ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!
ಟಿ20 ವಿಶ್ವಕಪ್ ಟೂರ್ನಿಯ ಭಾರತ ಹಾಗೂ ನೆದರ್ಲೆಂಡ್ ನಡುವಿನ ಪಂದ್ಯದಲ್ಲಿ ಪ್ರೇಮ ನಿವೇದನೆ ಘಟನೆ ನಡೆದಿದೆ. ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಯೊಬ್ಬ ತನ್ನ ಗೆಳತಿಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಸಿಡ್ನಿ(ಅ.27): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ ಎರಡನೇ ಗೆಲುವು ದಾಖಲಿಸಿದೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 56 ರನ್ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲೂ ಮೊದಲ ಸ್ಥಾನಕ್ಕೇರಿದೆ. ಆದರೆ ಈ ಪಂದ್ಯದ ನಡುವೆ ಟೀಂ ಇಂಡಿಯಾ ಅಭಿಮಾನಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಪಂದ್ಯದ ನಡುವೆ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿ, ಗೆಳತಿ ಮುಂದೆ ಮಂಡಿಯೂರಿ ವಿಲ್ ಯು ಮ್ಯಾರಿ ಮಿ ಎಂದು ಕೇಳಿದ್ದಾನೆ. ಯುವಕನ ಮಾತಿಗೆ ನಾಚಿ ನೀರಾದ ಯುವತಿ ನಗುವಿನಲ್ಲಿ ಸಮ್ಮತಿ ಸೂಚಿಸಿದ್ದಾಳೆ. ಬಳಿಕ ರಿಂಗ್ ತೊಡಿಸಿ ಬಿಗಿದಪ್ಪಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಭಾರತ ಮೊದಲು ಬ್ಯಾಟಿಂಗ್ ಮಾಡಿ 2 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿತ್ತು. 180 ರನ್ ಟಾರ್ಗೆಟ್ ಬೆನ್ನಟ್ಟಲು ಕಣಕ್ಕಿಳಿದ ನೆದರ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತ್ತು. 7ನೇ ಓವರ್‌ನಲ್ಲಿ ನೆದರ್ಲೆಂಡ್ 28 ರನ್ ಸಿಡಿಸಿ 2 ವಿಕೆಟ್ ಕಳೆದುಕೊಂಡಿತ್ತು. ಇದೇ ಸಂದರ್ಭದಲ್ಲಿ ಅಭಿಮಾನಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆಕೆಗೆ ರಿಂಗ್ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದಾರೆ. ಇತ್ತ ಗೆಳತಿ ಕೂಡ ಯುವಕನ ನಿವೇದನೆಯನ್ನು ಒಪ್ಪಿಕೊಂಡಿದ್ದಾಳೆ.
ಒಂದೇ ರನ್‌ನಿಂದ ಜಿಂಬಾಬ್ವೆ ವಿರುದ್ಧ ಮಕಾಡೆ ಮಲಗಿದ ಪಾಕಿಸ್ತಾನ!
ಪಂದ್ಯ ಸಂಭ್ರಮಿಸುತ್ತಿದ್ದ ನಡುವೆ ಯುವಕ ಮಂಡಿಯೂರಿ ವಿಲ್ ಯು ಮ್ಯಾರಿ ಮಿ ಎಂದು ಕೈ ಬೆರಳು ತೋರಿಸಲು ಹೇಳಿದ್ದಾನೆ. ಬಳಿಕ ರಿಂಗ್ ತೊಡಿಸಿದ್ದಾನೆ. ಹಲವರು ನವ ಜೋಡಿಗೆ ಶುಭಾಶಯಗಳು, ಶೀಘ್ರವೇ ಮದುವೆಯಾಗಿ ಹೊಸ ಬದುಕು ಆರಂಭಿಸಿ ಎಂದು ಹರಸಿದ್ದಾರೆ. ಆದರೆ ಇನ್ನೂ ಕೆಲವರು ಇದು ವೈರಲ್ ಆಗಲು ಮಾಡಿದ ನಾಟಕ ಎಂದಿದ್ದಾರೆ. ಯುವಕನ ವರ್ತನೆ ನೋಡಿದರೆ ಹಾಗೇ ಅನಿಸುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಈ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. 56 ರನ್ ಗೆಲುವು ಕಂಡ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇತ್ತ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ದ ರೋಚಕ ಗೆಲುವು ದಾಖಲಿಸಿತ್ತು. ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿತ್ತು.
