Asianet Suvarna News Asianet Suvarna News

ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟ್ರೋಫಿಗೆ ಬಲಿಷ್ಠ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ

* ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಗೆ 20 ಆಟಗಾರರನ್ನೊಳಗೊಂಡ ಕರ್ನಾಟಕ ತಂಡ ಪ್ರಕಟ

* ಅನುಭವಿ ಬ್ಯಾಟರ್‌ ಮನೀಶ್‌ ಪಾಂಡೆಗೆ ಒಲಿದ ನಾಯಕ ಪಟ್ಟ

* ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ರಾಹುಲ್‌ಗಿಲ್ಲ ತಂಡದಲ್ಲಿ ಸ್ಥಾನ

Syed Mushtaq Ali T20 Trophy KSCA Announces Karnataka 20 Members Squad Manish Pandey Named Captain kvn
Author
Bengaluru, First Published Oct 21, 2021, 1:13 PM IST

ಬೆಂಗಳೂರು(ಅ.21): ಮುಂಬರುವ ನವೆಂಬರ್‌ 4ರಿಂದ ಆರಂಭಗೊಳ್ಳಲಿರುವ 2021-22ನೇ ಸಾಲಿನ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ (Syed Mushtaq Ali T20 Trophy) 20 ಆಟಗಾರರನ್ನೊಳಗೊಂಡ ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) ಪ್ರಕಟಗೊಂಡಿದ್ದು, ಅನುಭವಿ ಬ್ಯಾಟರ್ ಮನೀಶ್‌ ಪಾಂಡೆ (Manish Pandey) ನಾಯಕರಾಗಿ ಮುಂದುವರಿಯಲಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಮಯಾಂಕ್‌ ಅಗರ್‌ವಾಲ್ (Mayank Agarwal) ಹಾಗೂ ದೇವದತ್ ಪಡಿಕ್ಕಲ್‌ (Devdutt Padikkal) ಕರ್ನಾಟಕ ತಂಡದ ಇನಿಂಗ್ಸ್‌ ಆರಂಭಿಸಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಪಾಲ್ಗೊಂಡಿರುವ ಕೆ.ಎಲ್‌. ರಾಹುಲ್‌ (KL Rahul) , ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಕಳೆದ ಆವೃತ್ತಿಯ ಮುಷ್ತಾಕ್‌ ಅಲಿ ಟೂರ್ನಿಗೆ ಮೊಣಕೈ ಗಾಯದ ಸಮಸ್ಯೆಯಿಂದ ಮನೀಶ್‌ ಪಾಂಡೆ ಹೊರಗುಳಿದಿದ್ದರು. ಇದೀಗ ಸಂಪೂರ್ಣ ಫಿಟ್‌ ಆಗಿರುವ ಪಾಂಡೆ, ಕರ್ನಾಟಕ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 

ಸಯ್ಯದ್ ಮುಷ್ತಾಕ್‌ ಅಲಿ ಟ್ರೋಫಿ: ಮುಂಬೈ ನಾಯಕನಾಗಿ ಅಜಿಂಕ್ಯ ರಹಾನೆ ಆಯ್ಕೆ

ಕಳೆದ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಕರುಣ್‌ ನಾಯರ್ (Karun Nair) ನೇತೃತ್ವದ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್‌ (Punjab) ವಿರುದ್ದ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಕಳೆದ ಆವೃತ್ತಿಯಲ್ಲಿ ಉಪನಾಯಕರಾಗಿ ಕಾರ್ಯ ನಿರ್ವಹಿಸಿದ್ದ ಪವನ್ ದೇಶಪಾಂಡೆ (Pavan Deshpande) ಯವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಇತ್ತೀಚೆಗಷ್ಟೇ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅಭಿಮನ್ಯು ಮಿಥುನ್‌ (Abhimanyu Mithun) ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆಯಿದೆ. ಮಿಥುನ್ ಅನುಪಸ್ಥಿತಿಯಲ್ಲಿ ಪ್ರಸಿದ್ಧ್ ಕೃಷ್ಣ ಕರ್ನಾಟಕ ತಂಡದ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಇನ್ನುಳಿದಂತೆ ಆಲ್ರೌಂಡರ್‌ಗಳಾದ ಕೃಷ್ಣಪ್ಪ ಗೌತಮ್‌ ಹಾಗೂ ಶ್ರೇಯಸ್ ಗೋಪಾಲ್‌ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿದೆ.

2018-19 ಹಾಗೂ 2019-20ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಹ್ಯಾಟ್ರಿಕ್‌ ಟ್ರೋಫಿ ಕನವರಿಯಲ್ಲಿದ್ದ ಕರ್ನಾಟಕ ತಂಡವು ಕಳೆದ ಆವೃತ್ತಿಯಲ್ಲಿ ಅಂತಿಮ ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ಕಪ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಮತ್ತೊಮ್ಮೆ ಕಪ್‌ ಗೆಲ್ಲುವತ್ತ ಮನೀಶ್ ಪಾಂಡೆ ಪಡೆ ಚಿತ್ತ ನೆಟ್ಟಿದೆ.

T20 World Cup: ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಬಗ್ಗೆ ಗುಡ್‌ ನ್ಯೂಸ್‌ ಕೊಟ್ಟ ರೋಹಿತ್ ಶರ್ಮಾ

‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, ಮೊದಲ ಪಂದ್ಯವನ್ನು ಮುಂಬೈ (Mumbai) ವಿರುದ್ಧ ಆಡಲಿದೆ. ಗುಂಪು ಹಂತದಲ್ಲಿ ಛತ್ತೀಸ್‌ಗಢ, ಸರ್ವೀಸಸ್‌‌, ಬರೋಡಾ ಹಾಗೂ ಬೆಂಗಾಲ್‌ ವಿರುದ್ಧವೂ ರಾಜ್ಯ ತಂಡ ಆಡಲಿದೆ. ಯರ್ರೆ ಗೌಡ ಮಾರ್ಗದರ್ಶನದಲ್ಲಿ ಕರ್ನಾಟಕ ತಂಡವು ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕ ಕ್ರಿಕೆಟ್ ತಂಡ ಹೀಗಿದೆ ನೋಡಿ: ಮನೀಶ್ ಪಾಂಡೆ‌(ನಾಯಕ), ಮಯಾಂಕ್ ಅಗರ್‌ವಾಲ್‌‌, ದೇವದತ್‌ ಪಡಿಕ್ಕಲ್‌, ಕೆ.ವಿ ಸಿದ್ಧಾರ್ಥ್‌‍, ರೋಹನ್ ಕದಂ‌, ಅನಿರುದ್ ಜೋಶಿ, ಅಭಿನವ್ ಮನೋಹರ್‌, ಕರುಣ್ ನಾಯರ್‌, ಶರತ್‌ ಬಿ.ಆರ್‌., ನಿಹಾಲ್ ಉಲ್ಲಾಳ್‌, ಶ್ರೇಯಸ್ ಗೋಪಾಲ್‌‌, ಕೃಷ್ಣಪ್ಪ ಗೌತಮ್‌, ಜಗದೀಶ ಸುಚಿತ್‌, ಪ್ರವೀಣ್‌ ದುಬೆ, ಕೆ.ಸಿ. ಕರಿಯಪ್ಪ, ಪ್ರಸಿದ್ದ್ ಕೃಷ್ಣ, ಪ್ರತೀಕ್ ಜೈನ್‌‌, ವೈಶಾಕ್ ವಿಜಯ್ ಕುಮಾರ್‌, ಎಂ ಬಿ ದರ್ಶನ್‌, ವಿದ್ಯಾಧರ್ ಪಾಟಿಲ್‌‌.
 

Follow Us:
Download App:
  • android
  • ios