* ಕೊನೆಗೂ ಕಳವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಿಟ್‌ಗಳು ಪತ್ತೆ* ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯ ಸಿಬ್ಬಂದಿಗಳ ಚುರುಕಿನ ಕಾರ್ಯಾಚರಣೆ* ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರಿಗೆ ಡೇವಿಡ್ ವಾರ್ನರ್ ಧನ್ಯವಾದ

ನವ​ದೆ​ಹಲಿ(ಏ.22): ಆರ್‌​ಸಿಬಿ ವಿರುದ್ಧದ ಪಂದ್ಯದ ಬಳಿಕ ಡೆಲ್ಲಿಗೆ ವಾಪ​ಸಾ​ಗುವಾಗ ಕಳ​ವಾ​ಗಿದ್ದ ಡೆಲ್ಲಿ ಕ್ಯಾಪಿ​ಟಲ್ಸ್‌ ಆಟ​ಗಾ​ರರ ಬ್ಯಾಟ್‌ ಸೇರಿ ಇತರ ಪರಿ​ಕ​ರ​ಗಳು ಪತ್ತೆ​ಯಾ​ಗಿವೆ. ಈ ಬಗ್ಗೆ ತಂಡದ ನಾಯಕ ದೇವಿಡ್‌ ವಾರ್ನರ್‌ ಇನ್‌​ಸ್ಟಾಗ್ರಾಂ ಸ್ಟೋರಿ ಮೂಲಕ ಮಾಹಿತಿ ನೀಡಿದ್ದು, ಕೆಲ​ವೊಂದನ್ನು ಹೊರ​ತು​ಪ​ಡಿಸಿ ಕ​ಳ​ವಾ​ಗಿದ್ದ ಬಹು​ತೇ​ಕ ವಸ್ತು​ಗಳು ಕೈ ಸೇರಿವೆ. ಆರೋ​ಪಿ​ಯನ್ನು ಪತ್ತೆ ಹಚ್ಚಿದ್ದಕ್ಕೆ ಪೊಲೀಸರು, ಅಧಿಕಾರಿಗಳಿಗೆ ಧನ್ಯವಾದ ಎಂದು ಬರೆ​ದಿ​ದ್ದಾರೆ. ವಾರ್ನರ್‌ ಹಾಗೂ ಇತ​ತ​ರಿಗೆ ಸೇರಿದ ಒಟ್ಟು 16 ಬ್ಯಾಟ್‌ಗಳು, ಹಲವು ಆಟಗಾರರ ಶೂ, ಪ್ಯಾಡ್‌, ಥೈ ಪ್ಯಾಡ್ಸ್‌, ಗ್ಲೌಸ್‌ಗಳು ಕಳವಾಗಿದ್ದವು. ಈ ಬಗ್ಗೆ ಡೆಲ್ಲಿ ಫ್ರಾಂಚೈಸಿಯು ಪೊಲೀ​ಸ​ರಿಗೆ ದೂರು ನೀಡಿ​ತ್ತು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರ ಕಿಟ್‌ಗಳನ್ನು ಸಾಗಿಸುವ ಹೊಣೆಯನ್ನು ಖಾಸಗಿ ಲಾಜಿಸ್ಟಿಕ್ ಕಂಪನಿಗೆ ನೀಡಲಾಗಿತ್ತು. ಐಟಿಸಿ ಹೋಟೆಲ್‌ನಿಂದ ಕಾರ್ಗೋಗೆ ಸಾಗಾಟ ಮಾಡುವಾಗ ಟೀಂ ಕಿಟ್‌ಗಳ ಕಳ್ಳತನ ನಡೆದಿತ್ತು. ಈ ಸಂಬಂಧ ನಗರದ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತಂತೆ ತನಿಖೆ ಕೈಗೆತ್ತಿಕೊಂಡ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಸೇನ ಘಾಟ್ಗೆ ನೇತೃತ್ವದ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರ ಕಿಟ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

Scroll to load tweet…

ಸದ್ಯ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇನ್ನಿಬ್ಬರು ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಬಲೆ ಬೀಸಿದೆ.

ಈ ಆವೃತ್ತಿಯಲ್ಲಿ ಒಂದೂ ಸಿಕ್ಸರ್‌ ಸಿಡಿಸದ ವಾರ್ನರ್‌!

ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಡೇವಿಡ್‌ ವಾರ್ನರ್‌ ಈ ಆವೃತ್ತಿಯಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿರುವ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 6 ಪಂದ್ಯಗಳಲ್ಲಿ ವಾರ್ನರ್‌ 42 ಬೌಂಡರಿ ಸಿಡಿಸಿದ್ದಾರೆ. ಆದರೆ ಅವರು ಇನ್ನೂ ಸಿಕ್ಸರ್‌ ಖಾತೆ ತೆರೆದಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಬೌಂಡರಿಗಳ ಪಟ್ಟಿಯಲ್ಲಿ ಶಿಖರ್‌ ಧವನ್‌ 4 ಪಂದ್ಯಗಳಲ್ಲಿ 29 ಬೌಂಡರಿ ಬಾರಿಸಿ 2ನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್‌ 6 ಪಂದ್ಯದಲ್ಲಿ 27 ಬೌಂಡರಿಯೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. 

IPL 2023 ಜೈಪು​ರ ಕ್ರೀಡಾಂಗ​ಣ​ದ ವಿಐಪಿ ಸ್ಟ್ಯಾಂಡ್‌ಗೆ ಬೀಗ ಜಡಿದ ಕ್ರೀಡಾ ಸಚಿವ!

ಇನ್ನು ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿ ಮೊದಲ ಸ್ಥಾನದಲ್ಲಿದ್ದಾರೆ. ಡು ಪ್ಲೆಸಿ 6 ಪಂದ್ಯಗಳಲ್ಲಿ 23 ಸಿಕ್ಸರ್‌, 25 ಬೌಂಡರಿ ಬಾರಿಸಿದ್ದಾರೆ. 19 ಸಿಕ್ಸರ್‌ ಸಿಡಿಸಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌, 15 ಸಿಕ್ಸರ್‌ ಸಿಡಿಸಿರುವ ಲಖನೌ ತಂಡದ ನಿಕೋಲಸ್‌ ಪೂರನ್‌ ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನಗಳಲ್ಲಿದ್ದಾರೆ.

ಸದ್ಯ ಡೇವಿಡ್ ವಾರ್ನರ್‌ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತಾನಾಡಿದ ಮೊದಲ 5 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಇದೀಗ ಡೆಲ್ಲಿ ತಂಡವು ಏಪ್ರಿಲ್ 24ರಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.