ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ದ್ರಾವಿಡ್, ಕ್ಯಾಲಿಸ್ ಮತ್ತು ಪಾಂಟಿಂಗ್‌ರನ್ನು ಹಿಂದಿಕ್ಕಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ವಿರುದ್ಧ ಗರಿಷ್ಠ ಶತಕ ಸಿಡಿಸಿದ ದಾಖಲೆಯನ್ನೂ ಸ್ಥಾಪಿಸಿದ್ದಾರೆ.
ಮ್ಯಾಂಚೆಸ್ಟರ್: ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಭಾರತ ವಿರುದ್ಧ 4ನೇ ಟೆಸ್ಟ್‌ನ 3ನೇ ದಿನವಾದ ಶುಕ್ರವಾರ ರೂಟ್, ಭಾರತದ ರಾಹುಲ್ ದ್ರಾವಿಡ್, ದಕ್ಷಿಣ ಆಫ್ರಿಕಾದ ಜ್ಯಾಕ್ ಕ್ಯಾಲಿಸ್ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ರನ್ನು ಹಿಂದಿಕ್ಕಿದರು.
ರೂಟ್ 157 ಪಂದ್ಯಗಳ 286 ಇನ್ನಿಂಗ್ಸ್‌ಗಳಲ್ಲಿ 13,409 ರನ್ ಗಳಿಸಿದ್ದಾರೆ. 13,378 ರನ್ ಗಳಿಸಿರು ರಿಕಿ ಪಾಂಟಿಂಗ್ ಮೂರನೇ ಸ್ಥಾನ, 166 ಪಂದ್ಯಗಳಲ್ಲಿ 13289 ರನ್ ಗಳಿಸಿರುವ ಕ್ಯಾಲಿಸ್ 4ನೇ, 164 ಪಂದ್ಯಗಳಲ್ಲಿ 13,288 ರನ್ ಬಾರಿಸಿರುವ ದ್ರಾವಿಡ್ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. 15,921 ರನ್ ಕಲೆಹಾಕಿರುವ ಸಚಿನ್ ತೆಂಡುಲ್ಕರ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಹಿಂದಿಕ್ಕಲು ಜೋ ರೂಟ್‌ಗೆ ಇನ್ನೂ 2,512 ರನ್‌ಗಳ ಅಗತ್ಯವಿದೆ. ಸದ್ಯ ಜೋ ರೂಟ್ ಅವರ ಫಾರ್ಮ್ ಹಾಗೂ ಪ್ರದರ್ಶನವನ್ನು ಗಮನಿಸಿದರೆ ಇನ್ನೆರಡು ವರ್ಷದಲ್ಲಿ ಸಚಿನ್ ತೆಂಡುಲ್ಕರ್ ರೆಕಾರ್ಡ್ ಬ್ರೇಕ್ ಆಗುವ ಸಾಧ್ಯತೆಯಿದೆ. ಇನ್ನು ಮುಂದೆ ಜೋ ರೂಟ್ ಇದೇ ಸ್ಥಿರತೆಯನ್ನು ಕಾಯ್ದುಕೊಂಡರೇ ಇಂಗ್ಲೆಂಡ್ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಟೆಸ್ಟ್‌ನಲ್ಲಿ ಗರಿಷ್ಠ ರನ್
ಆಟಗಾರ ಪಂದ್ಯ ರನ್
ಸಚಿನ್ 200 15,921
ಪಾಂಟಿಂಗ್ 168 13,378
ರೂಟ್ 157 13,289
ಕ್ಯಾಲಿಸ್ 166 13,289
ದ್ರಾವಿಡ್ 164 13,288
