ವಿಶಾಖಪಟ್ಟಣಂ[ನ.17]: ಪವನ್ ದೇಶಪಾಂಡೆ ಸ್ಫೋಟಕ ಅರ್ಧಶತಕ ಹಾಗೂ ಶ್ರೇಯಸ್ ಗೋಪಾಲ್ ಆಕರ್ಷಕ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ 35 ರನ್ ಗಳಿಂದ ಗೋವಾ ತಂಡವನ್ನು ಮಣಿಸಿದೆ. ಇದರೊಂದಿಗೆ ಅಗ್ರಸ್ಥಾನಿಯಾಗಿ ಸೂಪರ್ ಲೀಗ್ ಹಂತ ಪ್ರವೇಶಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಆರಂಭದಲ್ಲೇ ದೇವದತ್ ಪಡಿಕ್ಕಲ್[11] ವಿಕೆಟ್ ಕಳೆದುಕೊಂಡಿತು. ಕೆ.ಎಲ್. ರಾಹುಲ್ 34, ಮನೀಶ್ ಪಾಂಡೆ 17, ಕರುಣ್ ನಾಯರ್ 21 ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು.

ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕಿಂದು ಗೋವಾ ಚಾಲೆಂಜ್‌

ಪವನ್ ಸ್ಫೋಟಕ ಬ್ಯಾಟಿಂಗ್: ಕರ್ನಾಟಕದ ಆಲ್ರೌಂಡರ್ ಪವನ್ ದೇಶಪಾಂಡೆ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ರನ್ ಗಳಿಕೆಗೆ ವೇಗ ಹೆಚ್ಚಿಸಿದರು. 32 ಎಸೆತಗಳಲ್ಲಿ 1 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 63 ರನ್ ಬಾರಿಸಿದರು. ಇದರೊಂದಿಗೆ ತಂಡ ಸ್ಫರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಗುರಿ ಬೆನ್ನತ್ತಿದ ಗೋವಾ ತಂಡಕ್ಕೆ ರೋನಿತ್ ಮೋರೆ ಆರಂಭಿಕ ಆಘಾತ ನೀಡಿದರು. ಆದಿತ್ಯ ಕೌಶಿಕ್[48] ಹಾಗೂ ಮಲ್ಲಿಕ್ ಸಾಬ್ ಶಿರೂರ್ [27] ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 60ರ ಗಡಿದ ದಾಟಿಸಿದರು. ಶ್ರೇಯಸ್ ಗೋಪಾಲ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ಕರ್ನಾಟಕದ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿದ ಗೋವಾ ನಾಟಕೀಯ ಕುಸಿತ ಕಂಡಿತು. ಒಂದು ಹಂತದಲ್ಲಿ 16 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದ್ದ ಗೋವಾ, ಆ ಬಳಿಕ ದಿಢೀರ್ ಕುಸಿತ ಕಂಡಿತು. ತಂಡದ ಖಾತೆಗೆ 15 ರನ್ ಸೇರಿಸುವಷ್ಟರಲ್ಲಿ ಮತ್ತೆ 5 ವಿಕೆಟ್ ಕಳೆದುಕೊಳ್ಳುವ ಹೀನಾಯ ಸೋಲು ಕಂಡಿತು.

ಕರ್ನಾಟಕ ಪರ ಶ್ರೇಯಸ್ ಗೋಪಾಲ್ 14 ನೀಡಿ 3 ವಿಕೆಟ್ ಪಡೆದರೆ, ಪ್ರವೀಣ್ ದುಬೈ, ರೋನಿತ್ ಮೋರೆ ಹಾಗೂ ಅಭಿಮನ್ಯು ಮಿಥುನ್ ತಲಾ 2 ವಿಕೆಟ್ ಪಡೆದರೆ, ಜೆ ಸುಚಿತ್ 1 ವಿಕೆಟ್ ಪಡೆದರು.