ಬೆಂಗಳೂರು(ಜ.14): ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ನಾಕೌಟ್ ಹಂತಕ್ಕೇರಬೇಕಿದ್ದರೆ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಉಳಿದ ಮೂರು ಪಂದ್ಯಗಳನ್ನು ಜಯಿಸಬೇಕಿದೆ.

ಗುರುವಾರ ಇಲ್ಲಿನ ಕೆಎಸ್‌ಸಿಎ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ತ್ರಿಪುರಾ ವಿರುದ್ದದ 'ಎ' ಗುಂಪಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವುದರ ಜತೆಗೆ 2 ಅಂಕಗಳೊಂದಿಗೆ ನೆಟ್ ರನ್‌ರೇಟ್ ಉತ್ತಮಗೊಳಿಸಿಕೊಳ್ಳಲು ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಎದುರು ನೋಡುತ್ತಿದೆ.

ಮುಷ್ತಾಕ್ ಅಲಿ ಟ್ರೋಫಿ: ಪಂಜಾಬ್‌ ಎದುರು ಕರ್ನಾಟಕಕ್ಕೆ ಹೀನಾಯ ಸೋಲು

ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ತಂಡ ಆ ಬಳಿಕ ಪಂಜಾಬ್ ಎದುರು ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತ್ತು. 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕರುಣ್ ನಾಯರ್ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಲಯ ಕಂಡುಕೊಂಡಿಲ್ಲ. ಹೀಗಾಗಿ ರಾಜ್ಯ ತಂಡದ ನಾಯಕನ ಮೇಲೆ ಸಾಕಷ್ಟು ಒತ್ತಡವಿದೆ.

ನಾಯಕನ ಫಾರ್ಮ್‌ ಕೊರತೆ ಜತೆಗೆ ಕೆ.ಎಲ್‌. ರಾಹುಲ್‌, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್ ಅವರಂತಹ ಸ್ಟಾರ್ ಆಟಗಾರರ ಅನುಪಸ್ಥಿತಿ ಕೂಡಾ ಕರ್ನಾಟಕ ತಂಡವನ್ನು ಬಹುವಾಗಿ ಕಾಡಲಾರಂಭಿಸಿದೆ. ಹೀಗಾಗಿ ಈ ಎಲ್ಲಾ ಸವಾಲುಗಳನ್ನು ಕರ್ನಾಟಕ ತಂಡ ಯಾವ ರೀತಿ ಎದುರಿಸಲಿದೆ ಎನ್ನುವ ಕುತೂಹಲ ಜೋರಾಗಿದೆ.