ಗವಾಸ್ಕರ್‌ಗೆ ಟ್ರೋಫಿ ವಿತರಣಾ ಸಮಾರಂಭಕ್ಕೆ ಆಹ್ವಾನವಿಲ್ಲದ್ದಕ್ಕೆ ಅಸಮಾಧಾನ. ಆಸ್ಟ್ರೇಲಿಯಾ 3-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಬುಮ್ರಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಆಸ್ಟ್ರೇಲಿಯಾ ದಶಕದ ಬಳಿಕ ಭಾರತ ವಿರುದ್ಧ ಸರಣಿ ಗೆದ್ದಿದೆ.

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಭಾನುವಾರ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಸರಣಿಯ ಟ್ರೋಫಿ ವಿತರಣೆ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸದ್ದಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕ‌ರ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. 

ಅಲನ್ ಬಾರ್ಡರ್ ಮತ್ತು ಸುನಿಲ್‌ ಗವಾಸ್ಕರ್‌ ಹೆಸರಿನಲ್ಲಿ ಬಾರ್ಡರ್ -ಗವಾಸ್ಕರ್ ಟ್ರೋಫಿ ನೀಡಲಾಗುತ್ತದೆ. ಆದರೆ ಆಸ್ಟ್ರೇಲಿಯಾಕ್ಕೆ ಪ್ರಶಸ್ತಿ ವಿತರಣೆ ಸಂದರ್ಭ ಬಾರ್ಡರ್ ಅವರನ್ನು ಆಹ್ವಾನಿಸಿದರೂ, ಗವಾಸ್ಕರ್ ಸ್ಥಳದಲ್ಲಿಯೇ ಇದ್ದರೂ ಆಹ್ವಾನ ನೀಡಿರಲಿಲ್ಲ. ಇದಕ್ಕೆ ಸುನಿಲ್ ಗವಾಸ್ಕ‌ರ್ ಅಸಮಾಧಾನಗೊಂಡಿದ್ದಾರೆ. 'ನಾನು ಭಾರತೀಯನಾಗಿದ್ದರಿಂದಲೇ ಈ ರೀತಿಯಾಗಿದೆ. ಇದು ಬಾರ್ಡರ್-ಗವಾಸ್ಕರ್ ಟ್ರೋಫಿ, ಭಾರತ ಮತ್ತು ಆಸ್ಟ್ರೇಲಿಯಾಗೆ ಸಂಬಂಧ ಪಟ್ಟಿದ್ದು, ನನ್ನ ಸ್ನೇಹಿತ ಅಲಾನ್ ಬಾರ್ಡ‌ರ್ ಜತೆಗೆ ನಾನೂ ಟ್ರೋಫಿ ನೀಡಬೇಕಾಗಿತ್ತು' ಎಂದಿದ್ದಾರೆ. ಇನ್ನು, ಗವಾಸ್ಕರ್‌ರನ್ನು ಆಹ್ವಾನಿಸದ್ದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಬಳಿಕ ವಿಷಾದ ವ್ಯಕ್ತಪಡಿಸಿದೆ.

ಮೊದಲ ಸಲ ಐಸಿಸಿ ವಿಶ್ವ ಟೆಸ್ಟ್‌ ಫೈನಲ್‌ನಿಂದ ಟೀಂ ಇಂಡಿಯಾ ಔಟ್! ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದು ಹೇಗೆ?

2024-25ನೇ ಸಾಲಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 3-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಜತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೂ ಅಧಿಕೃತವಾಗಿ ಲಗ್ಗೆಯಿಡುವಲ್ಲಿ ಯಶಸ್ವಿಯಾಯಿತಿ. ಪರ್ತ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು 10 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡಿತ್ತು. ಇನ್ನು ಬ್ರಿಸ್ಬೇನ್‌ನ ಗಾಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವು ಮಳೆಯ ಅಡಚಣೆಯಿಂದಾಗಿ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 185 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತು. ಇನ್ನು ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ಆಸೀಸ್ 6 ವಿಕೆಟ್ ಅಂತರದ ಗೆಲುವು ಸಾಧಿಸಿ 3-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಆಸ್ಟ್ರೇಲಿಯಾಗೆ ಆರನೇ ಬಾರಿ ಬಾರ್ಡರ್‌-ಗವಾಸ್ಕರ್ ಟ್ರೋಫಿ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಆರನೇ ಬಾರಿಗೆ ಟ್ರೋಫಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 1996-97ರಲ್ಲಿ ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಹೆಸರಿಡಲಾಗಿತ್ತು. 2024-25ರ ಸರಣಿಯು ಸೇರಿದಂತೆ ಇದುವರೆಗೂ ಒಟ್ಟು 17 ಟೆಸ್ಟ್ ಸರಣಿಗಳು ನಡೆದಿದ್ದು, ಈ ಪೈಕಿ ಭಾರತ 10 ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದೆ. ಇನ್ನು 2003-04ರಲ್ಲಿ ಸರಣಿ 1-1ರಿಂದ ಡ್ರಾಗೊಂಡಿತ್ತು.

ದಶಕದ ಬಳಿಕ ಭಾರತ ವಿರುದ್ಧ ಆಸೀಸ್‌ಗೆ ಸರಣಿ ಗೆಲುವು

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಬರೋಬ್ಬರಿ ಒಂದು ದಶಕದ ಬಳಿಕ ಭಾರತ ವಿರುದ್ದ ಟೆಸ್ಟ್ ಸರಣಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. 2014-15ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-0 ಅಂತರದಲ್ಲಿ ಜಯಿಸಿತ್ತು. ಇದಾದ ಬಳಿಕ ನಡೆದಿದ್ದ ನಾಲ್ಕು ಸರಣಿಗಳಲ್ಲೂ ಭಾರತ 2-1ರಲ್ಲಿ ಜಯಭೇರಿ ಬಾರಿಸಿತ್ತು.

ಭಾರತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತಿದ್ದೇ ಈ 6 ಪ್ರಮುಖ ಕಾರಣಗಳಿಂದ! ನೀವೇನಂತೀರಾ?

ಬುಮ್ರಾಗೆ ಒಲಿದ ಸರಣಿ ಶ್ರೇಷ್ಠ ಪ್ರಶಸ್ತಿ

ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಭಾರತ ಟೆಸ್ಟ್ ಸರಣಿಯನ್ನು ಸೋತರೂ ಜಸ್ಪ್ರೀತ್ ಬುಮ್ರಾ 32 ವಿಕೆಟ್ ಕಬಳಿಸಿ ಏಕಾಂಗಿ ಹೋರಾಟ ಮಾಡಿದ್ದರು. ಹೀಗಾಗಿ ಜಸ್ಪ್ರೀತ್ ಬುಮ್ರಾ, ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.