ನವದೆಹಲಿ(ಜ.14): ಕೊರೋನಾ ಹೆಮ್ಮಾರಿಯ ಆತಂಕದ ನಡುವೆ ಜಾಗತಿಕ ಮಟ್ಟದಲ್ಲಿ ಕ್ರೀಡಾಚಟುವಟಿಕೆಗಳು ಆರಂಭವಾಗಿವೆ. ಇದೆಲ್ಲದರ ನಡುವೆ ಕ್ರಿಕೆಟಿಗರು ಸೇರಿದಂತೆ ಹಲವು ಕ್ರೀಡಾಪಟುಗಳು ಗಾಯದ ಸಮಸ್ಯೆ ಹಾಗೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಪಟ್ಟಿಗೆ ಇದೀಗ ಹೊಸ ಸೇರ್ಪಡೆಯೆಂದರೆ ಅದು ಟೀಂ ಇಂಡಿಯಾ ವೇಗಿ ವರುಣ್ ಆರೋನ್.

ಜಾರ್ಖಂಡ್‌ ವೇಗದ ಬೌಲರ್ ಆಗಿರುವ ವರುಣ್‌, ಗಂಟಲು ನೋವಿನ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಕಿರಿ-ಕಿರಿ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ವರುಣ್ ಆರೋನ್‌ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ಮಾಧ್ಯಮವೊಂದರ ವರದಿಯ ಪ್ರಕಾರ ವರುಣ್‌ ಆರೋನ್‌ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೂಕ್ತ ರೀತಿಯಲ್ಲಿ ವೈದ್ಯರಿಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ವರುಣ್ ಆರೋನ್ ಆರೋಗ್ಯ ಸ್ಥಿರವಾಗಿದ್ದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಆಸ್ಟ್ರೇಲಿಯಾ ಎದುರು ಗಾಯಕ್ಕೆ ತುತ್ತಾದವರು ಟೀಂ ಇಂಡಿಯಾದ ಒಬ್ಬಿಬ್ಬರಲ್ಲ, ಬರೋಬ್ಬರಿ ಅರ್ಧ ಡಜನ್..!

ವರುಣ್‌ ಆರೋನ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ರಾಯಲ್ಸ್‌ ಪರ ಕೇವಲ 3 ಪಂದ್ಯವನ್ನಾಡಿದ್ದ ಆರೋನ್‌ ಯಾವುದೇ ವಿಕೆಟ್ ಕಬಳಿಸಲು ಯಶಸ್ವಿಯಾಗಿರಲಿಲ್ಲ. ಇನ್ನು ಈ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದ ವರುಣ್‌ ಯಾವುದೇ ಬಲಿ ಪಡೆಯಲು ಸಫಲವಾಗಿರಲಿಲ್ಲ.