Asianet Suvarna News Asianet Suvarna News

ಮುಷ್ತಾಕ್ ಅಲಿ ಟ್ರೋಫಿ: ರಾಹುಲ್-ಪಡಿಕ್ಕಲ್ ಅಬ್ಬರ, ಫೈನಲ್ ಪ್ರವೇಶಿಸಿದ ಕರ್ನಾಟಕ

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಕರ್ನಾಟಕ ತಂಡ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಬೌಲಿಂಗ್‌ನಲ್ಲಿ ಮಿಥುನ್ 5 ವಿಕೆಟ್ ಪಡೆದರೆ, ರಾಹುಲ್ ಹಾಗೂ ಪಡಿಕ್ಕಲ್ ಅರ್ಧಶತಕ ಸಿಡಿಸಿ ಮಿಂಚಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Syed Mushtaq Ali Trophy Rahul Padikkal half century karnataka makes into final
Author
Surat, First Published Nov 29, 2019, 5:38 PM IST

ಸೂರತ್[ನ.29]: ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ಹರ್ಯಾಣ ತಂಡವನ್ನು 8 ವಿಕೆಟ್ ವಿಕೆಟ್’ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಹರ್ಯಾಣ ಗೆಲುವಿನ ನಾಗಾಲೋಟಕ್ಕೆ ತೆರೆಬಿದ್ದಿದೆ. 195 ರನ್‌ಗಳ ಗುರಿಯನ್ನು ಇನ್ನೂ 5 ಓವರ್ ಬಾಕಿ ಇರುವಂತೆಯೇ ಗೆಲುವು ದಾಖಲಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮನೀಶ್ ಪಾಂಡೆ ಪಡೆ ಹೊಸ ದಾಖಲೆ ಬರೆದಿದೆ.

ಮುಷ್ತಾಕ್ ಅಲಿ ಟ್ರೋಫಿ: ಮಿಥುನ್ ಹ್ಯಾಟ್ರಿಕ್, ಆದರೂ ಕರ್ನಾಟಕಕ್ಕೆ ಕಠಿಣ ಗುರಿ

ಹರ್ಯಾಣ ನೀಡಿದ್ದ 195 ರನ್’ಗಳ ಗುರಿ ಕರ್ನಾಟಕದ ಪಾಲಿಗೆ ಸವಾಲಾಗಲೇ ಇಲ್ಲ. ಕೆ.ಎಲ್. ರಾಹುಲ್[66] ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್’ಗೆ 9.3 ಓವರ್’ಗಳಲ್ಲಿ 125 ರನ್’ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿದರು. ರಾಹುಲ್-ಪಡಿಕ್ಕಲ್ ಜೋಡಿ ಹರ್ಯಾಣ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿದರು. ರಾಹುಲ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಮನಮೋಹಕ ಸಿಕ್ಸರ್’ಗಳ ನೆರವಿನಿಂದ 66 ರನ್ ಬಾರಿಸಿ ಜಯಂತ್ ಯಾದವ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಮಯಾಂಕ್ ಕೂಡಿಕೊಂಡ ದೇವದತ್ ಮಿಂಚಿನ ಬ್ಯಾಟಿಂಗ್ ಮುಂದುವರೆಸಿದರು. ವೃತ್ತಿಜೀವನದ ಅದ್ಭುತ ಫಾರ್ಮ್’ನಲ್ಲಿರುವ ದೇವದತ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. ಅಂತಿಮವಾಗಿ ಪಡಿಕ್ಕಲ್ 42 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 87 ರನ್ ಬಾರಿಸಿ ಹರ್ಷಲ್ ಪಟೇಲ್’ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಮನೀಶ್ ಪಾಂಡೆ, ಮಯಾಂಕ್ ಅಗರ್’ವಾಲ್ ತಂಡವನ್ನು ಇನ್ನೂ 5 ಓವರ್ ಬಾಕಿ ಇರುವಂತೆಯೇ  ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಹರ್ಯಾಣ ಚೈತನ್ಯ ಬಿಷ್ಣೋಯಿ[55], ಹಿಮಾಂಶು ರಾಣಾ[61] ಅರ್ಧಶತಕಗಳ ನೆರವಿನಿಂದ 194 ರನ್ ಬಾರಿಸಿತ್ತು. ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಹಿತ ಒಂದೇ ಓವರ್’ನಲ್ಲಿ 5 ವಿಕೆಟ್ ಪಡೆದು ಮಿಂಚಿದರು.  

Follow Us:
Download App:
  • android
  • ios