ಬೆಂಗಳೂರು(ಜ.16): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ, ನಾಕೌಟ್‌ ಹಂತಕ್ಕೇರಬೇಕಿದ್ದರೆ ಉಳಿದಿರುವ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ. 

ಶನಿವಾರ ಇಲ್ಲಿನ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ, ರೈಲ್ವೇಸ್‌ ತಂಡದ ಸವಾಲನ್ನು ಎದುರಿಸಲಿದೆ. ಎಲೈಟ್‌ ‘ಎ’ ಗುಂಪಿನಲ್ಲಿರುವ ಕರ್ನಾಟಕ ತಂಡ ಸದ್ಯ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 8 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಗೆದ್ದು ನೆಟ್‌ರನ್‌ರೇಟ್‌ನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿ ಕರ್ನಾಟಕ ತಂಡವಿದೆ. 

ಮುಷ್ತಾಕ್ ಅಲಿ ಟೂರ್ನಿಯಿಂದ ಹೊರಬಿದ್ದು ಆಸ್ಪತ್ರೆ ಸೇರಿದ ಟೀಂ ಇಂಡಿಯಾ ವೇಗಿ..!

ಮೊದಲ ಪಂದ್ಯದಲ್ಲಿ ಜಮ್ಮುಕಾಶ್ಮೀರ ವಿರುದ್ಧ ಗೆದ್ದಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸೋತಿತ್ತು. 3ನೇ ಪಂದ್ಯದಲ್ಲಿ ತ್ರಿಪುರಾ ವಿರುದ್ಧ 10 ರನ್‌ಗಳಿಂದ ಗೆದ್ದ ಕರ್ನಾಟಕ, ನಾಕೌಟ್‌ ಆಸೆಯನ್ನು ಜೀವಂತ ಇರಿಸಿಕೊಂಡಿದೆ. ಇನ್ನು ರೈಲ್ವೇಸ್‌ ಕೂಡ, 3 ಪಂದ್ಯಗಳಿಂದ 2ರಲ್ಲಿ ಜಯ ಪಡೆದಿದ್ದು, 8 ಅಂಕಗಳಿಸಿ 4ನೇ ಸ್ಥಾನದಲ್ಲಿದೆ. ನಾಯಕ ಕರುಣ್‌ ನಾಯರ್‌ ಕಳಪೆ ಲಯದಲ್ಲಿದ್ದು, ಅವರ ಮೇಲೆ ಹೆಚ್ಚಿನ ಒತ್ತಡವಿದೆ. ಮತ್ತೊಮ್ಮೆ ತಂಡ ಯುವ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ.

ಆರಂಭ: ಮಧ್ಯಾಹ್ನ 12ಕ್ಕೆ