ಅಂಡರ್-19 ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅಜೇಯ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಮುಂದಿನ ಪಂದ್ಯವಾಡಲಿದೆ.
ದುಬೈ(ನ.06): ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಭಾರತ, ತನ್ನ ಅಭಿಯಾನವನ್ನು ಅದ್ಧೂರಿಯಾಗಿ ಆರಂಭಿಸಿದೆ. ಭಾರತದ ಪರ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದು, ಅಜೇಯ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ಅಪ್ಪನ ಹಾದಿಯಲ್ಲಿಯೇ ಮಗ ಹೆಜ್ಜೆಹಾಕುತ್ತಿದ್ದಾನೆ.
ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ ಭಾರತದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿತು. ಇಶಾನ್ ಸೂದ್ ನೇಪಾಳದ ಅಗ್ರ ಕ್ರಮಾಂಕವನ್ನು ಧ್ವಂಸಗೊಳಿಸುವ ಮೂಲಕ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ನೇಪಾಳ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 128 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ನೇಪಾಳ ಪರ ಬಲಗೈ ಬ್ಯಾಟರ್ ದರ್ಶ್ ಸೋನಾರ್ 43 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ, ಉತ್ತಮವಾಗಿ ಆಡುತ್ತಿದ್ದ ಅವರು ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಇಶಾನ್ ಸೂದ್ ಮೂರು ವಿಕೆಟ್ ಪಡೆದು ಮಿಂಚಿದರೆ, ಯುವ ಆಫ್‌ಸ್ಪಿನ್ನರ್ ಅರ್ಜುನ್ ರಾಜ್‌ಪುತ್ ಕೂಡ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು. ಅವರು 5.3 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 8 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ನೇಪಾಳದ ಕೊನೆಯ ಬ್ಯಾಟರ್ ಸುಶೀಲ್ ಅವರನ್ನು ಬೌಲ್ಡ್ ಮಾಡುವ ಮೂಲಕ ಅರ್ಜುನ್ ಇನಿಂಗ್ಸ್‌ಗೆ ತೆರೆ ಎಳೆದರು.
ಆರ್ಯವೀರ್ ಸೆಹ್ವಾಗ್ ಅಬ್ಬರದ ಬ್ಯಾಟಿಂಗ್
129 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರೈಚಂದಾನಿ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ನೇಪಾಳದ ಬೌಲರ್‌ಗಳ ಮೇಲೆ ಸವಾರಿ ಮಾಡಿ ವಿಕೆಟ್ ಕಳೆದುಕೊಳ್ಳದೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್ಯವೀರ್ ಸೆಹ್ವಾಗ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 69 ರನ್ ಗಳಿಸಿದರು. ಕೇವಲ 51 ಎಸೆತಗಳಲ್ಲಿ ಈ ರನ್ ಗಳಿಸಿದ ಅವರು, ವೇಗದ ಬೌಲಿಂಗ್ ಹಾಗೂ ಸ್ಪಿನ್ ದಾಳಿ ಎರಡನ್ನೂ ಸಮರ್ಥವಾಗಿ ಎದುರಿಸಿದರು. ನಾಯಕ ಲಕ್ಷ್ಯ ರೈಚಂದಾನಿ ಕೂಡ ಅಜೇಯ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರ್ಯವೀರ್ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವೇಗದ ಬೌಲರ್ ಅಭಯ್ ಎಸೆದ ಚೆಂಡನ್ನು ಮುಂದೆ ಬಂದು ನೇರವಾಗಿ ಸೈಟ್‌ಸ್ಕ್ರೀನ್ ಮೇಲೆ ಸಿಕ್ಸರ್‌ಗೆ ಅಟ್ಟುವ ಮೂಲಕ ತಮ್ಮ ಅರ್ಧಶತಕದ ಸಂಭ್ರಮ ಆಚರಿಸಿದರು. ಅವರ ಬ್ಯಾಟಿಂಗ್‌ಗೆ ಕೋಚಿಂಗ್ ಸಿಬ್ಬಂದಿ ಹಾಗೂ ಸಹ ಆಟಗಾರರಿಂದ ಮೆಚ್ಚುಗೆ ವ್ಯಕ್ತವಾಯಿತು. ಭಾರತ ಕೇವಲ 19.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿ ಗೆಲುವು ಸಾಧಿಸಿತು. ಆರ್ಯವೀರ್ ಮತ್ತು ಲಕ್ಷ್ಯ ಅವರ ಜತೆಯಾಟ 100ಕ್ಕೂ ಹೆಚ್ಚು ರನ್‌ಗಳನ್ನು ದಾಖಲಿಸಿತು.
ಪಾಕಿಸ್ತಾನ ವಿರುದ್ಧ ಮುಂದಿನ ಪಂದ್ಯ
ನೇಪಾಳ ವಿರುದ್ಧದ ಗೆಲುವಿನೊಂದಿಗೆ ಭಾರತ ಅಂಡರ್-19 ಏಷ್ಯಾಕಪ್ ಅಭಿಯಾನವನ್ನು ಆತ್ಮವಿಶ್ವಾಸದಿಂದ ಆರಂಭಿಸಿದೆ. ಇದೀಗ ಭಾನುವಾರ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ತಂಡ ಸಜ್ಜಾಗಲಿದೆ. ಮೊದಲ ಪಂದ್ಯದಲ್ಲಿನ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ಭಾರತ ತಂಡಕ್ಕೆ ದೊಡ್ಡ ಸಮಾಧಾನ ನೀಡಿದೆ.






