ಆಫ್ಘಾನಿಸ್ತಾನ ತಂಡವು, ಇದೀಗ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾದೇಶ ಎದುರು 8 ರನ್ ಅಂತರದ ರೋಚಕ ಜಯ ಸಾಧಿಸುವವುದರ ಜತೆಗೆ ನಾಲ್ಕನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ ತಂಡಗಳು ಸೆಮಿಫೈನಲ್‌ ಟಿಕೆಟ್ ಖಚಿತಪಡಿಸಿಕೊಂಡಿದ್ದವು. ಇದೀಗ ಈ ಮೂರು ತಂಡಗಳ ಜತೆಗೆ ಆಫ್ಘಾನ್ ಕೂಡಾ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಿಂಗ್ಸ್‌ಟೌನ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಡುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ. ಸೂಪರ್ 8 ಹಂತದಲ್ಲಿ ಬಾಂಗ್ಲಾದೇಶ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಆಫ್ಘಾನಿಸ್ತಾನ ತಂಡವು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಇನ್ನು ಆಫ್ಘಾನಿಸ್ತಾನ ತಂಡವು ಸೆಮೀಸ್ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದೆಲ್ಲದರ ನಡುವೆ ಆಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಕೂಡಾ ದೇಶದ ತಂಡದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಇದೀಗ ಆಫ್ಘಾನಿಸ್ತಾನದ ವಿದೇಶಾಂಗ ಸಚಿವರಾದ ಅಮಿರ್ ಖಾನ್ ಮುತ್ತಕಿ, ಆಫ್ಘಾನ್ ತಂಡದ ನಾಯಕ ರಶೀದ್ ಖಾನ್‌ಗೆ ವಿಡಿಯೋ ಕಾಲ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಫ್ಘಾನಿಸ್ತಾನ ತಂಡವು, ಇದೀಗ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ ಬಾಂಗ್ಲಾದೇಶ ಎದುರು 8 ರನ್ ಅಂತರದ ರೋಚಕ ಜಯ ಸಾಧಿಸುವವುದರ ಜತೆಗೆ ನಾಲ್ಕನೇ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಹಾಲಿ ಚಾಂಪಿಯನ್ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ ತಂಡಗಳು ಸೆಮಿಫೈನಲ್‌ ಟಿಕೆಟ್ ಖಚಿತಪಡಿಸಿಕೊಂಡಿದ್ದವು. ಇದೀಗ ಈ ಮೂರು ತಂಡಗಳ ಜತೆಗೆ ಆಫ್ಘಾನ್ ಕೂಡಾ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಫ್ಘಾನ್ ತಂಡದ ಈ ಗೆಲುವಿನೊಂದಿಗೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೆಮೀಸ್ ಕನಸು ಕೂಡಾ ನುಚ್ಚುನೂರಾಯಿತು.

ಸೆಮಿಫೈನಲ್​ ಪ್ರವೇಶಿಸುತ್ತಿದ್ದಂತೆ ಅಫ್ಘಾನಿಸ್ತಾನ ವಿರುದ್ಧ ಕೇಳಿ ಬಂತು ಮೋಸದಾಟದ ಆರೋಪ..! ಇಲ್ಲಿದೆ ವೈರಲ್ ವಿಡಿಯೋ

ಆಫ್ಘಾನಿಸ್ತಾನ ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ತಾಲಿಬಾನ್ ವಿದೇಶಾಂಗ ಮಂತ್ರಿ ಅಮಿರ್ ಖಾನ್ ಮುತ್ತಕಿ, ಆಫ್ಘಾನಿಸ್ತಾನ ತಂಡದ ಪ್ರದರ್ಶನವನ್ನು ಕೊಂಡಾಡಿದ್ದು, ಮುಂದಿನ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ.

ಹೀಗಿತ್ತು ನೋಡಿ ಆ ವಿಡಿಯೋ:

Scroll to load tweet…

ಇನ್ನು ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತ್ತು. ರನ್ ಗಳಿಸಲು ಕಠಿಣವಾದ ಪಿಚ್‌ನಲ್ಲಿ ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 43 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಇನ್ನು ಕೊನೆಯಲ್ಲಿ ನಾಯಕ ರಶೀದ್ ಖಾನ್ 3 ಸಿಕ್ಸರ್ ಸಹಿತ ಅಜೇಯ 19 ರನ್ ಬಾರಿಸಿ ತಂಡದ ಮೊತ್ತವನ್ನು 110ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು, ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಇದರ ನಡುವೆ ಪಂದ್ಯಕ್ಕೆ ಮಳೆ ಕೂಡಾ ಅಡ್ಡಿ ಪಡಿಸಿದ್ದರಿಂದ ಬಾಂಗ್ಲಾದೇಶಕ್ಕೆ 19 ಓವರ್‌ಗಳಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 114 ರನ್ ಗುರಿ ನೀಡಲಾಯಿತು. ಒಂದು ಕಡೆ ಲಿಟನ್ ದಾಸ್ ಅಜೇಯ 54 ರನ್ ಸಿಡಿಸಿದರಾದರೂ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡವು 17.5 ಓವರ್‌ಗಳಲ್ಲಿ ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು. ಆಫ್ಘಾನಿಸ್ತಾನ ತಂಡದ ಪರ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 4 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿದರು.

ಇದೀಗ ಆಫ್ಘಾನಿಸ್ತಾನ ತಂಡವು ಜೂನ್ 27ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನೊಂದೆಡೆ ಅದೇ ದಿನ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.