ಜೋ ರೂಟ್ (150) ಮತ್ತು ಬೆನ್ ಸ್ಟೋಕ್ಸ್ (141) ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್‌ಗಳಿಸಿ 311 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ಭಾರತದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ರೂಟ್ ಮತ್ತು ಸ್ಟೋಕ್ಸ್ ಜೋಡಿ ಇಂಗ್ಲೆಂಡ್‌ಗೆ ದೊಡ್ಡ ಮುನ್ನಡೆ ತಂದುಕೊಟ್ಟರು.

ಮ್ಯಾಂಚೆಸ್ಟರ್: ಅನುಭವಿ ಬ್ಯಾಟರ್ ಜೋ ರೂಟ್(150) ಹಾಗೂ ನಾಯಕ ಬೆನ್ ಸ್ಟೋಕ್ಸ್(141) ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 311 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 215 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶುಕ್ರವಾರವೂ ಅಧಿಪತ್ಯ ಸಾಧಿಸಿತು. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 3ನೇ ದಿನದ ಅಂತ್ಯಕ್ಕ 7 ವಿಕೆಟ್‌ಗೆ 544 ರನ್‌ ಕಲೆಹಾಕಿತ್ತು. 186 ರನ್‌ಗಳ ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್ ತಂಡವನ್ನು ನಾಲ್ಕನೇ ದಿನ ಆದಷ್ಟು ಬೇಗ ಆಲೌಟ್ ಮಾಡಬಹುದೆನ್ನುವ ಶುಭ್‌ಮನ್ ಗಿಲ್ ಪಡೆಯ ಲೆಕ್ಕಾಚಾರವನ್ನು ಬೆನ್ ಸ್ಟೋಕ್ಸ್ ತಲೆಕೆಳಗೆ ಮಾಡಿದರು.

ರಿಟೈರ್ ಹರ್ಟ್ ಆಗಿ ಪೆವಿಲಿಯನ್ ಸೇರಿದ್ದ ಬೆನ್ ಸ್ಟೋಕ್ಸ್, ಮೂರನೇ ದಿನದಾಟದ ಕೊನೆಯಲ್ಲಿ ಕ್ರಿಸ್ ವೋಕ್ಸ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದಿದ್ದರು. ಏಳನೇ ವಿಕೆಟ್‌ಗೆ ಡಾಸೆನ್ ಜೊತೆಗೂಡಿ ಸ್ಟೋಕ್ಸ್ 35 ರನ್‌ಗಳ ಅಮೂಲ್ಯ ಜತೆಯಾಟ ನಿಭಾಯಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾದರು. ಇದಾದ ಬಳಿಕ 9ನೇ ವಿಕೆಟ್‌ಗೆ ಬ್ರೈಡನ್ ಕಾರ್ಸ್ ಹಾಗೂ ಬೆನ್ ಸ್ಟೋಕ್ಸ್ ಜೋಡಿ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿ ಬರೋಬ್ಬರಿ 95 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ಮುನ್ನಡೆಯನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು.

ಭರ್ಜರಿ ಶತಕ ಸಿಡಿಸಿದ ಸ್ಟೋಕ್ಸ್: ಭಾರತ ಎದುರಿನ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ನಾಯಕ ಬೆನ್ ಸ್ಟೋಕ್ಸ್, ಬ್ಯಾಟಿಂಗ್‌ನಲ್ಲೂ ಶತಕ ಸಿಡಿಸುವ ಮೂಲಕ ಭಾರತೀಯರಿಗೆ ಶಾಕ್ ನೀಡಿದರು. 198 ಎಸೆತಗಳನ್ನು ಎದುರಿಸಿದ ಬೆನ್ ಸ್ಟೋಕ್ಸ್ 11 ಬೌಂಡರಿ ಹಾಗೂ ಮೂರು ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 141 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು.

Scroll to load tweet…

7000 ರನ್ 200 ವಿಕೆಟ್, ಸ್ಪೆಷಲ್ ಕ್ಲಬ್ ಸೇರಿದ ಸ್ಟೋಕ್ಸ್: ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಬೆನ್ ಸ್ಟೋಕ್ಸ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 7000+ ರನ್ ಹಾಗೂ 200+ ವಿಕೆಟ್ ಕಬಳಿಸಿದ ಮೂರನೇ ಆಲ್ರೌಂಡರ್ ಎನ್ನುವ ಹಿರಿಮೆಗೆ ಬೆನ್ ಸ್ಟೋಕ್ಸ್ ಪಾತ್ರರಾಗಿದ್ದಾರೆ. ಈ ಮೊದಲು ಗ್ಯಾರಿ ಸೋಬರ್ಸ್‌ ಹಾಗೂ ಜಾಕ್ ಕ್ಯಾಲಿಸ್ ಈ ಸಾಧನೆ ಮಾಡಿದ್ದರು.

Scroll to load tweet…

ಇನ್ನು ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಬ್ರೈಡನ್ ಕಾರ್ಸ್ 54 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 47 ರನ್ ಸಿಡಿಸಿ ಕೊನೆಯವರಾಗಿ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ಭಾರತ ಪರ ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರೆ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರು. ಇನ್ನು ಮೊಹಮ್ಮದ್ ಸಿರಾಜ್ ಹಾಗೂ ಅನ್ಶೂಲ್ ಕಂಬೋಜ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.