ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಬೃಹತ್‌ ಮೊತ್ತ ಕಲೆಹಾಕಿದೆ. ಜೋ ರೂಟ್‌ ಅಮೋಘ ಶತಕ ಸಿಡಿಸಿದ್ದು, ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ರೂಟ್‌ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಮ್ಯಾಂಚೆಸ್ಟರ್: ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಸಂಪೂರ್ಣ ಹಿಡಿತ ಸಾಧಿಸಿದೆ. ತನ್ನ ಬ್ಯಾಟಿಂಗ್‌ ಪರಾಕ್ರಮ ಮುಂದುವರಿಸಿದ ತಂಡ ಇನ್ನಿಂಗ್ಸ್‌ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್‌ ಮುನ್ನಡೆ ಪಡೆದಿದ್ದು, ಶನಿವಾರ ಮತ್ತಷ್ಟು ರನ್‌ ಸೇರಿಸುವ ಯೋಜನೆ ಹಾಕಿಕೊಂಡಿದೆ.

2ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 215 ರನ್‌ ಗಳಿಸಿದ್ದ ಇಂಗ್ಲೆಂಡ್‌ ಶುಕ್ರವಾರವೂ ಅಧಿಪತ್ಯ ಸಾಧಿಸಿತು. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 3ನೇ ದಿನದ ಅಂತ್ಯಕ್ಕ 7 ವಿಕೆಟ್‌ಗೆ 544 ರನ್‌ ಕಲೆಹಾಕಿದೆ. ಶುಕ್ರವಾರ ಆರಂಭಿಕರ ಅಬ್ಬರಕ್ಕೆ ಸಾಕ್ಷಿಯಾದ ಮ್ಯಾಂಚೆಸ್ಟರ್‌ನಲ್ಲಿ ಶನಿವಾರ ಜೋ ರೂಟ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದರು.

ದಿನದ ಮೊದಲ ಅವಧಿಯಲ್ಲಿ ರೂಟ್‌-ಓಲಿ ಪೋಪ್‌ ಅಬ್ಬರಿಸಿದರು. ಈ ಜೋಡಿ 3ನೇ ವಿಕೆಟ್‌ಗೆ 144 ರನ್‌ ಸೇರಿಸಿತು. ಹಲವು ದಿಗ್ಗಜರನ್ನು ಹಿಂದಿಕ್ಕಿ ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ರೂಟ್‌, 38ನೇ ಶತಕದೊಂದಿಗೆ ಸಂಭ್ರಮಿಸಿದರು. ಈ ನಡುವೆ ಪೋಪ್‌ 71 ರನ್‌ ಗಳಿಸಿ ಔಟಾದರು. ಹ್ಯಾರಿ ಬ್ರೂಕ್‌(3) ಮಿಂಚಲಿಲ್ಲ.ಬಳಿಕ ರೂಟ್‌ಗೆ ಜೊತೆಯಾಗಿದ್ದು ನಾಯಕ ಬೆನ್‌ ಸ್ಟೋಕ್ಸ್‌. ಈ ಜೋಡಿ 6ನೇ ವಿಕೆಟ್‌ಗೆ 142 ರನ್‌ ಜೊತೆಯಾಟವಾಡಿತು. ಭಾರತೀಯ ಬೌಲರ್‌ಗಳ ಬೆಂಡೆತ್ತಿದ ಈ ಜೋಡಿ ತಂಡಕ್ಕೆ ಇನ್ನಿಂಗ್ಸ್‌ ಮುನ್ನಡೆ ಒದಗಿಸಿಕೊಟ್ಟಿತು. 66 ರನ್‌ ಗಳಿಸಿದ್ದಾಗ ಸ್ಟೋಕ್ಸ್‌ ಗಾಯಗೊಂಡು ಮೈದಾನ ತೊರೆದರು. ಇದರ ಬೆನ್ನಲ್ಲೇ ಜೋ ರೂಟ್‌, ಜಡೇಜಾರ ಎಸೆತದಲ್ಲಿ ಸ್ಟಂಪೌಟ್‌ ಆಗಿ ನಿರ್ಗಮಿಸಿದರು. ಅವರು 248 ಎಸೆತಗಳನ್ನು ಎದುರಿಸಿ 150 ರನ್‌ ಸಿಡಿಸಿದರು. ಇನ್ನು ಕ್ರಿಸ್ ವೋಕ್ಸ್ ವಿಕೆಟ್ ಪತನದ ಬಳಿಕ ಸ್ಟೋಕ್ಸ್ ಮತ್ತೆ ಬ್ಯಾಟ್ ಮಾಡಲಿಳಿದಿದ್ದಾರೆ.