104 ಬಾರಿ 50+ ಸ್ಕೋರ್: 2ನೇ ಸ್ಥಾನಕ್ಕೇರಿದ ರೂಟ್
ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ರೂಟ್ 2ನೇ ಸ್ಥಾನಕ್ಕೇರಿದ್ದಾರೆ. ಅವರು 104 ಬಾರಿ(38 ಶತಕ, 66 ಅರ್ಧಶತಕ) ಈ ಸಾಧನೆ ಮಾಡಿದ್ದು, ತಲಾ 103 ಬಾರಿ 50+ ರನ್ ಗಳಿಸಿದ್ದ ಪಾಂಟಿಂಗ್ ಹಾಗೂ ಜ್ಯಾಕ್ ಕ್ಯಾಲಿಸ್‌ರನ್ನು ಹಿಂದಿಕ್ಕಿದರು. ಸಚಿನ್ ತೆಂಡುಲ್ಕರ್(119) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಭಾರತದ ವಿರುದ್ಧ 12 ಶತಕ: ಹೊಸ ದಾಖಲೆ
ರೂಟ್ ಭಾರತ ವಿರುದ್ಧ ಟೆಸ್ಟ್‌ನಲ್ಲಿ 12 ಶತಕ ಬಾರಿಸಿದ್ದಾರೆ. ಇದು ದಾಖಲೆ. ಆಸ್ಟ್ರೇಲಿಯಾದ ಸ್ಮಿತ್ 11 ಶತಕ ಬಾರಿಸಿದ್ದು, ಅವರನ್ನು ರೂಟ್ ಹಿಂದಿಕ್ಕಿದ್ದಾರೆ. ಇನ್ನು, ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ಶತಕ ಬಾರಿಸಿದ ದಾಖಲೆ ಡಾನ್ ಬ್ರಾಡ್ಮನ್ ಹೆಸರಲ್ಲಿದೆ. ಅವರು ಇಂಗ್ಲೆಂಡ್ ವಿರುದ್ಧ 19 ಸೆಂಚುರಿ ಸಿಡಿಸಿದ್ದಾರೆ.
38ನೇ ಶತಕ
ಟೆಸ್ಟ್‌ನಲ್ಲಿ ರೂಟ್ 38 ಶತಕ ಬಾರಿಸಿದ್ದಾರೆ. ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನ. ಸಚಿನ್ 51, ಕ್ಯಾಲಿಸ್ 45, ಪಾಂಟಿಂಗ್ 41, ಸಂಗಕ್ಕರ 38 ಶತಕ ಗಳಿಸಿದ್ದಾರೆ.
21 ಶತಕ: ರೂಟ್ 2021ರ ಬಳಿಕ ಟೆಸ್ಟ್‌ನಲ್ಲಿ 21 ಶತಕ ಬಾರಿಸಿದ್ದಾರೆ. ಇದು ಗರಿಷ್ಠ. ಸ್ಟೀವ್ ಸ್ಮಿತ್, ವಿಲಿಯಮ್ಸನ್ ಈ ಅವಧಿಯಲ್ಲಿ ತಲಾ 10 ಶತಕ ಗಳಿಸಿದ್ದಾರೆ.
09 ಶತಕ: ರೂಟ್ ಭಾರತ ವಿರುದ್ಧ ತವರಿನ ಟೆಸ್ಟ್‌ನಲ್ಲಿ 9 ಶತಕ ಬಾರಿಸಿದ್ದಾರೆ. ಯಾವುದೇ ತಂಡದ ವಿರುದ್ಧ ತವರಿನ ಟೆಸ್ಟ್‌ನಲ್ಲಿ ಆಟಗಾರ ಬಾರಿಸಿದ ಗರಿಷ್ಠ ಶತಕ ಇದು.
23 ಸೆಂಚುರಿ: ರೂಟ್ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ 23 ಶತಕ ಸಿಡಿಸಿದ್ದಾರೆ. ಪಾಂಟಿಂಗ್, ಕ್ಯಾಲಿಸ್, ಜಯವರ್ಧನೆ ಕೂಡಾ ತಮ್ಮ ತಮ್ಮ ತವರಿನಲ್ಲಿ ತಲಾ 23 ಶತಕ ಬಾರಿಸಿದ್ದಾರೆ.
