* ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ* ಟೀಂ ಇಂಡಿಯಾವನ್ನು ಮತ್ತೊಮ್ಮೆ ಸೋಲಿಸುವ ಕನಸು ಕಾಣುತ್ತಿದೆ ಪಾಕ್* ಅಕ್ಟೋಬರ್ 24ರಂದು ಭಾರತ-ಪಾಕ್‌ ಮುಖಾಮುಖಿ

ಕರಾಚಿ(ಸೆ.16): 2017ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡಕ್ಕೆ ಸೋಲುಣಿಸಿದಂತೆಯೇ, ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಭಾರತವನ್ನು ಸೋಲಿಸುವ ಸಾಮರ್ಥ್ಯ ಪಾಕಿಸ್ತಾನ ತಂಡಕ್ಕಿದೆ ಎಂದು ವೇಗದ ಬೌಲರ್ ಹಸನ್ ಅಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುಎಇನಲ್ಲಿ ಅಕ್ಟೋಬರ್ 24ರಂದು ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. 

ಯುಎಇನ ಟರ್ನಿಂಗ್‌ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಹೀಗಿದ್ದೂ ವೇಗದ ಬೌಲಿಂಗ್‌ನಲ್ಲಿ ಏರಿಳಿತ ಮಾಡುವ ಮೂಲಕ ವೇಗಿಗಳು ಪರಿಣಾಮಕಾರಿ ದಾಳಿ ನಡೆಬಹುದು ಎಂದು ಹಸನ್‌ ಅಲಿ ಅಭಿಪ್ರಾಯ ಪಟ್ಟಿದ್ದಾರೆ.

2017ರ ಫೈನಲ್‌ನಲ್ಲಿ ನಾವು ಅತ್ಯುತ್ತಮ ಪ್ರದರ್ಶನ ತೋರಿದೆವು. ಅದೇ ರೀತಿ ಇದೀಗ ಮತ್ತೊಮ್ಮೆ ಭಾರತ ತಂಡವನ್ನು ಸೋಲಿಸಲು ಪ್ರಯತ್ನಿಸುತ್ತೇವೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ಕೋಟ್ಯಾಂತರ ಕಣ್ಣುಗಳು ವೀಕ್ಷಿಸುತ್ತಿರುತ್ತವೆ ಹಾಗೆಯೇ ಒತ್ತಡವೂ ಇರುತ್ತದೆ. ಹೇಗಾದರೂ ಸರಿ ನಾವು ಪಂದ್ಯವನ್ನು ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಯುಎಇ ಪಿಚ್‌ಗಳು ಸ್ಪಿನ್ನರ್ ಸ್ನೇಹಿಯಾಗಿರುತ್ತವೆ. ವೇಗದ ಬೌಲರ್‌ಗಳು ಏರಿಳಿತದೊಂದಿಗೆ ಬೌಲಿಂಗ್ ಮಾಡಿದರೆ ಪರಿಣಾಮಕಾರಿಯಾಗಬಲ್ಲರು ಎಂದು ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಹಸನ್ ಅಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೋಚ್‌ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ವಕಾರ್ ಯೂನಿಸ್ ತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡಿರುವುದು ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹಸನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ನಾಯಕತ್ವ ಬದಲಾವಣೆ: ಕೊನೆಗೂ ತುಟಿಬಿಚ್ಚಿದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ..!

ಟಿ20 ವಿಶ್ವಕಪ್‌ ಸನಿಹದಲ್ಲಿರುವಾಗಲೇ ಕೋಚ್‌ಗಳನ್ನು ಬದಲಿಸಿದ್ದು ನನಗೆ ಬೇಸರವನ್ನುಂಟು ಮಾಡಿತು. ಇದು ನಮ್ಮ ಕೈಯಲ್ಲಿ ಇಲ್ಲ, ಇದನ್ನೆಲ್ಲ ಪಿಸಿಬಿ ತೀರ್ಮಾನಿಸಲಿದೆ. ನಮ್ಮ ಕೆಲಸವೇನಿದ್ದರೂ ಉತ್ತಮ ಪ್ರದರ್ಶನ ತೋರುವುದಾಗಿದೆ. ವಕಾರ್ ಯೂನಿಸ್ ನನ್ನ ರೋಲ್ ಮಾಡೆಲ್‌. ಅವರನ್ನು ನೋಡಿಯೇ ನಾನು ಬೌಲಿಂಗ್ ಮಾಡಲು ಪ್ರಾರಂಭಿಸಿದೆ ಎಂದು ಹಸನ್ ಅಲಿ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಸೆಪ್ಟೆಂಬರ್ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