ನವದೆಹಲಿ(ನ.23): ಆಸ್ಟ್ರೇಲಿಯಾ ವಿರುದ್ಧದ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ಗೆ ಅವಕಾಶ ನೀಡಬೇಕಿತ್ತು ಎಂದು ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮೂರು ಮಾದರಿಯ ಕ್ರಿಕೆಟ್‌ಗೆ ಟೀಂ ಇಂಡಿಯಾ ಆಯ್ಕೆಮಾಡುವಾಗ, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದರು. ಇದೆಲ್ಲದರ ಹೊರತಾಗಿಯೂ ಸೂರ್ಯಕುಮಾರ್ ಯಾದವ್‌ ಅವರಿಗೆ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ನೀಡದಿರುವುದು ಹಲವು ಅಚ್ಚರಿಗಳಿಗೆ ಕಾರಣವಾಯಿತು.

ಒತ್ತಡದ ಸಂದರ್ಭದಲ್ಲೂ ಲೀಲಾಜಾಲವಾಗಿ ಬ್ಯಾಟಿಂಗ್ ನಡೆಸುವ ಕಲೆ ಸೂರ್ಯಕುಮಾರ್ ಯಾದವ್‌ಗೆ ಸಿದ್ದಿಸಿದೆ. ಸೂರ್ಯಕುಮಾರ್ ಯಾದವ್‌ ಒಬ್ಬ ಅದ್ಭುತ ಬ್ಯಾಟ್ಸ್‌ಮನ್‌. ನಾನು ಯಾರು ಎಷ್ಟು ರನ್ ಹೊಡೆದಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರ ಬ್ಯಾಟಿಂಗ್ ಕೌಶಲ್ಯ, ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ, ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಬ್ಯಾಟಿಂಗ್ ಮಾಡುವ ಶೈಲಿ ಇವನ್ನೆಲ್ಲ ಗಮನಿಸಿದರೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್‌ ಉಪಯುಕ್ತ ಕಾಣಿಕೆ ನೀಡಿದ್ದಾರೆ ಎಂದು ಲಾರಾ ಸ್ಟಾರ್‌ ಸ್ಪೋರ್ಟ್ಸ್‌ ಟಿವಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸುನಿಲ್ ಗವಾಸ್ಕರ್..!

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಸೂರ್ಯಕುಮಾರ್ ಯಾದವ್ 16 ಪಂದ್ಯಗಳನ್ನಾಡಿ 480 ರನ್ ಬಾರಿಸಿ ಗಮನ ಸೆಳೆದಿದ್ದರು. ಮೂರನೇ ಕ್ರಮಾಂಕ ಬ್ಯಾಟ್ಸ್‌ಮನ್‌ ಮೇಲೆ ಎಲ್ಲಾ ತಂಡಗಳು ನಂಬಿಕೆಯಿಟ್ಟಿರುತ್ತವೆ. ಮುಂಬೈ ಇಂಡಿಯನ್ಸ್ ಪರ ಅಷ್ಟೆಲ್ಲಾ ಸ್ಥಿರ ಪ್ರದರ್ಶನ ತೋರಿದರೂ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಯಾಕೆ ಆಯ್ಕೆಯಾಗಿಲ್ಲವೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಲಾರಾ ಹೇಳಿದ್ದಾರೆ.