ಮುಂಬರುವ ವೆಸ್ಟ್‌ ಇಂಡೀಸ್‌ ಪ್ರವಾಸದ ಟಿ20 ಸರಣಿಗೆ ರಾಷ್ಟ್ರೀಯ ಆಯ್ಕೆ ಸಮಿತಿ ಭಾರತ ತಂಡವನ್ನು ಪ್ರಕಟ ಮಾಡಿದ್ದು, ಮತ್ತೊಮ್ಮೆ ರೋಹಿತ್‌ ಶರ್ಮ ಹಾಗೂ ವಿರಾಟ್‌ ಕೊಹ್ಲಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ.

ಮುಂಬೈ (ಜು.5): ವೆಸ್ಟ್‌ ಇಂಡೀಸ್‌ ಪ್ರವಾಸದ ಟಿ20 ಸರಣಿಗೆ ನೂತನ ರಾಷ್ಟ್ರೀಯ ಆಯ್ಕೆ ಸಮಿತಿ ಭಾರತ ತಂಡವನ್ನು ಪ್ರಕಟಿಸಿದೆ. ಹಾರ್ದಿಕ್‌ ಪಾಂಡ್ಯ ನೇತೃತ್ವದ ತಂಡಕ್ಕೆ ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಇಬ್ಬರೂ ಸ್ಥಾನ ಪಡೆದಿಲ್ಲ. ಐಪಿಎಲ್‌ನಲ್ಲಿ ಭರ್ಜರಿ ನಿರ್ವಹಣೆ ತೋರಿದ ರಿಂಕು ಸಿಂಗ್‌ ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಕೆರಿಬಿಯನ್‌ ದ್ವೀಪಗಳು ಹಾಗೂ ಅಮೆರಿಕದ ಫ್ಲಾರಿಡಾದಲ್ಲಿ ಪಂದ್ಯಗಳು ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆಗಸ್ಟ್‌ 3 ರಂದು ಟ್ರೆನಿಡಾಡ್‌ನ ಬ್ರಿಯಾನ್‌ ಲಾರಾ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯಲಿದ್ದರೆ, ನಂತರದ ಎರಡು ಪಂದ್ಯಗಳು 6 ಹಾಗೂ 8 ರಂದು ಗಯಾನದಲ್ಲಿ ನಡೆಯಲಿದೆ. 12 ಹಾಗೂ 13 ರಂದು ಅಮೆರಿಕದ ಫ್ಲಾರಿಡಾದ ಲೌಡೆರ್‌ಹಿಲ್‌ನಲ್ಲಿ ಕೊನೆಯ ಎರಡು ಟಿ20 ಪಂದ್ಯಗಳು ನಡೆಯಲಿದೆ.

ಯುವ ಆಟಗಾರರಾದ ತಿಲಕ್‌ ವರ್ಮ ಹಾಗೂ ಯಶಸ್ವಿ ಜೈಸ್ವಾಲ್‌ ಟಿ20 ಸರಣಿಯ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಅಜಿತ್‌ ಅಗರ್ಕರ್‌ ನೇತೃತ್ವದ ನೂತನ ಆಯ್ಕೆ ಸಮಿತಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ತಂಡದಲ್ಲಿ ತೀರಾ ದೊಡ್ಡ ಬದಲಾವಣೆಗಳನ್ನು ಮಾಡಲು ಹೋಗಿಲ್ಲ. ತಿಲಕ್‌ ವರ್ಮ ಮಾತ್ರವೇ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಇನ್ನೊಂದೆಡೆ ಯಶಸ್ವಿ ಜೈಸ್ವಾಲ್‌ ಈಗಾಗಲೇ ಟೆಸ್ಟ್‌ ಹಾಗೂ ಏಕದಿನ ತಂಡಕ್ಕೆ ಕರೆ ಪಡೆದಿದ್ದರಾದರೂ, ಈಗ ಟಿ20 ತಂಡಕ್ಕೂ ಕರೆ ಪಡೆದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರವಾಗಿ ಆಡುವ ಹೈದರಾಬಾದ್‌ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮ, ಕಳೆದ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೂ ಆಡಿರುವ 25 ಪಂದ್ಯಗಳಿಂದ 38.45ರ ಸರಾಸರಿಯಲ್ಲಿ 740 ರನ್‌ ಬಾರಿಸಿದ್ದಾರೆ ಅದರೊಂದಿಗೆ 4 ಪ್ರಥಮ ದರ್ಜರ ಪಂದ್ಯ, 16 ಲಿಸ್ಟ್‌ ಎ ಪಂದ್ಯ ಹಾಗೂ 15 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಕಳೆದ ತಿಂಗಳು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೆಲವೊಂದು ಹೊಸ ಮುಖಗಳನ್ನು ಪರಿಚಯಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದ್ದವು. ಅದರಂತೆ ಚೇತೇಶ್ವರ ಪೂಜಾರರನ್ನು ತಂಡದಿಂದ ಕೈಬಿಡಲಾಗಿದ್ದರೆ, ಯಶಸ್ವಿ ಜೈಸ್ವಾಲ್‌ ಹಾಗೂ ರುತುರಾಜ್‌ ಗಾಯಕ್ವಾಡ್‌ರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇನ್ನು ಏಕದಿನ ತಂಡದಲ್ಲೂ ಕೆಲ ಬದಲಾವಣೆ ಮಾಡಲಾಗಿತ್ತು. ರುತುರಾಜ್‌ ಗಾಯಕ್ವಾಡ್‌ ಏಕದಿನ ತಂಡದಲ್ಲೂ ಸ್ಥಾನ ಪಡೆದರೆ, ಸಂಜು ಸ್ಯಾಮ್ಸನ್‌ ಕೂಡ ಕರೆ ಪಡೆದಿದ್ದರು. ಈಗ ಟಿ20 ತಂಡದಲ್ಲಿಯೂ ಪ್ರಮುಖ ಬದಲಾವಣೆಗಳನ್ನು ಮಾಡುವ ಮೂಲಕ ಯುವ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. 

ಸಾಕ್ಷಿಯನ್ನು ಧೋನಿ ಮೊದಲು ಭೇಟಿಯಾಗಿದ್ದೆಲ್ಲಿ? ಇಲ್ಲಿದೆ ನೋಡಿ ನಿಜವಾದ ಇಂಟ್ರೆಸ್ಟಿಂಗ್ ಸ್ಟೋರಿ

ಭಾರತದ ತಂಡ: ಇಶಾನ್ ಕಿಶನ್ (ವಿ.ಕೀ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ..! ಕಾರು ಅಪ್ಪಚ್ಚಿ