ತಾ..?

ದಿಗ್ಗ​ಜರ ದಂಡು: ಕ್ರೀಡಾ ಹಾಗೂ ರಾಜ​ಕೀಯ ನಾಯ​ಕರ ದಂಡೇ ಪಂದ್ಯ ವೀಕ್ಷಣೆಗೆ ಆಗ​ಮಿ​ಸ​ಲಿದೆ. ಭಾರ​ತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಂಗಾಳ ರಾಜ್ಯ​ಪಾ​ಲ ಸಹ ಆಗ​ಮಿಸುವ ನಿರೀಕ್ಷೆ ಇದೆ. ಬಾಂಗ್ಲಾ​ದೇ​ಶದ ಪ್ರಧಾನ ಮಂತ್ರಿ ಶೇಖ್‌ ಹಸೀನಾ, ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಪಂದ್ಯ ಆರಂಭಕ್ಕೂ ಮುನ್ನ ಸಂಪ್ರದಾಯ​ದಂತೆ ಗಂಟೆ ಬಾರಿ​ಸ​ಲಿ​ದ್ದಾರೆ. ಭಾರತ ಹಾಗೂ ಬಾಂಗ್ಲಾ​ದೇಶ ನಡುವೆ 2000ರಲ್ಲಿ ನಡೆ​ದಿದ್ದ ಚೊಚ್ಚಲ ಟೆಸ್ಟ್‌ನಲ್ಲಿ ಆಡಿದ್ದ ಉಭಯ ತಂಡ​ಗಳ ಆಟ​ಗಾ​ರ​ರನ್ನು ಆಹ್ವಾ​ನಿ​ಸ​ಲಾ​ಗಿದ್ದು, ಅವ​ರನ್ನು ಸನ್ಮಾ​ನಿ​ಸ​ಲಾ​ಗು​ತ್ತದೆ. ಭಾರ​ತದ ಕೆಲ ಪ್ರಮುಖ ಒಲಿಂಪಿಕ್‌ ಪದಕ ವಿಜೇ​ತ​ರಿಗೂ ಸನ್ಮಾನ ಕಾರ್ಯ ಹಮ್ಮಿ​ಕೊ​ಳ್ಳ​ಲಾ​ಗಿದೆ.
ರೋಚಕ ಕ್ರಿಕೆಟ್‌ ಜತೆ ಹಲವು ಸಾಂಸ್ಕೃ​ತಿಕ ಕಾರ್ಯ​ಕ್ರ​ಮ​ಗ​ಳೂ ಇರ​ಲಿವೆ ಎಂದು ಸಿಎಬಿ ಮಾಹಿತಿ ನೀಡಿದೆ.

ಪಿಂಕ್‌ ಬಾಲ್‌ ಬಳಕೆ ಶುರು​ವಾ​ಗಿದ್ದು ಹೇಗೆ?

ಟೆಸ್ಟ್‌ ಕ್ರಿಕೆಟ್‌ ಅನ್ನು ಮತ್ತಷ್ಟು ಜನ​ಪ್ರಿ​ಯ​ಗೊ​ಳಿ​ಸಲು ಹಗ​ಲು-ರಾತ್ರಿ ಪಂದ್ಯ​ವನ್ನು ಆಯೋ​ಜಿ​ಸಲು ನಿರ್ಧ​ರಿ​ಸಿದಾಗ ಕೆಂಪು ಚೆಂಡಿನ ಬಳಕೆ ಕಷ್ಟ ಎನ್ನುವ ಅಭಿ​ಪ್ರಾ​ಯ​ಗಳು ಮೂಡಿ​ದ​ವು. ಹೀಗಾಗಿ ಚೆಂಡು ತಯಾ​ರಕ ಸಂಸ್ಥೆಗಳು ಹಳದಿ, ಕಿತ್ತಳೆ ಬಣ್ಣದ ಚೆಂಡು​ಗ​ಳನ್ನು ಪರಿ​ಚ​ಯಿ​ಸಿ​ದವು. ಆದರೆ ಪಿಚ್‌ ಕಂದು ಬಣ್ಣ​ವಿ​ರುವ ಕಾರಣ, ಚೆಂಡು ಸರಿ​ಯಾಗಿ ಕಾಣು​ವು​ದಿಲ್ಲ ಎಂದು ಬ್ಯಾಟ್ಸ್‌ಮನ್‌ಗಳು ಹೇಳಿದ್ದರಿಂದ, ಕೊನೆಗೆ ಗುಲಾಬಿ (ಪಿಂಕ್‌) ಬಣ್ಣದ ಚೆಂಡನ್ನು ಆಯ್ಕೆ ಮಾಡಿ​ಕೊ​ಳ್ಳ​ಲಾ​ಯಿ​ತು. ಈ ಚೆಂಡಿ​ನ ಮೇಲಿನ ಸೀಮ್‌ (ದಾರ) ಮೊದಲು ಹಸಿರು ಬಣ್ಣ​ದ​ಲ್ಲಿತ್ತು. ಬಳಿಕ ಬಿಳಿಗೆ ಬದ​ಲಿ​ಸ​ಲಾ​ಯಿತು. ಆಟ​ಗಾ​ರರ ಸಲ​ಹೆ ಮೇರೆಗೆ ಈಗ ಕಪ್ಪು ಬಣ್ಣದ ದಾರವನ್ನು ಬಳಕೆ ಮಾಡ​ಲಾ​ಗು​ತ್ತಿದೆ.

ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ ನಡೆ​ದಿದ್ದ 2015ರಲ್ಲಿ

ಗಯಾನ ಹಾಗೂ ಟ್ರಿನಿ​ಡಾಡ್‌ ನಡುವೆ ಮೊದಲ ಹಗ​ಲು-ರಾತ್ರಿ ಪ್ರಥಮ ದರ್ಜೆ ಪಂದ್ಯ ನಡೆ​ದಿತ್ತು. 2010ರಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇ​ಸಿ​ಬಿ) ತನ್ನ ದೇಸಿ ಋುತುವನ್ನು ಅಬು​ಧಾ​ಬಿ​ಯಲ್ಲಿ ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ನಡೆ​ಸಿತ್ತು. ಮೊದಲ ಅಂತಾ​ರಾ​ಷ್ಟ್ರೀಯ ಹಗ​ಲು​-ರಾತ್ರಿ ಟೆಸ್ಟ್‌ ನಡೆದಿದ್ದು 2015ರ ನವೆಂಬರ್‌ನಲ್ಲಿ. ಆಸ್ಪ್ರೇ​ಲಿಯಾ ಹಾಗೂ ನ್ಯೂಜಿ​ಲೆಂಡ್‌ ನಡುವೆ ಚೊಚ್ಚಲ ಪಿಂಕ್‌ ಬಾಲ್‌ ಟೆಸ್ಟ್‌ ನಡೆ​ದಿತ್ತು. ಆ ಪಂದ್ಯ​ವನ್ನು ಆಸ್ಪ್ರೇ​ಲಿಯಾ 3 ವಿಕೆಟ್‌ಗಳಿಂದ ಗೆದ್ದು​ಕೊಂಡಿತ್ತು. ಈ ವರೆಗೂ ಒಟ್ಟು 11 ಪಂದ್ಯ​ಗಳು ನಡೆದಿವೆ. ಯಾವ ಪಂದ್ಯವೂ ಡ್ರಾಗೊಂಡಿಲ್ಲ. ಆಸ್ಪ್ರೇ​ಲಿಯಾ ಅತಿ​ಹೆಚ್ಚು ಎಂದರೆ 5 ಹಗ​ಲು-ರಾತ್ರಿ ಟೆಸ್ಟ್‌ಗಳನ್ನು ಆಡಿದೆ. 5ರಲ್ಲೂ ಗೆಲುವು ಸಾಧಿ​ಸಿದೆ. ಭಾರತ, ಬಾಂಗ್ಲಾ
ಹೊರತು ಪಡಿಸಿ ಟೆಸ್ಟ್‌ ಆಡುವ ಎಲ್ಲಾ ಪ್ರಮುಖ ರಾಷ್ಟ್ರ​ಗಳು ಈಗಾ​ಗಲೇ ಹಗ​ಲು-ರಾತ್ರಿ ಪಂದ್ಯ​ವ​ನ್ನಾ​ಡಿವೆ. 2019ರ ಡಿಸೆಂಬರ್‌ನಲ್ಲಿ ಆಸ್ಪ್ರೇ​ಲಿಯಾ ತಂಡ ಪಾಕಿ​ಸ್ತಾನ ಹಾಗೂ ನ್ಯೂಜಿ​ಲೆಂಡ್‌ ವಿರುದ್ಧ ಪಿಂಕ್‌ ಬಾಲ್‌ ಪಂದ್ಯ​ವನ್ನು ಆಡ​ಲಿದೆ.

ಇಷ್ಟು ದಿನ ಭಾರತ ಏಕೆ ಒಪ್ಪಿ​ರ​ಲಿ​ಲ್ಲ?

