Ind vs Pak ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೊನೆಯ 8 ಎಸೆತ..! ಕಿಂಗ್ ಕೊಹ್ಲಿಗೆ ಸೆಲ್ಯೂಟ್, ವಿಡಿಯೋ ವೈರಲ್ ..!
ಎಂಸಿಜಿ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ
ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ವಿರಾಟ್ ಕೊಹ್ಲಿ
ಪಂದ್ಯದ ದಿಕ್ಕನ್ನೇ ಬದಲಿಸಿದ ಆ ಕೊನೆಯ 8 ಎಸೆತಗಳು
ಬೆಂಗಳೂರು(ಅ.24): ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮುಕ್ತಾಯದ ಬಳಿಕ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಅರೇ, ವ್ಹಾ ಎನ್ನದೇ ಇರಲಾರ. ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿತವಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವೆಂದರೇ ಹಾಗೆ, ಕೊನೆಯ ಕ್ಷಣದವರೆಗೂ ಅಲ್ಲೊಂದು ಜಿದ್ದಾಜಿದ್ದಿನ ಪೈಪೋಟಿ ಇರುತ್ತದೆ. ಅದೇ ರೀತಿಯ ರೋಚಕ ಪಂದ್ಯಕ್ಕೆ ಎಂಸಿಜಿ ಮೈದಾನ ಮತ್ತೊಮ್ಮೆ ಸಾಕ್ಷಿಯಾಗಿದೆ. ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತು ಹಾಗೂ ಅಭಿಮಾನಿಗಳು ಯಾಕೆ 'ಕಿಂಗ್ ಕೊಹ್ಲಿ' ಎಂದು ಕರೆಯುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕೊನೆಯ 8 ಎಸೆತ ಗೆಲ್ಲಲು ಬೇಕಿದ್ದಿದ್ದು 28 ರನ್. ಮಾಜಿ ನಾಯಕ ವಿರಾಟ್ ಕೊಹ್ಲಿ ಅಸಾಧ್ಯವಾದದನ್ನು ಸಾಧ್ಯವನ್ನಾಗಿಸಿ ತೋರಿಸಿದರು. ಇದು ಕೊಹ್ಲಿ ಎನ್ನುವ ರನ್ ಮಷೀನ್‌ಗಿರುವ ದಮ್ಮು, ತಾಕತ್ತು..!
ಕಳೆದೆರಡು ವರ್ಷಗಳಲ್ಲಿ ಶತಕಗಳಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ, ಯುಎಇನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭರ್ಜರಿಯಾಗಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಕಳೆದ ವರ್ಷ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಮುಗ್ಗರಿಸಿತ್ತು. ಹೀಗಾಗಿ ಇದೀಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದಾಗ ಭಾರತದ ಮೇಲೆ ಒಂದು ಪಟ್ಟು ಒತ್ತಡ ಹೆಚ್ಚಿತ್ತು. ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಮೇಲೆ ಬೆಟ್ಟದಷ್ಟು ಬಾರ ಬಿದ್ದಿತ್ತು. ಯಾಕೆಂದರೆ 160 ರನ್ ಬೆನ್ನತ್ತಿದ ಟೀಂ ಇಂಡಿಯಾ ಮೊದಲ 7 ಓವರ್‌ಗಳಲ್ಲಿ ಕೇವಲ 31 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ 5ನೇ ವಿಕೆಟ್‌ಗೆ ಕೇವಲ 78 ಎಸೆತಗಳಲ್ಲಿ 113 ರನ್‌ಗಳ ಸಮಯೋಚಿತ ಜತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಟ್ಟರು. ಅದರಲ್ಲೂ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ 6 ಬೌಂಡರಿ ಹಾಗು 4 ಸಿಕ್ಸರ್ ಸಹಿತ ಅಜೇಯ 82 ರನ್ ಬಾರಿಸಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಇದಷ್ಟೇ ಅಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ 6ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿಯೂ ಯಶಸ್ವಿಯಾದರು.
