ಸಂಪೂರ್ಣ ಸಿದ್ಧತೆಯ ನಡುವೆಯೂ ಟಿ20 ವಿಶ್ವಕಪ್‌ನಲ್ಲಿ ತಂಡ ಕಂಡಿರುವ ಸೋಲಿಗೆ ಬಿಸಿಸಿಐ ಸಿಟ್ಟು ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಚೇತನ್‌ ಶರ್ಮ ನೇತೃತ್ವದ ಸಂಪೂರ್ಣ ಆಯ್ಕೆ ಸಮಿತಿಯನ್ನೇ ವಜಾ ಮಾಡಿದ್ದ ಬಿಸಿಸಿಐ ಈಗ, ತಂಡದ ಮೆಂಟಲ್‌ ಕಂಡೀಷನಿಂಗ್ ಕೋಚ್‌ ಪ್ಯಾಡಿ ಆಪ್ಟನ್‌ಗೂ ವಿದಾಯ ಹೇಳಲು ಸಜ್ಜಾಗಿದೆ ಎಂದು ವರದಿಯಾಗಿದೆ.

ಮುಂಬೈ (ನ.26): ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ ಹೇಳಿಕೊಳ್ಳುವಂಥದ್ದಾಗಿರಲಿಲ್ಲ. ಸೆಮಿಫೈನಲ್‌ ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ ಕಂಡ ಹೀನಾಯ ಸೋಲು ತಂಡದ ಲೋಪದೋಷಗಳನ್ನು ಬಹಿರಂಗಪಡಿಸಿತ್ತು. ಈ ಸೋಲಿನ ಬಳಿಕ ಸಿಟ್ಟಾಗಿದ್ದ ಬಿಸಿಸಿಐ, ಫುಲ್‌ ಆಕ್ಷನ್‌ ಮೋಡ್‌ಗೆ ಇಳಿದಿತ್ತು. ಕೆಲವೇ ದಿನಗಳ ಹಿಂದೆ ಬಿಸಿಸಿಐ, ಚೇತನ್‌ ಶರ್ಮ ನೇತೃತ್ವದಲ್ಲಿ ಇದ್ದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ಬರ್ಖಾಸ್ತು ಮಾಡಿತ್ತು. ಈಗ ತಂಡದ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದು, ಕೋಚಿಂಗ್‌ ಸಿಬ್ಬಂದಿಯಲ್ಲಿ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಅಪ್ತರಾಗಿದ್ದ ವ್ಯಕ್ತಿಯ ಒಪ್ಪಂದವನ್ನು ನವೀಕರಿಸದೇ ಇರಲು ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ. ದಿನಪತ್ರಿಕೆಯೊಂದರ ವರದಿಯ ಪ್ರಕಾರ, ತಂಡದ ಮೆಂಟಲ್‌ ಕಂಡೀಷನಿಂಗ್‌ ಕೋಚ್‌ ಆಗಿರುವ ಪ್ಯಾಡಿ ಆಪ್ಟನ್‌ ಅವರ ಒಪ್ಪಂದವನ್ನು ನವೀಕರಿಸದೇ ಇರಲು ಬಿಸಿಸಿಐ ತೀರ್ಮಾನ ಮಾಡಿದೆ. ಮುಂಬರುವ ಬಾಂಗ್ಲಾದೇಶ ಪ್ರವಾಸದ ವೇಳೆ ಪ್ಯಾಡಿ ಆಪ್ಟನ್‌ ತಂಡದೊಂದಿಗೆ ತೆರಳುತ್ತಿಲ್ಲ ಎಂದು ಬಿಸಿಸಿಐ ಆಟಗಾರರಿಗೆ ತಿಳಿಸಿದೆ ಎಂದು ವರದಿಯಾಗಿದೆ.