Scroll to load tweet…

ಸದ್ಯ ಲಿಯಾಮ್‌ ಡಾವ್ಸನ್‌ ಹಾಗೂ ಬೆನ್ ಸ್ಟೋಕ್ಸ್‌ ಕ್ರೀಸ್‌ನಲ್ಲಿದ್ದು, 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಜಡೇಜಾ, ವಾಷಿಂಗ್ಟನ್‌ ಸುಂದರ್ ತಲಾ 2 ವಿಕೆಟ್‌ ಪಡೆದರು.

ಸ್ಕೋರ್: ಭಾರತ 358/10, ಇಂಗ್ಲೆಂಡ್‌ 544/7 (3ನೇ ದಿನದಂತ್ಯಕ್ಕೆ) (ರೂಟ್‌ 150, ಪೋಪ್‌ 71, ಸ್ಟೋಕ್ಸ್‌ 77*, ವಾಷಿಂಗ್ಟನ್‌ 57/2, ಜಡೇಜಾ 117/2)

104 ಬಾರಿ 50+ ಸ್ಕೋರ್‌: 2ನೇ ಸ್ಥಾನಕ್ಕೇರಿದ ರೂಟ್‌

ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ರನ್‌ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ರೂಟ್‌ 2ನೇ ಸ್ಥಾನಕ್ಕೇರಿದ್ದಾರೆ. ಅವರು 104 ಬಾರಿ(38 ಶತಕ, 66 ಅರ್ಧಶತಕ) ಈ ಸಾಧನೆ ಮಾಡಿದ್ದು, ತಲಾ 103 ಬಾರಿ 50+ ರನ್‌ ಗಳಿಸಿದ್ದ ಪಾಂಟಿಂಗ್‌ ಹಾಗೂ ಜ್ಯಾಕ್‌ ಕ್ಯಾಲಿಸ್‌ರನ್ನು ಹಿಂದಿಕ್ಕಿದರು. ಸಚಿನ್‌ ತೆಂಡುಲ್ಕರ್‌(119) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಭಾರತದ ವಿರುದ್ಧ 12 ಶತಕ: ಹೊಸ ದಾಖಲೆ

ರೂಟ್‌ ಭಾರತ ವಿರುದ್ಧ ಟೆಸ್ಟ್‌ನಲ್ಲಿ 12 ಶತಕ ಬಾರಿಸಿದ್ದಾರೆ. ಇದು ದಾಖಲೆ. ಆಸ್ಟ್ರೇಲಿಯಾದ ಸ್ಮಿತ್‌ 11 ಶತಕ ಬಾರಿಸಿದ್ದು, ಅವರನ್ನು ರೂಟ್‌ ಹಿಂದಿಕ್ಕಿದ್ದಾರೆ. ಇನ್ನು, ಟೆಸ್ಟ್‌ನಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ಶತಕ ಬಾರಿಸಿದ ದಾಖಲೆ ಡಾನ್‌ ಬ್ರಾಡ್ಮನ್‌ ಹೆಸರಲ್ಲಿದೆ. ಅವರು ಇಂಗ್ಲೆಂಡ್‌ ವಿರುದ್ಧ 19 ಸೆಂಚುರಿ ಸಿಡಿಸಿದ್ದಾರೆ.

38ನೇ ಶತಕ

ಟೆಸ್ಟ್‌ನಲ್ಲಿ ರೂಟ್‌ 38 ಶತಕ ಬಾರಿಸಿದ್ದಾರೆ. ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನ. ಸಚಿನ್‌ 51, ಕ್ಯಾಲಿಸ್ 45, ಪಾಂಟಿಂಗ್‌ 41, ಸಂಗಕ್ಕರ 38 ಶತಕ ಗಳಿಸಿದ್ದಾರೆ.