ಟಿ20 ವಿಶ್ವಕಪ್‌ನ ಸೂಪರ್‌-8 ಹಂತಕ್ಕೆ 8 ತಂಡಗಳು ಖಚಿತವಾಗಿವೆ. ಈ ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಫೆಬ್ರವರಿ 21 ರಿಂದ ಆರಂಭವಾಗುವ ಸೂಪರ್‌-8 ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ನವದೆಹಲಿ: ನಮೀಬಿಯಾ ವಿರುದ್ಧ ಪಾಕಿಸ್ತಾನ ಗೆಲ್ಲುವುದರೊಂದಿಗೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂಪರ್‌-8 ಹಂತದಲ್ಲಿ ಆಡುವ 8 ತಂಡಗಳು ಯಾವುವು ಎಂಬುದು ಖಚಿತವಾಗಿದೆ. 20 ತಂಡಗಳ ಪೈಕಿ 12 ತಂಡಗಳು ಗುಂಪು ಹಂತದಲ್ಲೇ ಹೊರಬಿದ್ದಿದ್ದು, ಎಲ್ಲಾ 4 ಗುಂಪುಗಳಲ್ಲಿ ಅಗ್ರ-2 ಸ್ಥಾನ ಪಡೆದ 8 ತಂಡಗಳು ಸೂಪರ್-8 ಪ್ರವೇಶಿಸಿವೆ. 

Add Asianetnews Kannada as a Preferred SourcegooglePreferred

ಈ 8 ತಂಡಗಳನ್ನು ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಪರಸ್ಪರ ಸೆಣಸಾಡಲಿವೆ. ಅಂದರೆ ಪ್ರತಿ ತಂಡ 3 ಪಂದ್ಯಗಳನ್ನಾಡಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಫೆ.21ರಿಂದ ಸೂಪರ್‌-8 ಪಂದ್ಯಗಳು ಆರಂಭಗೊಳ್ಳಲಿದೆ.

