Vijay Hazare Trophy: ಫೈನಲ್‌ಗೆ ಲಗ್ಗೆಯಿಟ್ಟ ತಮಿಳುನಾಡು- ಹಿಮಾಚಲ ಪ್ರದೇಶ

* ವಿಜಯ್ ಹಜಾರೆ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ ತಮಿಳುನಾಡು, ಹಿಮಾಚಲ ಪ್ರದೇಶ

* ಮೊದಲ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿದ ಹಿಮಾಚಲ ಪ್ರದೇಶ

*  ತಮಿಳುನಾಡು ಕ್ರಿಕೆಟ್ ತಂಡವು 6ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ

Tamil Nadu and Himachal Pradesh enter Vijay Hazare Trophy final 2021 kvn

ಜೈಪುರ(ಡಿ.25): ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ (Vijay Hazare Trophy) 5 ಬಾರಿಯ ಚಾಂಪಿಯನ್‌ ತಮಿಳುನಾಡು ಹಾಗೂ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡಗಳು ಫೈನಲ್‌ ಪ್ರವೇಶಿಸಿವೆ. ಭಾನುವಾರ(ಡಿ.26) ನಡೆಯಲಿರುವ ಫೈನಲ್‌ನಲ್ಲಿ ಈ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ವಿಜಯ್ ಶಂಕರ್ ನೇತೃತ್ವದ ತಮಿಳುನಾಡು ಕ್ರಿಕೆಟ್ ತಂಡವು (Tamil Nadu Cricket Team) 6ನೇ ಟ್ರೋಫಿ ಮೇಲೆ ಕಣ್ಣಿಟ್ಟರೆ, ಯಾವುದೇ ಮಾದರಿಯ ರಾಷ್ಟ್ರೀಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಹಿಮಾಚಲ ಪ್ರದೇಶ (Himachal Pradesh Cricket Team) ಚೊಚ್ಚಲ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಸರ್ವಿಸಸ್‌ ವಿರುದ್ಧ ಹಿಮಾಚಲ ಪ್ರದೇಶ 77 ರನ್‌ ಗೆಲುವು ಸಾಧಿಸಿತು. ಹಿಮಾಚಲ ಪ್ರದೇಶದ ನಾಯಕ ರಿಷಿ ಧವನ್ (Rishi Dhawan) ಹಾಗೂ ಆಕಾಶ್ ವಶಿಷ್ಠ(Akash Vasisht) ಆಕರ್ಷಕ ಆಲ್ರೌಂಡ್ ಪ್ರದರ್ಶನದ ಮೂಲಕ ಮೊದಲ ಬಾರಿಗೆ ತಂಡವನ್ನು ಫೈನಲ್‌ಗೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಈ ಜೋಡಿ ಆರನೇ ವಿಕೆಟ್‌ಗೆ 83 ರನ್‌ಗಳ ಜತೆಯಾಟವಾಡುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಹಿಮಾಚಲ ತಂಡಕ್ಕೆ ಆಸರೆಯಾದರು. ರಿಷಿ ಧವನ್ 84 ರನ್‌ ಬಾರಿಸಿದರೆ, ಆಕಾಶ್‌ ವಶಿಷ್ಠ ಅಜೇಯ 45 ರನ್ ಬಾರಿಸಿದರು. ಅಂತಿಮವಾಗಿ ಹಿಮಾಚಲ 6 ವಿಕೆಟ್‌ ನಷ್ಟಕ್ಕೆ 281 ರನ್‌ ಗಳಿಸಿತು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ಸರ್ವಿಸಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ತಂಡ 36 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್‌ ರವಿ ಚೌಹ್ಹಾಣ್(45) ಹಾಗೂ ನಾಯಕ ರಜತ್ ಪಲಿವಾಲ್(55) ಹಿಮಾಚಲ ಪ್ರದೇಶ ಬೌಲರ್‌ಗಳೆದುರು ಕೆಲಕಾಲ ಪ್ರತಿರೋಧ ತೋರಿದರು. ಆದರೆ ನಿರಂತರ ವಿಕೆಟ್ ಕಳೆದುಕೊಂಡ ಪರಿಣಾಮ, 46.1 ಓವರ್‌ಗಳಲ್ಲಿ 204 ರನ್‌ ಬಾರಿಸಿ ಸರ್ವಪತನ ಕಂಡಿತು.

Boxing Day Test : ಡಿ. 26ಕ್ಕೆ ಆರಂಭವಾಗುವ ಪಂದ್ಯಕ್ಕೆ ಬಾಕ್ಸಿಂಗ್ ಡೇ ಟೆಸ್ಟ್ ಅಂತಾ ಹೇಳೋದ್ಯಾಕೆ?

ಹಿಮಾಚಲ ತಂಡದ ಪರ ನಾಯಕ ರಿಷಿ ಧವನ್ 27 ರನ್‌ ನೀಡಿ 4 ವಿಕೆಟ್ ಪಡೆದರೆ, ಆಕಾಶ್ ವಶಿಷ್ಠ ಹಾಗೂ ಸಿದ್ದಾರ್ಥ್ ಶರ್ಮಾ ತಲಾ 2 ವಿಕೆಟ್ ಪಡೆದರು. ಇನ್ನು ಪಂಕಜ್ ಜೈಸ್ವಾಲ್ ಒಂದು ಬಲಿ ಪಡೆದರು. 

2ನೇ ಸೆಮೀಸ್‌ನಲ್ಲಿ ಸೌರಾಷ್ಟ್ರ (Saurashtra) ವಿರುದ್ಧ ತಮಿಳುನಾಡು 2 ವಿಕೆಟ್‌ ರೋಚಕ ಜಯ ಗಳಿಸಿತು. ಶೆಲ್ಡನ್‌ ಜಾಕ್ಸನ್‌ (Sheldon Jackson) (134)ರ ಆಕರ್ಷಕ ಶತಕದ ನೆರವಿನಿಂದ ಸೌರಾಷ್ಟ್ರ 8 ವಿಕೆಟ್‌ ಕಳೆದುಕೊಂಡು 310 ರನ್‌ ಕಲೆ ಹಾಕಿದರೆ, ಬೃಹತ್‌ ಗುರಿ ಬೆನ್ನತ್ತಿದ ತಮಿಳುನಾಡುಗೆ ಬಾಬಾ ಅಪರಾಜಿತ್‌ (Baba Aparajith) (122) ಶತಕ ಬಾರಿಸಿ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಬಾಬಾ ಇಂದ್ರಜಿತ್(50) ಹಾಗೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್(70) ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದರು. ಅಂತಿಮ ಎಸೆತದಲ್ಲಿ ಬೇಕಿದ್ದ ಒಂದು ರನ್‌ ಕದ್ದ ತಮಿಳುನಾಡು ಫೈನಲ್‌ಗೇರುವಲ್ಲಿ ಯಶಸ್ವಿಯಾಯಿತು. ಯುವ ವೇಗಿ ಚೇತನ್ ಸಕಾರಿಯಾ (Chetan Sakariya) 62 ರನ್ ನೀಡಿ 5 ವಿಕೆಟ್ ಕಬಳಿಸಿ ಗಮನ ಸೆಳೆದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Latest Videos
Follow Us:
Download App:
  • android
  • ios