ಬೆಂಗಳೂರು(ಜ.12): ವೇಗಿ ಸಿದ್ದಾರ್ಥ್‌ ಕೌಲ್‌ ಮಾರಕ ದಾಳಿ(26/4) ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಿಮ್ರನ್‌ಜಿತ್‌ ಸಿಂಗ್(89*) ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪಂಜಾಬ್‌ ತಂಡ ಹಾಲಿ ಚಾಂಪಿಯನ್‌ ಕರ್ನಾಟಕದೆದುರು 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಮನ್ದೀಪ್ ಸಿಂಗ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಪಂಜಾಬ್‌ ತಂಡ ಬಲಿಷ್ಠ ಕರ್ನಾಟಕ ತಂಡವನ್ನು 125 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರೋಹನ್ ಕದಂ 32 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಪಂಜಾಬ್‌ ಬೌಲಿಂಗ್ ಪಡೆ ಎದುರು ದಿಟ್ಟ ಪ್ರದರ್ಶನ ತೋರಲು ವಿಫಲವಾದರು. ಪರಿಣಾಮ ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 125 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ಪಂಜಾಬ್‌ ಎದುರಾಳಿ

ಇನ್ನು ಸಾಧಾರಣ ಗುರಿ ಬೆನ್ನತ್ತಿದ ಪಂಜಾಬ್ ತಂಡಕ್ಕೆ ಅಭಿಷೇಕ್‌ ಶರ್ಮಾ ಹಾಗೂ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಸಿಮ್ರನ್ ಸಿಂಗ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 11.2 ಓವರ್‌ಗಳಲ್ಲಿ 93 ರನ್‌ಗಳ ಜತೆಯಾಟವಾಡಿತು. ಈ ಜೋಡಿಯನ್ನು ಕೃಷ್ಣಪ್ಪ ಗೌತಮ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಅಭಿಶೇಕ್ ಶರ್ಮಾ 30 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕವೂ ಮಿಂಚಿನ ಬ್ಯಾಟಿಂಗ್ ನಡೆಸಿದ ಸಿಮ್ರನ್‌ ಸಿಂಗ್‌ ಕೇವಲ 52 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 89 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 125/8
ರೋಹನ್ ಕದಂ: 32
ಸಿದ್ಧಾರ್ಥ್ ಕೌಲ್: 26/4

ಪಂಜಾಬ್‌: 127/1
ಸಿಮ್ರನ್ ಸಿಂಗ್: 89*
ಕೆ. ಗೌತಮ್‌: 28/1