ಟಿ20 ವಿಶ್ವಕಪ್‌ನೊಂದಿಗೆ ಪ್ಯಾಡಿ ಆಪ್ಟನ್‌ ಅವರ ಒಪ್ಪಂದ ಕೂಡ ಅಂತಿಮವಾಗಿತ್ತು. ಆದರೆ, ಬಿಸಿಸಿಐ ಅವರಿಗೆ ಈವರೆಗೂ ಹೊಸ ಒಪ್ಪಂದ ನೀಡಿಲ್ಲ. ಮೂಲಗಳ ಪ್ರಕಾರ ಅವರನ್ನು ತಂಡದ ಸಿಬ್ಬಂದಿ ಸ್ಥಾನದಿಂದ ಬಹುತೇಕವಾಗಿ ಕೈಬಿಡಲಾಗಿದೆ. ದಕ್ಷಿಣ ಆಫ್ರಿಕಾ ಮೂಲದ ಪ್ಯಾಡಿ ಅಪ್ಟನ್‌, ಮುಖ್ಯ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ ಅವರ ಆಪ್ತರು. ದ್ರಾವಿಡ್‌ ಅವರ ಸಲಹೆಯ ಮೇರೆಗೆ ಈ ವರ್ಷದ ಜುಲೈನಲ್ಲಿ 53 ವರ್ಷದ ಪ್ಯಾಡಿ ಆಪ್ಟನ್‌ ಅವರನ್ನು ತಂಡದ ಮೆಂಟಲ್‌ ಕಂಡೀಷನಿಂಗ್ ಕೋಚ್‌ ಆಗಿ ಬಿಸಿಸಿಐ ನೇಮಕ ಮಾಡಿತ್ತು. ವೆಸ್ಟ್‌ ಇಂಡೀಸ್‌ ಪ್ರವಾಸದೊಂದಿಗೆ ತಂಡದಲ್ಲಿ ಅವರ ಅವಧಿ ಆರಂಭವಾಗಿತ್ತು.

ಸುನೀಲ್‌ ಗಾವಸ್ಕರ್ ಕೂಡ ಆಕ್ರೋಶ: ಟಿ20 ವಿಶ್ವಕಪ್‌ ವೇಳೆ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಸುನೀಲ್‌ ಗಾವಸ್ಕರ್‌ ಕೂಡ ಪ್ಯಾಡಿ ಆಪ್ಟನ್‌ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ಫ್ಲಾಪ್‌ ಆದ ಬಳಿಕ, ಪ್ಯಾಡಿ ಆಪ್ಟನ್‌ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಕೆಎಲ್‌ ರಾಹುಲ್‌ ಇನ್ನಷ್ಟು ಸಮಯ ಕಳೆಯಬೇಕು ಎಂದು ಹೇಳಿದ್ದರು. ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೇ ಪ್ಯಾಡಿ ಅಪ್ಟನ್‌ಗೆ ಬಿಸಿಸಿಐ ಹಣ ನೀಡಿ ತಂಡದ ಸಿಬ್ಬಂದಿಯಾಗಿ ನೇಮಿಸಿದೆ. ಬಹುಶಃ ಅದರಲ್ಲಿ ಸ್ವಲ್ಪ ಮಟ್ಟಿಗೆ ಅವರು ಯಶಸ್ಸು ಕೂಡ ಕಂಡಿದ್ದಾರೆ. ಕೆಟ್ಟ ಫಾರ್ಮ್‌ನಲ್ಲಿದ್ದ ವಿರಾಟ್‌ ಕೊಹ್ಲಿಗೆ ಪ್ಯಾಡಿ ಆಪ್ಟನ್‌ ನೀಡಿರುವ ಸಲಹೆಗಳು ಮತ್ತೆ ಫಾರ್ಮ್‌ಗೆ ಬರಲು ನೆರವಾಗಿದ್ದವು ಎಂದು ಸುನೀಲ್‌ ಗಾವಸ್ಕರ್‌ ಹೇಳಿದ್ದರು. ಆದರೆ, ಕೆಎಲ್‌ ರಾಹುಲ್‌ ವಿಚಾರದಲ್ಲಿ ಹಾಗಾಗಿಲ್ಲ ಎಂದಿದ್ದರು.