ಭಾರ​ತೀ​ಯರು ಪಿಂಕ್‌ ಬಾಲ್‌ ಟೆಸ್ಟ್‌ ಅನ್ನು ವಿರೋ​ಧಿ​ಸಲು ಹಲವು ಕಾರ​ಣ​ಗ​ಳಿವೆ. ಚೆಂಡಿನ ಗೋಚ​ರತೆಯಲ್ಲಿ ಸಮಸ್ಯೆಗಳಿ​ದ್ದವು. 2016ರ ದುಲೀಪ್‌ ಟ್ರೋಫಿ​ಯಲ್ಲಿ ಆಡಿದ್ದ ಪೂಜಾರ, ಮಯಾಂಕ್‌ ಸೇರಿ​ದಂತೆ ಅನೇ​ಕ ಆಟ​ಗಾ​ರರು ಧನಾ​ತ್ಮಕ ಪ್ರತಿ​ಕ್ರಿಯೆ ನೀಡಿ​ರ​ಲಿಲ್ಲ. ಚೆಂಡು ವೇಗಿ​ಗ​ಳಿಗೆ ಯಾವುದೇ ರೀತಿ​ಯಲ್ಲಿ ಸಹ​ಕಾರ ಕೊಟ್ಟಿ​ರ​ಲಿಲ್ಲ. ಆರಂಭಿಕ 20 ಓವರ್‌ಗಳ ಬಳಿಕ ಚೆಂಡಿನ ಆಕಾರ ಗಣ​ನೀಯ ಪ್ರಮಾಣದಲ್ಲಿ ಬದ​ಲಾ​ಗಿತ್ತು. ರಿವರ್ಸ್‌ ಸ್ವಿಂಗ್‌ ಸಾಧ್ಯ​ವಾ​ಗಿ​ರ​ಲಿಲ್ಲ. ಚೆಂಡು ಬಣ್ಣ ಬಿಡಲಿದ್ದು, ಬೆಳ​ಕಿ​ನ​ಲ್ಲಿ ಸರಿ​ಯಾಗಿ ಕಾಣು​ವು​ದಿಲ್ಲ ಎಂದು ಆಟ​ಗಾ​ರರು ತಿಳಿ​ಸಿ​ದ್ದರು. ಹೀಗಾಗಿ ಬಿಸಿ​ಸಿಐ ಹಗ​ಲು​-ರಾತ್ರಿ ಪಂದ್ಯಕ್ಕೆ ವಿರೋಧ ವ್ಯಕ್ತ​ಪ​ಡಿ​ಸಿತ್ತು. ಕಳೆದ ವರ್ಷ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ
ಕ್ರಿಕೆಟ್‌ ಆಸ್ಪ್ರೇ​ಲಿ​ಯಾದ ಮನವಿಯನ್ನು ಬಿಸಿ​ಸಿಐ ಒಪ್ಪಿ​ರ​ಲಿಲ್ಲ.

ಭಾರ​ತ​ದಲ್ಲಿ ಪಿಂಕ್‌ ಬಾಲ್‌ ಟೆಸ್ಟ್‌ಗೆ ದಾದಾ ಸೂತ್ರ​ಧಾರ!