ಸೂಪರ್‌-8 ವೇಳಾಪಟ್ಟಿ

ದಿನಾಂಕ ಪಂದ್ಯ ಸಮಯ ಸ್ಥಳ

ಫೆ.21 ನ್ಯೂಜಿಲೆಂಡ್‌-ಪಾಕಿಸ್ತಾನ ಸಂಜೆ 7 ಕೊಲಂಬೊ

ಫೆ.22 ಇಂಗ್ಲೆಂಡ್‌-ಶ್ರೀಲಂಕಾ ಮಧ್ಯಾಹ್ನ 3 ಪಲ್ಲೆಕೆಲೆ

ಫೆ.22 ಭಾರತ-ದ.ಆಫ್ರಿಕಾ ಸಂಜೆ 7 ಅಹಮದಾಬಾದ್

ಫೆ.23 ಜಿಂಬಾಬ್ವೆ-ವಿಂಡೀಸ್‌ ಸಂಜೆ 7 ಮುಂಬೈ

ಫೆ.24 ಇಂಗ್ಲೆಂಡ್‌-ಪಾಕಿಸ್ತಾನ ಸಂಜೆ 7 ಪಲ್ಲೆಕೆಲೆ

ಫೆ.25 ನ್ಯೂಜಿಲೆಂಡ್‌-ಶ್ರೀಲಂಕಾ ಸಂಜೆ 7 ಕೊಲಂಬೊ

ಫೆ.26 ವಿಂಡೀಸ್‌-ದ.ಆಫ್ರಿಕಾ ಮಧ್ಯಾಹ್ನ 3 ಅಹಮದಾಬಾದ್

ಫೆ.26 ಭಾರತ-ಜಿಂಬಾಬ್ವೆ ಸಂಜೆ 7 ಚೆನ್ನೈ

ಫೆ.27 ಇಂಗ್ಲೆಂಡ್‌-ನ್ಯೂಜಿಲೆಂಡ್ ಸಂಜೆ 7 ಕೊಲಂಬೊ

ಫೆ.28 ಪಾಕಿಸ್ತಾನ-ಶ್ರೀಲಂಕಾ ಸಂಜೆ 7 ಪಲ್ಲೆಕೆಲೆ

ಮಾ.1 ಜಿಂಬಾಬ್ಬೆ-ದ.ಆಫ್ರಿಕಾ ಮಧ್ಯಾಹ್ನ 3 ನವದೆಹಲಿ

ಮಾ.1 ಭಾರತ-ವಿಂಡೀಸ್‌ ಸಂಜೆ 7 ಕೋಲ್ಕತಾ

ಮಾ.4 1ನೇ ಸೆಮಿಫೈನಲ್ ಸಂಜೆ 7 ಕೋಲ್ಕತಾ/ಕೊಲಂಬೊ

ಮಾ.5 2ನೇ ಸೆಮಿಫೈನಲ್‌ ಸಂಜೆ 7 ಮುಂಬೈ

ಮಾ.8 ಫೈನಲ್‌ ಸಂಜೆ 7 ಅಹ್ಮದಾಬಾದ್/ಕೊಲಂಬೊ

ಟಿ20 ವಿಶ್ವಕಪ್‌ನಿಂದ ಯುಎಸ್‌ಎ ಔಟ್‌! ಪಾಕಿಸ್ತಾನ ಸೂಪರ್‌-8ಗೆ ಲಗ್ಗೆ

ಕೊಲಂಬೊ: ಮಾಜಿ ಚಾಂಪಿಯನ್‌ ಪಾಕಿಸ್ತಾನ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೂಪರ್‌-8 ಹಂತ ಪ್ರವೇಶಿಸಿದೆ. ಇದರೊಂದಿಗೆ ಯುಎಸ್‌ಎ ತಂಡದ ಚೊಚ್ಚಲ ಸೂಪರ್-8 ಕನಸು ಭಗ್ನಗೊಂಡಿದ್ದು, ಗುಂಪು ಹಂತದಲ್ಲೇ ಹೊರಬಿದ್ದಿದೆ. ‘ಎ’ ಗುಂಪಿನಲ್ಲಿ ಭಾರತ ಅಗ್ರಸ್ಥಾನಿಯಾಗಿ ಸೂಪರ್‌-8 ತಲುಪಿದರೆ, ಪಾಕ್‌ 4 ಪಂದ್ಯಗಳಲ್ಲಿ 3ನೇ ಗೆಲುವಿನೊಂದಿಗೆ 2ನೇ ಸ್ಥಾನಿಯಾಯಿತು. 4ರಲ್ಲಿ 2 ಪಂದ್ಯ ಗೆದ್ದಿದ್ದ ಯುಎಸ್‌ಎ ಹೊರಬಿತ್ತು.

ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕ್‌ 3 ವಿಕೆಟ್‌ ನಷ್ಟದಲ್ಲಿ 199 ರನ್‌ ಕಲೆಹಾಕಿತು. ಆರಂಭಿಕ ಆಟಗಾರ ಸಾಹಿಬ್‌ಝಾದ ಫರ್ಹಾನ್‌ 58 ಎಸೆತಗಳಲ್ಲಿ ಔಟಾಗದೆ 100 ರನ್‌ ಸಿಡಿಸಿದರು. ಇದು ಈ ಬಾರಿ ಟೂರ್ನಿಯಲ್ಲಿ ದಾಖಲಾದ 3ನೇ ಶತಕ. ಉಳಿದಂತೆ ನಾಯಕ ಸಲ್ಮಾನ್‌ ಆಘಾ 38, ಶಾದಾಬ್‌ ಖಾನ್‌ ಔಟಾಗದೆ 36 ರನ್‌ ಸಿಡಿಸಿದರು.

ಬೃಹತ್‌ ಗುರಿ ಬೆನ್ನತ್ತಿದ ನಮೀಬಿಯಾ 17.3 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟಾಗಿ, 102 ಅಂತರದಲ್ಲಿ ಪರಾಭವಗೊಂಡಿತು. ತಂಡದ ಯಾರೊಬ್ಬರೂ 25ಕ್ಕಿಂತ ಹೆಚ್ಚು ರನ್‌ ಗಳಿಸಲಿಲ್ಲ. ಉಸ್ಮಾನ್‌ ತಾರಿಖ್‌ 4, ಶದಾಬ್ ಖಾನ್‌ 3 ವಿಕೆಟ್‌ ಪಡೆದರು.

ಸತತ 4 ಪಂದ್ಯದಲ್ಲೂ ದಕ್ಷಿಣ ಆಫ್ರಿಕಾಗೆ ಜಯ

ಕಳೆದ ಬಾರಿ ರನ್ನರ್‌-ಅಪ್‌ ದಕ್ಷಿಣ ಆಫ್ರಿಕಾ ತಂಡ ‘ಡಿ’ ಗುಂಪಿನ ಎಲ್ಲಾ 4 ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿಯೇ ಸೂಪರ್‌-8 ತಲುಪಿದೆ. ತಂಡ ಬುಧವಾರ ಯುಎಇ ವಿರುದ್ಧ 6 ವಿಕೆಟ್‌ನಿಂದ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 122 ರನ್‌ ಗಳಿಸಿತು. ಅಲಿಶಾನ್‌ ಶರಫು 45 ರನ್‌ ಸಿಡಿಸಿದರು. ಸುಲಭ ಗುರಿಯನ್ನು ಹರಿಣ ಪಡೆ 13.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಡೆವಾಲ್ಡ್‌ ಬ್ರೆವಿಸ್‌ 36, ರಿಕೆಲ್ಟನ್‌ 30, ಮಾರ್ಕ್‌ರಮ್‌ 28 ರನ್‌ ಸಿಡಿಸಿದರು. ಯುಎಇ 3 ಸೋಲುಗಳೊಂದಿಗೆ ಅಭಿಯಾನ ಕೊನೆಗೊಳಿಸಿತು.

ಇಂದಿನ ಪಂದ್ಯಗಳು

ವೆಸ್ಟ್‌ಇಂಡೀಸ್‌-ಇಟಲಿ, ಬೆಳಗ್ಗೆ 11ಕ್ಕೆ(ಕೋಲ್ಕತಾ)

ಶ್ರೀಲಂಕಾ-ಜಿಂಬಾಬ್ವೆ, ಮಧ್ಯಾಹ್ನ 3ಕ್ಕೆ(ಕೊಲಂಬೊ)

ಅಫ್ಘಾನಿಸ್ತಾನ-ಕೆನಡಾ, ಸಂಜೆ 7ಕ್ಕೆ(ಚೆನ್ನೈ)