ಪುಣೆ(ಮಾ.24): ಪಾಂಡ್ಯ ಕುಟುಂಬಕ್ಕೆ ಮಾರ್ಚ್‌ 23, 2021 ಒಂದು ರೀತಿಯ ವಿಶೇಷ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಕೃನಾಲ್‌ ಪಾಂಡ್ಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲಿ 31 ಎಸೆತಗಳಲ್ಲಿ ಅಜೇಯ 58 ರನ್ ಹಾಗೂ ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಕಬಳಿಸುವ ಮೂಲಕ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿದ್ದರು.

ತಮ್ಮ ಚೊಚ್ಚಲ ಪಂದ್ಯದ ವಿಶೇಷ ಅರ್ಧಶತಕವನ್ನು ಇತ್ತೀಚೆಗಷ್ಟೇ ಕೊನೆಯುಸಿರೆಳೆದ ತಮ್ಮ ತಂದೆ ದಿವ್ಯಾನ್ಶು ಪಾಂಡ್ಯಗೆ ಅರ್ಪಿಸಿದ್ದಾರೆ. ತಂದೆಯ ಸಾವಿನ ಬಳಿಕ ಮೊದಲ ಅಂತರಾರಾಷ್ಟ್ರೀಯ ಪಂದ್ಯವನ್ನಾಡಿದ ಕೃನಾಲ್‌ ತಮ್ಮ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಬ್ಯಾಟಿಂಗ್‌ ಮುಗಿಸಿ ಸಂದರ್ಶನಕ್ಕೆ ಬಂದ ಕೃನಾಲ್‌ ಪಾಂಡ್ಯ ಒಂದು ಕ್ಷಣ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡದೇ ತಮ್ಮ ಹಾರ್ದಿಕ್‌ ಪಾಂಡ್ಯರನ್ನು ತಬ್ಬಿಕೊಂಡು ತಂದೆಯನ್ನು ನೆನೆದು ಕಣ್ಣೀರಿಟ್ಟರು. 

ಏಕದಿನ ಕ್ರಿಕೆಟ್‌ಗೆ ಅದ್ದೂರಿಯಾಗಿ ಪಾದಾರ್ಪಣೆ ಮಾಡಿ ಮರುದಿನವೇ ಅಂದರೆ ಇಂದು(ಮಾ.24) ಕೃನಾಲ್‌ ಪಾಂಡ್ಯ 30ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕೃನಾಲ್‌ ಹುಟ್ಟುಹಬ್ಬದ ಈ ಶುಭಸಂದರ್ಭದಲ್ಲಿ ಸಹೋದರ ಹಾರ್ದಿಕ್‌ ಪಾಂಡ್ಯ ವಿನೂತನವಾಗಿ ಹಾಗೆಯೇ ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಪ್ರಸಿದ್ಧ್ ಕೃಷ್ಣ, ಕೃನಾಲ್‌ ಪಾಂಡ್ಯ ಡೆಬ್ಯೂ

ಈ ಪಯಣದಲ್ಲಿ ನಾವಿಬ್ಬರು ಆರಂಭದಿಂದಲೂ ಜತೆಗೆ ಹೆಜ್ಜೆಹಾಕಿದ್ದೇವೆ. ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ. ನಿನ್ನನ್ನು ಪಡೆದ ನಾನೇ ಅದೃಷ್ಟವಂತ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ ಎಂದು ಹಾರ್ದಿಕ್‌ ಪಾಂಡ್ಯ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. 

ಹಾರ್ದಿಕ್‌ ಪಾಂಡ್ಯ ಮಾತ್ರವಲ್ಲದೇ ಹಲವು ಹಿರಿ-ಕಿರಿಯ ಆಟಗಾರರು ಬರೋಡ ಮೂಲದ ಕ್ರಿಕೆಟಿಗನಿಗೆ ಟ್ವೀಟ್‌ ಮೂಲಕ ಹುಟ್ಟುಹಬ್ಬದ ಶುಭಹಾರೈಸಿದ್ದಾರೆ.