ಭಾರ​ತ​ದಲ್ಲಿ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ ಆಯೋ​ಜಿ​ಸು​ವಲ್ಲಿ ಗಂಗೂಲಿ ಪಾತ್ರ ಮಹ​ತ್ವ​ದೆ​ನಿ​ಸಿದೆ. 2016ರಲ್ಲಿ ಅವರು ಬಂಗಾಳ ಕ್ರಿಕೆಟ್‌ ಸಂಸ್ಥೆ (ಸಿ​ಎ​ಬಿ) ಅಧ್ಯಕ್ಷರಾಗಿ​ದ್ದಾಗ ಮೋಹನ್‌ ಬಗಾನ್‌ ಹಾಗೂ ಭೋವಾ​ನಿ​ಪೋರ್‌ ತಂಡ​ಗಳ ನಡು​ವಿ​ನ ಸಿಎಬಿ ಸೂಪರ್‌ ಲೀಗ್‌ ಫೈನಲ್‌ ಪಂದ್ಯಕ್ಕೆ ಪಿಂಕ್‌ ಬಾಲ್‌ ಬಳಕೆಯಾಗಿತ್ತು. ಈ ಪಂದ್ಯ​ದಲ್ಲಿ ಭಾರತ ತಂಡ​ದ ಆಟ​ಗಾ​ರ​ರಾದ ವೃದ್ಧಿ​ಮಾನ್‌ ಸಾಹ ಹಾಗೂ ಮೊಹ​ಮದ್‌ ಶಮಿ ಆಡಿ​ದ್ದರು. ಈ ಇಬ್ಬರೂ ಭಾರತ ತಂಡದ ಚೊಚ್ಚಲ ಪಿಂಕ್‌ ಬಾಲ್‌ ಪಂದ್ಯ​ದಲ್ಲೂ ಆಡಲಿ​ದ್ದಾರೆ. ಅದೇ ವರ್ಷ ಬಿಸಿ​ಸಿಐ, ದುಲೀಪ್‌ ಟ್ರೋಫಿ​ಯನ್ನು ಹಗ​ಲು-ರಾತ್ರಿ ಮಾದ​ರಿ​ಯಲ್ಲಿ ನಡೆ​ಸಿತ್ತು. ಗಂಗೂಲಿ ಬಿಸಿ​ಸಿಐ ಕ್ರಿಕೆಟ್‌ ಸಮಿತಿ ಮುಖ್ಯಸ್ಥರಾಗಿ​ದ್ದಾಗ ಈ ಪ್ರಸ್ತಾಪ ಮುಂದಿ​ಟ್ಟಿ​ದ್ದರು. ಪ್ರಸಾರ ಹಕ್ಕು
ಹೊಂದಿ​ರುವ ವಾಹಿನಿ ನಿರಾ​ಸಕ್ತಿ ತೋರಿದ್ದರಿಂದ ಹಾಗೂ ಚೆಂಡಿ​ನ ಗುಣ​ಮ​ಟ್ಟದ ಬಗ್ಗೆ ಆಟ​ಗಾ​ರರು ಅಸ​ಮಾ​ಧಾನ ತೋರಿದ್ದರಿಂದ ಈ ವರ್ಷ ಪಿಂಕ್‌ ಬಾಲ್‌ ಪಂದ್ಯ​ಗ​ಳನ್ನು ಕೈಬಿ​ಡ​ಲಾ​ಯಿ​ತು. ಸದ್ಯ ಭಾರತ ತಂಡ​ದ​ಲ್ಲಿ​ರುವ ಮಯಾಂಕ್‌ ಅಗರ್‌ವಾಲ್‌, ಆರ್‌.ಅ​ಶ್ವಿನ್‌, ಕುಲ್ದೀಪ್‌ ಯಾದವ್‌, ಇಶಾಂತ್‌ ಶರ್ಮಾ ಪಿಂಕ್‌ ಬಾಲ್‌ನಲ್ಲಿ ಆಡಿದ ಅನು​ಭವ ಹೊಂದಿ​ದ್ದಾರೆ.

ಕೋಲ್ಕತಾದಲ್ಲಿ ಪ್ರತಿ ವರ್ಷ ಹಗ​ಲು-ರಾತ್ರಿ ಟೆಸ್ಟ್‌ ?

ಕ್ರಿಕೆಟ್‌ ಆಸ್ಪ್ರೇ​ಲಿಯಾ ಆಯೋ​ಜಿ​ಸು​ವಂತೆ ಭಾರ​ತ​ದಲ್ಲೂ ಪ್ರತಿ ವರ್ಷ ಹಗ​ಲು-ರಾತ್ರಿ ಟೆಸ್ಟ್‌ ನಡೆ​ಸ​ಬೇಕು ಎನ್ನು​ವುದು ಬಿಸಿ​ಸಿಐ ಅಧ್ಯಕ್ಷ ಗಂಗೂಲಿ ಕನ​ಸಾ​ಗಿದ್ದು, ಕೋಲ್ಕತಾವನ್ನೇ ಆತಿಥ್ಯ ತಾಣವಾಗಿ ನಿಗದಿಪಡಿ​ಸಲು ಮುಂದಾ​ಗಿದ್ದಾರೆ. ಆಸ್ಪ್ರೇ​ಲಿಯಾ ತಂಡ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿ​ಸಲು ಪಿಂಕ್‌ ಬಾಲ್‌ ಪಂದ್ಯ​ವನ್ನು ಬಳ​ಸಿ​ಕೊ​ಳ್ಳ​ಲಿದೆ. ಅದೇ ರೀತಿ ಯಾವು​ದಾ​ದರೂ ಸದುದ್ದೇಶದೊಂದಿಗೆ ಪಂದ್ಯ ನಡೆ​ಸಲು ಚಿಂತ​ನೆ ಮಾಡ​ಲಾ​ಗಿದೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿವೆ.