ಮುಷ್ತಾಕ್ ಅಲಿ ಟಿ20: ಬಿಹಾರ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಸೂಪರ್ ಲೀಗ್ ಹಂತಕ್ಕೆ ಪ್ರವೇಶಿಸಿವುದು ಬಹುತೇಕ ಖಚಿತವಾಗಿದೆ. ಬಿಹಾರ್ ವಿರುದ್ದ ಭರ್ಜರಿ ಗೆಲುವು ದಾಖಲಿಸಿದ ಕರ್ನಾಟಕ, ಒಟ್ಟು 4 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
ವಿಶಾಖಪಟ್ಟಣಂ(ನ.16): ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಜಯದ ಲಯ ಮುಂದುವರಿಸಿದೆ. ಶುಕ್ರವಾರ ಇಲ್ಲಿ ನಡೆದ ‘ಎ’ ಗುಂಪಿನ ತನ್ನ 5ನೇ ಪಂದ್ಯದಲ್ಲಿ ಬಿಹಾರ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಸೂಪರ್ ಲೀಗ್ ಹಾದಿಯನ್ನು ಮತ್ತಷ್ಟುಸುಗಮಗೊಳಿಸಿಕೊಂಡಿದೆ. ಆಡಿರುವ 5 ಪಂದ್ಯಗಳಿಂದ 4ರಲ್ಲಿ ಗೆಲುವು ಸಾಧಿಸಿರುವ ಕರ್ನಾಟಕ 16 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಉತ್ತಮ ನೆಟ್ ರನ್‌ರೇಟ್ ಹೊಂದಿರುವ ರಾಜ್ಯ ತಂಡ ಕೊನೆಯ ಪಂದ್ಯದಲ್ಲಿ ಗೆಲುವು ಪಡೆದರೆ, ಅಗ್ರಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್
ಕರುಣ್-ದೇವದತ್ ಆಸರೆ: ಬಿಹಾರ ನೀಡಿದ 107 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಕೆ.ಎಲ್. ರಾಹುಲ್ (2) ವೈಫಲ್ಯ ಅನುಭವಿಸಿದರು. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಕರುಣ್ ನಾಯರ್, ಆರಂಭಿಕ ದೇವದತ್ ಪಡಿಕ್ಕಲ್ ಜೊತೆ ಮುರಿಯದ 2ನೇ ವಿಕೆಟ್‌ಗೆ ಅದ್ಭುತ ಜೊತೆಯಾಟ ನಿರ್ವಹಿಸಿದರು. ಈ ಜೋಡಿ 102 ರನ್‌ಗಳನ್ನು ಸೇರಿಸಿ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾಯಿತು. ಕರುಣ್ 36 ಎಸೆತಗಳಲ್ಲಿ 65 ರನ್ ಸಿಡಿಸಿದರೆ, ದೇವದತ್ 28 ಎಸೆತಗಳಲ್ಲಿ 37 ರಲಿ ಗಳಿಸಿ ತಂಡಕ್ಕೆ ಜಯದ ಕೊಡುಗೆ ನೀಡಿದರು.
ಇದನ್ನೂ ಓದಿ: ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!.
ಬೌಲರ್‌ಗಳ ಆರ್ಭಟ: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಬಿಹಾರ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೆ ಆರಂಭಿಕ ವಿಜಯ್ ಭಾರ್ತಿ (0) ವೇಗಿ ರೋನಿತ್ ಮೋರೆ ಬೌಲಿಂಗ್‌ನಲ್ಲಿ ಔಟಾದರು. ಬಬುಲ್ ಕುಮಾರ್ (41) ಬಿಹಾರ ಪರ ಗರಿಷ್ಠ ಸ್ಕೋರರ್ ಎನಿಸಿದರು. ಬಿಹಾರ 19.3 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು. ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಕೌಶಿಕ್, ರೋನಿತ್ ತಲಾ 2, ಜೆ. ಸುಚಿತ್ 1 ವಿಕೆಟ್ ಪಡೆದರು. ನ. 17ರಂದು ನಡೆಯುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ, ಗೋವಾ ತಂಡವನ್ನು ಎದುರಿಸಲಿದೆ.
ಸ್ಕೋರ್: ಬಿಹಾರ 106/10(ಬಬುಲ್ 41, ಶ್ರೇಯಸ್ 2-16, ಪ್ರವೀಣ್ 2-18), ಕರ್ನಾಟಕ 107/1(ಕರುಣ್ 65*, ದೇವದತ್ 37*, ಅಭಿಜಿತ್ 1-33)