ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕಾರು ಅಪಘಾತ..! ಕಾರು ಅಪ್ಪಚ್ಚಿ
ಭೀಕರ ಕಾರು ಅಪಘಾತಕ್ಕೆ ಒಳಗಾದ ಪ್ರವೀಣ್ ಕುಮಾರ್ ಅವರಿದ್ದ ಕಾರು
ಪ್ರವೀಣ್ ಕುಮಾರ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
ಮೀರತ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರು ಅಪ್ಪಚ್ಚಿ
ಮೀರತ್(ಜು.05): ಟೀಂ ಇಂಡಿಯಾ ತಾರಾ ಕ್ರಿಕೆಟಿಗ ರಿಷಭ್ ಪಂತ್ ಅವರ ಅಪಘಾತದ ಸುದ್ದಿ ಮಾಸುವ ಮುನ್ನವೇ ಇದೀಗ ಮತ್ತೊಂದು ಅಂತಹದ್ದೇ ಪ್ರಕರಣ ನಡೆದಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಹಾಗೂ ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಮೀರತ್‌ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಅದೃಷ್ಟವಶಾತ್ ಈ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಅವಘಡವು ಮಂಗಳವಾರ ರಾತ್ರಿ ಸುಮಾರು 10 ಗಂಟೆಯ ವೇಳೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾಂಡವ್ ಪುರದಿಂದ ವಾಪಾಸ್ಸಾಗುತ್ತಿದ್ದ ವೇಳೆ ಅತಿವೇಗವಾಗಿ ಚಲಿಸುತ್ತಿದ್ದ ಟ್ರಕ್, ಲ್ಯಾಂಡ್ ರೋವರ್ ಕಾರಿಗೆ ಡಿಕ್ಕಿ ಹೊಡೆದಿದೆ. ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ (Praveen Kumar Car Accident) ಹಾಗೂ ಅವರ ಪುತ್ರ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದು, ಕಾರು ನುಜ್ಜುಗುಜ್ಜಾಗಿದೆ. ಇನ್ನು ಸಿವಿಲ್ ಲೈನ್ಸ್ ಪೊಲೀಸರು ಸ್ಥಳಕ್ಕೆ ತಕ್ಷಣವೇ ಆಗಮಿಸಿ ಟ್ರಕ್ ಡ್ರೈವರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾ (Team India Cricketer Praveen Kumar) ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಮೀರತ್‌ನ ಮುಲ್ತಾನ್ ನಗರದ ನಿವಾಸಿಯಾಗಿದ್ದಾರೆ. ಭೀಕರ ರಸ್ತೆ ಅಪಘಾತದ ಹೊರತಾಗಿಯೂ ಪ್ರವೀಣ್ ಕುಮಾರ್ ಹಾಗೂ ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರವೀಣ್ ಕುಮಾರ್ ರಸ್ತೆ ಅಪಘಾತಕ್ಕೆ (Road Accident) ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು 2007ರಲ್ಲಿ ಓಪನ್ ಜೀಪ್‌ನಲ್ಲಿ ಪ್ರಯಾಣ ಮಾಡುವಾಗ ಡೆಲ್ಲಿ-ಮೀರತ್ ರಸ್ತೆಯಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದರು. ಆಗಲು ಕೂಡಾ ಪ್ರವೀಣ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಕ್ರಿಕೆಟ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಭೇಟಿ ಮಾಡಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ಹೊಸಚೆಂಡನ್ನು ಎರಡೂ ಕಡೆ ಅಂದರೆ ಇನ್‌ಸ್ವಿಂಗ್ ಹಾಗೂ ಔಟ್ ಸ್ವಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಟೀಂ ಇಂಡಿಯಾ ಮೀಡಿಯಂ ಪೇಸರ್ ಪ್ರವೀಣ್ ಕುಮಾರ್, ಭಾರತ ಪರ 6 ಟೆಸ್ಟ್, 68 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. 2007ರಿಂದ 2012ರವರೆಗೆ ಪ್ರವೀಣ್ ಕುಮಾರ್ ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರವೀಣ್ ಕುಮಾರ್ ಮೂರು ಮಾದರಿಯಿಂದ ಒಟ್ಟಾಗಿ 112 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 2012ರ ಬಳಿಕ ಪ್ರವೀಣ್ ಕುಮಾರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರಾದರು.
ಪ್ರವೀಣ್ ಕುಮಾರ್, 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ ಎಸ್ ಧೋನಿ (MS Dhoni) ನೇತೃತ್ವದ ಸಿಬಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು 2011ರ ಏಕದಿನ ವಿಶ್ವಕಪ್ ಸಂಭಾವ್ಯ ಆಟಗಾರರ ತಂಡದಲ್ಲೂ ಪ್ರವೀಣ್ ಕುಮಾರ್ ಸ್ಥಾನ ಪಡೆದಿದ್ದರು. ಆದರೆ ಅದೇ ವೇಳೆ ಗಾಯದ ಸಮಸ್ಯೆಯಿಂದಾಗಿ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು.
ಈ ಹಿಂದೆ ಕಳೆದ ವರ್ಷದ ಡಿಸೆಂಬರ್ 30ರಂದು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಡೆಲ್ಲಿ-ಡೆಹರಾಡೂನ್ ಹೈವೇನಲ್ಲಿ ತಡರಾತ್ರಿ ಕಾರು ಚಲಾಯಿಸುತ್ತಿದ್ದ ವೇಳೆ ರಸ್ತೆ ಡಿವೈಂಡರ್‌ಗೆ ಕಾರು ಅಪ್ಪಳಿಸಿತ್ತು. ಈ ವೇಳೆ ರಿಷಭ್ ಪಂತ್ ಅವರಿದ್ದ ಕಾರು ಹೊತ್ತಿ ಉರಿದಿತ್ತು. ಈ ಭೀಕರ ರಸ್ತೆ ಅಪಘಾತದ ಹೊರತಾಗಿಯೂ ಸ್ಥಳೀಯರು ನೆರವಿಗೆ ಧಾವಿಸಿ, ಸೂಕ್ತ ಚಿಕಿತ್ಸೆ ದೊರೆತಿದ್ದರಿಂದಾಗಿ ರಿಷಭ್ ಪಂತ್ ಕೂಡಾ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ರಿಷಭ್ ಪಂತ್ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾಗಿ ಸಂಪೂರ್ಣ ಚೇತರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಸದ್ಯ ರಿಷಭ್ ಪಂತ್ ಟೀಂ ಇಂಡಿಯಾ ಕೂಡಿಕೊಳ್ಳಲು ಎದುರು ನೋಡುತ್ತಿದ್ದಾರೆ.