ನವದೆಹಲಿ(ಡಿ.16): ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ಶನಿವಾರ ಟ್ವೀಟರ್‌ನಲ್ಲಿ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದರು. 

ಚೆನ್ನೈನಲ್ಲಿ ಟೆಸ್ಟ್‌ ಸರಣಿ ಆಡುತ್ತಿದ್ದ ವೇಳೆ ತಾವು ಉಳಿದುಕೊಂಡಿದ್ದ ತಾಜ್‌ ಹೋಟೆಲ್‌ನಲ್ಲಿ ಮಾಣಿಯೊಬ್ಬ ತಮಗೆ ಬ್ಯಾಟಿಂಗ್‌ ಸಲಹೆಯೊಂದನ್ನು ನೀಡಿದ್ದ. ಆ ಸಲಹೆ ದೊಡ್ಡ ಮಟ್ಟದಲ್ಲಿ ನೆರವಾಯಿತು. ಆ ಮಾಣಿ ಈಗ ಎಲ್ಲಿದ್ದಾನೆ ಎಂದು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ ಎಂದು ಟ್ವೀಟ್‌ ಮಾಡಿದ್ದರು. 

‘ನನ್ನ ಕೋಣೆಗೆ ಕಾಫಿ ನೀಡಲು ಬಂದಿದ್ದ ವ್ಯಕ್ತಿ, ಸರ್‌ ನನ್ನದೊಂದು ಸಣ್ಣ ಸಲಹೆ ಇದೆ. ನಿಮಗೆ ಅಭ್ಯಂತರವಿಲ್ಲದಿದ್ದರೆ ಹೇಳುತ್ತೇನೆ ಎಂದಿದ್ದ. ಖಂಡಿತ ಹೇಳಿ ಎಂದೆ. ನೀವು ಮೊಣಕೈ ಗಾರ್ಡ್‌ ಧರಿಸಿ ಆಡುವಾಗ ನೀವು ಬ್ಯಾಟ್‌ ಬೀಸುವ ವೇಗ ಬದಲಾಗುತ್ತದೆ. ನಾನು ಹಲವು ಬಾರಿ ಗಮನಿಸಿದ್ದೇನೆ ಎಂದ. ಆತ ಹೇಳಿದ್ದು ನಿಜವಾಗಿತ್ತು’ ಎಂದು ಸಚಿನ್‌ ಬರೆದಿದ್ದರು. 

ಭಾನುವಾರ ತಾಜ್‌ ಹೋಟೆಲ್‌ನವರು ಸಚಿನ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ತಾವು ಹುಡುಕುತ್ತಿರುವ ವ್ಯಕ್ತಿ ಸಿಕ್ಕಿದ್ದಾನೆ. ಆದಷ್ಟುಬೇಗ ಭೇಟಿ ಏರ್ಪಡಿಸುತ್ತೇವೆ ಎಂದಿದ್ದಾರೆ.