ಮತ್ತೆ ಮತ್ತೆ ನೋಡಬೇಕೆನಿಸುವ ಕೊನೆಯ ಆ 8 ಎಸೆತಗಳು:
ಹ್ಯಾರಿಸ್ ರೌಫ್ ಎಸೆದ 19ನೇ ಓವರ್‌ನ ಮೊದಲ 4 ಎಸೆತದಲ್ಲಿ ಭಾರತ 3 ರನ್ ಮಾತ್ರ ಗಳಿಸಿತ್ತು. ಕೊನೆಯ 8 ಎಸೆತಗಳಲ್ಲಿ ಭಾರತ ಗೆಲ್ಲಲು ಬರೋಬ್ಬರಿ 28 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನ ಕೊನೆ 2 ಎಸೆತಗಳನ್ನು ಕೊಹ್ಲಿ ಸಿಕ್ಸರ್‌ಗಟ್ಟುವ ಮೂಲಕ ಭಾರತದ ಮೇಲಿದ್ದ ಒತ್ತಡವನ್ನು ಪಾಕಿಸ್ತಾನದ ಮೇಲೆ ಹೇರುವಲ್ಲಿ ಯಶಸ್ವಿಯಾದರು. ಕೊಹ್ಲಿ 2 ಸಿಕ್ಸರ್ ಬಾರಿಸಿದ ಪರಿಣಾಮ ಕೊನೆ ಓವರಲ್ಲಿ ಗೆಲ್ಲಲು 16 ರನ್ ಉಳಿಯಿತು.
20ನೇ ಓವರ್ ಬೌಲಿಂಗ್ ಜವಾಬ್ದಾರಿ ಹೊತ್ತುಕೊಂಡ ಮೊಹಮ್ಮದ್ ನವಾಜ್ ಮೊದಲ ಎಸೆತದಲ್ಲೇ ಹಾರ್ದಿಕ್‌ರನ್ನು ಔಟ್ ಮಾಡಿದರು. 2ನೇ ಎಸೆತದಲ್ಲಿ ಕಾರ್ತಿಕ್ 1 ರನ್ ಪಡೆದರೆ, 3ನೇ ಎಸೆತದಲ್ಲಿ ಕೊಹ್ಲಿ 2 ರನ್ ಕದ್ದರು. ಕೊನೆ 3 ಎಸೆತದಲ್ಲಿ 13 ರನ್ ಬೇಕಿತ್ತು. ನೋಬಾಲ್ ಆದ 4ನೇ ಎಸೆತದಲ್ಲಿ ವಿರಾಟ್ ಸಿಕ್ಸರ್ ಸಿಡಿಸಿದರು. 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ನವಾಜ್ ವೈಡ್ ಎಸೆದರು. ಆ ನಂತರ ಫ್ರೀ ಹಿಟ್‌ನಲ್ಲಿ ಕೊಹ್ಲಿ ಬೌಲ್ಡ್ ಆದರೂ ಬೈ ಮೂಲಕ 3 ರನ್ ತಂಡದ ಮೊತ್ತಕ್ಕೆ ಸೇರ್ಪಡೆಗೊಂಡಿತು. ಇನ್ನು 5ನೇ ಎಸೆತದಲ್ಲಿ ಕಾರ್ತಿಕ್ ರನೌಟ್ ಆದಾಗ 1 ಎಸೆತದಲ್ಲಿ 2 ರನ್ ಬೇಕಿತ್ತು. ನವಾಜ್ ಮತ್ತೊಂದು ವೈಡ್ ಎಸೆದರು. ಕೊನೆ ಎಸೆತದಲ್ಲಿ ಬೇಕಿದ್ದ ಒಂದು ರನ್ ಅನ್ನು ಅಶ್ವಿನ್ ಗಳಿಸಿ ತಂಡವನ್ನು ಜಯದ ದಡ ದಾಟಿಸಿದರು.
ವೈರಲ್ ಆಗುತ್ತಿರುವ ಕೊನೆಯ 8 ಎಸೆತಗಳ ವಿಡಿಯೋ ಇಲ್ಲಿದೆ ನೋಡಿ.