2023ರ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ರಮೀಜ್ ರಾಜಾ

ಹಿಂದೆಯೂ ಟೀಮ್‌ ಇಂಡಿಯಾದ ಜೊತೆ ಕೆಲಸ ಮಾಡಿದ್ದ ಆಪ್ಟನ್: ಪ್ಯಾಡಿ ಆಪ್ಟನ್‌ ಟೀಮ್‌ ಇಂಡಿಯಾದ ಜೊತೆ ಕೆಲಸ ಮಾಡಿರುವುದು ಇದೇ ಮೊದಲಲ್ಲ. 2008ರಿಂದ 2011ರ ಅವಧಿಯಲ್ಲಿ ಅವರು ತಂಡದೊಂದಿಗೆ ಕೆಲಸ ಮಾಡಿದ್ದರು. ಅಂದು ತಂಡದ ಮೆಂಟಲ್‌ ಕಂಡೀಷನಿಂಗ್‌ ಕೋಚ್‌ ಅಲ್ಲದೆ ಸ್ಟ್ಯಾಟಜಿಕ್ ಕೋಚ್‌ ಆಗಿಯೂ ಕೆಲಸ ಮಾಡಿದ್ದರು. ಅಂದಿನ ಕೋಚ್‌ ಆಗಿದ್ದ ಗ್ಯಾರಿ ಕರ್ಸ್ಟರ್ನ್‌ ಹಾಗೂ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಪ್ಯಾಡಿ ಉತ್ತಮ ಸಂಬಂಧ ಹೊಂದಿದ್ದರು. ಅಂದು ತಂಡ ವಿಶ್ವಕಪ್‌ ಗೆದ್ದಿದ್ದು ಮಾತ್ರವಲ್ಲದೆ, ಟೆಸ್ಟ್‌ ಶ್ರೇಯಾಂಕದಲ್ಲೂ ನಂ.1 ಸ್ಥಾನಕ್ಕೆ ಏರಿತ್ತು. ಅದಾದ ಬಳಿಕ ರಾಹುಲ್‌ ದ್ರಾವಿಡ್‌ ಹಾಗೂ ಪ್ಯಾಡಿ ಆಪ್ಟನ್‌ ರಾಜಸ್ಥಾನ ರಾಯಲ್ಸ್‌ ತಂಡದೊಂದಿಗೂ ಜೊತೆಯಾಗಿ ಕೆಲಸ ಮಾಡಿದ್ದರು.

Ind vs NZ ಶತಕ ಸಿಡಿಸಿ 23 ವರ್ಷಗಳ ಹಳೆಯ ದಾಖಲೆ ಮುರಿದ ಟಾಮ್ ಲೇಥಮ್..!

2011ರ ವಿಶ್ವಕಪ್‌ ಬಳಿಕ ಪ್ಯಾಡಿ ಅಪ್ಟನ್‌ , ದಕ್ಷಿಣ ಆಫ್ರಿಕಾ ತಂಡಕ್ಕೆ ಪರ್ಫಾರ್ಮೆನ್ಸ್‌ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2014ರವರೆಗೂ ಅವರು ಈ ಸ್ಥಾನದಲ್ಲಿ ಕೆಲಸ ಮಾಡಿದ್ದರು. ಇದರ ನಡುವಡ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್‌ ಹಾಗೂ ಪುಣೆ ವಾರಿಯರ್ಸ್‌ ತಂಡದ ಪರವಾಗಿ ಅವರು ಕೆಲಸ ಮಾಡಿದ್ದರು. ಅದರೊಂದಿಗೆ ಪಿಎಸ್‌ಎಲ್‌ನಲ್ಲಿ ಲಾಹೋರ್‌ ಕ್ವಾಲಾಂಡರ್ಸ್‌ ಮತ್ತು ಬಿಗ್‌ ಬಾಷ್‌ನಲ್ಲಿ ಸಿಡ್ನಿ ಥಂಡರ್‌ ಜೊತೆಯಲ್ಲಿ ಕೆಲಸ ಮಾಡಿದ್ದರು.