ಸಯ್ಯದ್ ಮುಷ್ತಾಕ್ ಅಲಿ ಟಿ20: ಕರ್ನಾಟಕಕ್ಕೆ ‘ಸನ್’ ಸ್ಟ್ರೋಕ್!
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ವಿರುದ್ಧ ಕರ್ನಾಟಕ ಮುಗ್ಗರಿಸಿದೆ. ಇದರೊಂದಿಗೆ ಮನೀಶ್ ಪಡೆ ಸೆಮೀಸ್ ಹಾದಿ ದುರ್ಗಮವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಸೂರತ್[ನ.26]: ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಕ್ಕಾಗಿ ಕರ್ನಾಟಕ ತಂಡ ಕಾತರಿಸುತ್ತಿದೆ. ಆದರೆ ಸೋಮವಾರ ಇಲ್ಲಿ ನಡೆದ ಸೂಪರ್ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡ, ಮುಂಬೈ ವಿರುದ್ಧ 7 ವಿಕೆಟ್‌ಗಳ ಸೋಲು ಕಂಡಿದ್ದು ಸೆಮೀಸ್ ಹಾದಿ ಕಠಿಣವಾಗಿದೆ. ಬುಧವಾರ ನಡೆಯಲಿರುವ ಸೂಪರ್ ಲೀಗ್ ಹಂತದ ‘ಬಿ’ ಗುಂಪಿನ ಕೊನೆಯ ಪಂದ್ಯಗಳಲ್ಲಿ ಪಂಜಾಬ್-ಮುಂಬೈ ಹಾಗೂ ತಮಿಳುನಾಡು-ಜಾರ್ಖಂಡ್ ನಡುವಿನ ಫಲಿತಾಂಶ ಕರ್ನಾಟಕದ ಸೆಮೀಸ್ ಹಾದಿಯನ್ನು ನಿರ್ಧರಿಸಲಿದೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈ ಎದುರು ಕರ್ನಾಟಕಕ್ಕೆ ಆರಂಭಿಕ ಆಘಾತ
ಆಡಿರುವ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿರುವ ಕರ್ನಾಟಕ ‘ಬಿ’ ಗುಂಪಿನಲ್ಲಿ 12 ಅಂಕಗಳಿಂದ ಅಗ್ರಸ್ಥಾನದಲ್ಲಿದೆ. ತಮಿಳುನಾಡು ಹಾಗೂ ಮುಂಬೈ ತಂಡಗಳು ತಲಾ 3 ಪಂದ್ಯಗಳಿಂದ 2ರಲ್ಲಿ ಜಯ ಸಾಧಿಸಿದ್ದು 8 ಅಂಕಗಳಿಂದ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಜಾರ್ಖಂಡ್ ಈಗಾಗಲೇ 3 ಪಂದ್ಯಗಳನ್ನು ಸೋತಿದ್ದು ಟೂರ್ನಿಯಿಂದ ಹೊರಬಿದ್ದಿದೆ. ಕೊನೆಯ ಪಂದ್ಯಗಳಲ್ಲಿ ತಮಿಳುನಾಡು ಮತ್ತು ಮುಂಬೈ ತಂಡಗಳು ಗೆಲುವು ಸಾಧಿಸಿದ್ದೆ ಆದಲ್ಲಿ ಮನೀಶ್ ಪಡೆಯ ಸೆಮೀಸ್ ಹಾದಿ ದುರ್ಗಮವಾಗಲಿದೆ.
‘ಬಿ’ ಗುಂಪಿನಲ್ಲಿ ಪಂಜಾಬ್ ಉತ್ತಮ ನೆಟ್‌ರನ್ ರೇಟ್ ಹೊಂದಿದೆ. ಆದರೆ ಸೋಮವಾರ ನಡೆದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಪಂಜಾಬ್ ಸೋತ ಕಾರಣ ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದರೆ ಕರ್ನಾಟಕ ಸೆಮೀಸ್‌ಗೇರಲಿದೆ. ಹೀಗಾಗಿ ಪಂಜಾಬ್ ಹಾಗೂ ಮುಂಬೈ ಪಂದ್ಯದಲ್ಲಿ ಪಂಜಾಬ್ ಗೆಲುವು ಮನೀಶ್ ಬಳಗಕ್ಕೆ ಅನಿವಾರ್ಯವಾಗಿದೆ.
‘ಎ’ ಗುಂಪಿನಲ್ಲಿ ಹರಾರಯಣ 3 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 12 ಅಂಕಗಳಿಂದ ಅಗ್ರಸ್ಥಾನದಲ್ಲಿದ್ದು, ಸೆಮೀಸ್ ಹಂತವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. 2 ಮತ್ತು 3ನೇ ಸ್ಥಾನದಲ್ಲಿರುವ ಬರೋಡಾ ಹಾಗೂ ದೆಹಲಿ ನಡುವೆ ಸೆಮೀಸ್‌ಗೇರಲು ಪೈಪೋಟಿ ಏರ್ಪಟ್ಟಿದೆ. ಸೂಪರ್ ಲೀಗ್ ಹಂತದ 2 ಗುಂಪುಗಳಲ್ಲಿ ತಲಾ 5 ತಂಡಗಳಿದ್ದು ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮೀಸ್ ಹಂತಕ್ಕೇರಲಿವೆ.
