ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧ ಭಾರತ ಟಿ20 ಸರಣಿ ಸೋತಿದೆ. ಈ ಸೋಲಿನ ಮರುದಿನವೇ, 2024ರ ಟಿ20 ವಿಶ್ವಕಪ್ ಗೆಲುವನ್ನು ಸ್ಮರಿಸಿಕೊಂಡು ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟೀಂ ಇಂಡಿಯಾ ಆಡಿದ ಮೊದಲ ಟಿ20 ಸರಣಿಯಲ್ಲೇ ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಮೂರು ತಿಂಗಳ ಹಿಂದಷ್ಟೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಇದೀಗ ಭಾರತ ಟಿ20 ಸರಣಿ ಸೋಲಿನ ಮರು ದಿನವೇ ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಹೌದು, ಟೀಂ ಇಂಡಿಯಾ ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಜೂನ್ 29, 2024ರಂದು ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಬರೊಬ್ಬರಿ 11 ವರ್ಷಗಳ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆ ಟೀಂ ಇಂಡಿಯಾ ಗೆಲುವಿನಲ್ಲಿ ಸೂರ್ಯಕುಮಾರ್ ಯಾದವ್ ಮಹತ್ವದ ಪಾತ್ರ ವಹಿಸಿದ್ದರು.
ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸೂರ್ಯಕುಮಾರ್ ಯಾದವ್:
ಸೋಮವಾರವಾದ ಇಂದು(ಜೂನ್ 29) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಕ್ರೀಡೆಯಲ್ಲಿನ ಕೆಲವೊಂದು ಕ್ಷಣಗಳು ನಮ್ಮ ಬದುಕಿನ ಎಂದೆಂದಿಗೂ ಜತೆಯಾಗಿರುತ್ತವೆ. ಪ್ರತಿಯೊಂದು ತ್ಯಾಗ, ಪ್ರತಿಯೊಂದು ಹಿನ್ನಡೆ, ಪ್ರತಿ ಪ್ರಾಕ್ಟೀಸ್ ಸೆಷನ್, ಸ್ಟ್ಯಾಂಡ್‌ನಲ್ಲಿನ ಪ್ರತಿಯೊಂದು ಚೀರಾಟ, ಆ ರಾತ್ರಿ ಎಂದೆಂದಿಗೂ ಮರೆಯಲಾಗದ ಕ್ಷಣವಾಗಿತ್ತು. ಇದನ್ನು ಅದ್ಭುತ ಜನರ ಗುಂಪಿನೊಂದಿಗೆ ಹಂಚಿಕೊಂಡಿದ್ದಕ್ಕೆ ಹಾಗೂ ಲಕ್ಷಾಂತರ ಭಾರತೀಯರೊಂದಿಗೆ ಅನುಭವಿಸಿದ್ದಕ್ಕೆ ಹೆಮ್ಮೆಯಿದೆ' ಎಂದು ಸೂರ್ಯಕುಮಾರ್ ಯಾದವ್ ಬರೆದುಕೊಂಡಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಗ್ರೂಪ್ ಹಂತದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾದಂತಹ ತಂಡಗಳಿಗೆ ಸೋಲುಣಿಸಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿತ್ತು. ಇನ್ನು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯುವ ಮೂಲಕ ಫೈನಲ್‌ಗೆ ಎಂಟ್ರಿ ಪಡೆದುಕೊಂಡಿತ್ತು. ಇನ್ನು ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತ್ತು. ಇದು ಆಗ ಐಸಿಸಿ ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿಕೊಂಡಿತ್ತು. ಇನ್ನು ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಆದರೆ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ಚೆಂಡು ಸಿಕ್ಸರ್ ಹೋಗುವುದರಲ್ಲಿತ್ತು. ಆದರೆ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಪಂದ್ಯ ಭಾರತ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.
ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡ ಭಾರತ:
ಭಾರತ ತಂಡವು 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಸತತವಾಗಿ ಐಸಿಸಿ ಟೂರ್ನಿಯಲ್ಲಿ ಭಾರತ ನಾಕೌಟ್ ಹಂತದಲ್ಲಿ ಮುಗ್ಗರಿಸುತ್ತಲೇ ಬಂದಿತ್ತು. 2024ರ ಟಿ20 ವಿಶ್ವಕಪ್ ಫೈನಲ್, 2015ರ ಏಕದಿನ ವಿಶ್ವಕಪ್ ಸೆಮಿಫೈನಲ್, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲಿನ ಕಹಿಯುಂಡಿತ್ತು.
ಆದರೆ ಇದಾದ ಬಳಿಕ ಭಾರತ 2024ರ ಟಿ20 ವಿಶ್ವಕಪ್, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಇದೀಗ 2026ರ ಟಿ20 ವಿಶ್ವಕಪ್ ಹೀಗೆ ಭಾರತ ತಂಡವು ಹ್ಯಾಟ್ರಿಕ್ ಐಸಿಸಿ ಟ್ರೋಫಿ ಗೆದ್ದು ಬೀಗಿದೆ.