ಟೀಂ ಇಂಡಿಯಾಗೆ ಸುಲಭ ತುತ್ತಾದ ನೆದರ್‌ಲೆಂಡ್ಸ್, ಅಂಕಪಟ್ಟಿಯಲ್ಲಿ ರೋಹಿತ್ ಪಡೆಗೆ ಅಗ್ರಸ್ಥಾನ
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿದ್ದ 90000ಕ್ಕೂ ಹೆಚ್ಚು ಪ್ರೇಕ್ಷಕರನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳು ತುದಿಗಾಲಲ್ಲಿ ನಿಲ್ಲಿಸಿದ್ದವು. ಪಂದ್ಯದುದ್ದಕ್ಕೂ ರೋಚಕತೆಗೆ ಬರವಿರಲಿಲ್ಲ. ಬಹು ಮುಖ್ಯ ಎನಿಸಿದ್ದ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ, ಪಾಕಿಸ್ತಾನದ ಬ್ಯಾಟಿಂಗ್ ಆಧಾರಸ್ತಂಭಗಳಾದ ಬಾಬರ್ ಆಜಂ ಹಾಗೂ ಮೊಹಮದ್ ರಿಜ್ವಾನ್‌ರನ್ನು ಬೇಗನೆ ಪೆವಿಲಿಯನ್‌ಗಟ್ಟಿದರೂ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ಆಗಲಿಲ್ಲ. 20 ಓವರಲ್ಲಿ 8 ವಿಕೆಟ್‌ಗೆ ಪಾಕಿಸ್ತಾನ 159 ರನ್ ಕಲೆಹಾಕಿತು.
10 ಓವರ್ ಅಂತ್ಯಕ್ಕೆ ಕೇವಲ 45 ರನ್ ಗಳಿಸಿದ ಭಾರತ ಕೊನೆ 10 ಓವರಲ್ಲಿ ಗೆಲ್ಲಲು 115 ರನ್ ಗಳಿಸಬೇಕಿತ್ತು. 12ನೇ ಓವರಲ್ಲಿ ಭಾರತ ಆಕ್ರಮಣಕಾರಿ ಆಟ ಆರಂಭಿಸಿತು. ಪಾಕಿಸ್ತಾನದ 5ನೇ ಬೌಲರ್ ಮೊಹಮದ್ ನವಾಜ್ ಓವರಲ್ಲಿ 3 ಸಿಕ್ಸರ್ ಸೇರಿ 20 ರನ್ ದೋಚಿದ ಭಾರತಕ್ಕೆ ಕೊನೆ 6 ಓವರಲ್ಲಿ ಗೆಲ್ಲಲು 70 ರನ್ ಬೇಕಿತ್ತು. ಆದರೆ 17ನೇ ಓವರಲ್ಲಿ ಕೇವಲ 6 ರನ್ ಗಳಿಸಿದ ಪರಿಣಾಮ, ಕೊನೆ 18 ಎಸೆತಗಳಲ್ಲಿ 48 ರನ್‌ಗಳ ಅಗತ್ಯವಿತ್ತು. 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ನವಾಜ್ ವೈಡ್ ಎಸೆದರು. ಆ ನಂತರ ಫ್ರೀ ಹಿಟ್‌ನಲ್ಲಿ ಕೊಹ್ಲಿ ಬೌಲ್ಡ್ ಆದರೂ ಬೈ ಮೂಲಕ 3 ರನ್ ತಂಡದ ಮೊತ್ತಕ್ಕೆ ಸೇರ್ಪಡೆಗೊಂಡಿತು. 5ನೇ ಎಸೆತದಲ್ಲಿ ಕಾರ್ತಿಕ್ ಬೌಲ್ಡ್ ಆದಾಗ 1 ಎಸೆತದಲ್ಲಿ 2 ರನ್ ಬೇಕಿತ್ತು. ನವಾಜ್ ಮತ್ತೊಂದು ವೈಡ್ ಎಸೆದರು. ಕೊನೆ ಎಸೆತದಲ್ಲಿ ಬೇಕಿದ್ದ ಒಂದು ರನ್ ಅನ್ನು ಅಶ್ವಿನ್ ಗಳಿಸಿ ತಂಡವನ್ನು ಜಯದ ದಡ ದಾಟಿಸಿದರು.