ಸೂರ್ಯ ಆಸರೆ:
ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 172 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪೃಥ್ವಿ ಶಾ ಜೊತೆ ಕ್ರೀಸ್‌ಗಿಳಿದ ಆದಿತ್ಯ ತಾರೆ (12) ವೇಗಿ ರೋನಿತ್ ಮೋರೆಗೆ ಮೊದಲ ಬಲಿಯಾದರು. ಬಳಿಕ ವೇಗದ ಬ್ಯಾಟಿಂಗ್ ನಡೆಸಿದ ಪೃಥ್ವಿ 17 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಹಿತ 30 ರನ್‌ಗಳಿಸಿ ಪ್ರವೀಣ್ ದುಬೆಗೆ ವಿಕೆಟ್ ಒಪ್ಪಿಸಿದರು. 44 ರನ್‌ಗಳಿಗೆ ಮುಂಬೈ 2 ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಅಯ್ಯರ್ ಜೊತೆಯಾದ ನಾಯಕ ಸೂರ್ಯಕುಮಾರ್ ಯಾದವ್ ಕರ್ನಾಟಕದ ಬೌಲರ್‌ಗಳನ್ನು ದಂಡಿಸಿದರು. 3ನೇ ವಿಕೆಟ್‌ಗೆ ಶ್ರೇಯಸ್ (14) ಜೊತೆಯಾಟದಲ್ಲಿ 46 ರನ್‌ಗಳಿಸಿದರು. ನಂತರ ಮುರಿಯದ 4ನೇ ವಿಕೆಟ್‌ಗೆ ಶಿವಂ ದುಬೆ ಜೊತೆಯಾಗಿ ಅಸಲಿ ಆಟವಾಡಿದ ಸೂರ್ಯ, ಇನ್ನು 1 ಓವರ್ ಬಾಕಿ ಇರುವಂತೆ 3 ವಿಕೆಟ್‌ಗೆ 174 ರನ್‌ಗಳಿಸಿ ಮುಂಬೈಗೆ ಗೆಲುವು ತಂದುಕೊಟ್ಟರು. ಸೂರ್ಯ 53 ಎಸೆತಗಳಿಂದ 11 ಬೌಂಡರಿ, 4 ಸಿಕ್ಸರ್ ಸಹಿತ 94 ರನ್‌ಗಳಿಸಿದರು. ದುಬೆ 22 ರನ್‌ಗಳಿಸಿ ಅಜೇಯರಾಗುಳಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಕರ್ನಾಟಕ ಬೌಲರ್‌ಗಳು ನೀರಸ ಪ್ರದರ್ಶನ ತೋರಿದರು.
ದೇವದತ್-ರೋಹನ್ ಜುಗಲ್‌ಬಂದಿ:
ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಮುಂಬೈ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋಲುಂಡಿದ್ದು ಸೆಮೀಸ್ ಹಾದಿ ಕಠಿಣವಾಗಿದೆ. ಇನ್ನಿಂಗ್ಸ್‌ನ 2ನೇ ಎಸೆತದಲ್ಲಿ ಕೆ.ಎಲ್. ರಾಹುಲ್ (0) ಶಾಮ್ಸ್ ಮುಲಾನಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಾಯಕ ಮನೀಶ್ ಪಾಂಡೆ (4), ಕರುಣ್ ನಾಯರ್ (8) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು. 19 ರನ್‌ಗಳಿಸುವಷ್ಟರಲ್ಲಿ ಕರ್ನಾಟಕ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 4ನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಹಾಗೂ ರೋಹನ್ ಕದಂ ಚೇತರಿಕೆ ನೀಡಿದರು. ಇವರಿಬ್ಬರ ಜುಗಲ್‌ಬಂದಿಗೆ ಬೇರ್ಪಡಿಸಲು ಮುಂಬೈ ಬೌಲರ್‌ಗಳು ಹರಸಾಹಸಪಟ್ಟರು.
ದೇವದತ್ 34 ಎಸೆತಗಳಲ್ಲಿ ತಲಾ 4 ಬೌಂಡರಿ, 4 ಸಿಕ್ಸರ್ ಸಹಿತ 57 ರನ್‌ಗಳಿಸಿದರೆ, ರೋಹನ್ ಕದಂ 47 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನೊಂದಿಗೆ 71 ರನ್‌ಗಳಿಸಿದರು. ಈ ಜೋಡಿ 80 ರನ್ ಕಲೆಹಾಕಿತು. ಇವರಿಬ್ಬರ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ಸವಾಲಿನ ಮೊತ್ತ ದಾಖಲಿಸಿತು. ಇಲ್ಲವಾದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಸಾಧ್ಯತೆಯಿತ್ತು. ಪವನ್ ದೇಶಪಾಂಡೆ (13) ನಿರಾಸೆ ಮೂಡಿಸಿದರು. ಕರ್ನಾಟಕ ಮುಂಬೈ ಪರ ಶಾರ್ದೂಲ್ ಠಾಕೂರ್, ಶಿವಂ ದುಬೆ ತಲಾ 2 ವಿಕೆಟ್ ಪಡೆದರು.
ಸ್ಕೋರ್:
ಕರ್ನಾಟಕ 171/6 (ದೇವದತ್ 57, ರೋಹನ್ 71, ಶಾರ್ದೂಲ್ 2-29)
ಮುಂಬೈ 174/3 (ಸೂರ್ಯಕುಮಾರ್ 94* ಪೃಥ್ವಿ 30, ಶ್ರೇಯಸ್ 1-19)