ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ತಲೆದಂಡರಹಸ್ಯ ಕಾರ್ಯಾಚರಣೆ ವೇಳೆ ಹಲವು ಆಂತರಿಕ ವಿಚಾರ ಬಾಯ್ಬಿಟ್ಟಿದ್ದ ಚೇತನ್ ಶರ್ಮಾಟೀಂ ಇಂಡಿಯಾದ ಆಂತರಿಕ ವಿಚಾರ ಬಹಿರಂಗ ಪಡಿಸಿದ್ದ ಆಯ್ಕೆ ಸಮಿತಿ ಮುಖ್ಯಸ್ಥ
ಮುಂಬೈ(ಫೆ.17): ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಂಗಿಕಾರ ಮಾಡಿದ್ದಾರೆ. ಖಾಸಗಿ ಚಾನೆಲ್‌ವೊಂದರ ರಹಸ್ಯ ಕಾರ್ಯಚರಣೆ ವೇಳೆ ಚೇತನ್ ಶರ್ಮಾ, ಭಾರತ ತಂಡದ ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ಭಾರತ ತಂಡದ ಕೆಲ ಆಟಗಾರರು ಫಿಟ್ನೆಸ್ ಸಾಬೀತಿಗೆ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂದಿದ್ದ ಚೇತನ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ವಿರುದ್ಧವೂ ಗಂಭೀರ ಆರೋಪ ಮಾಡಿದ್ದರು. ಭಾರತ ಕ್ರಿಕೆಟ್ ತಂಡದೊಳಗಿನ ಹಿಂದೆಂದೂ ಕಂಡ ಕೇಳರಿಯದ ಕೆಲ ವಿಚಾರಗಳನ್ನು ಕುಟುಕು ಕಾರ್ಯಚರಣೆ ವೇಳೆ ಚೇತನ್ ಶರ್ಮಾ ಬಾಯ್ಬಿಟ್ಟಿದ್ದರು. ಇದು ಭಾರತೀಯ ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು.
ರಹಸ್ಯ ಕಾರ್ಯಾಚರಣೆ ಎಫೆಕ್ಟ್: ಬಿಸಿಸಿಐ ಆಯ್ಕೆಗಾರ ಚೇತನ್ ಶರ್ಮಾ ತಲೆದಂಡ?
ಬಿಸಿಸಿಐ ಮೂಲಗಳ ಪ್ರಕಾರ, ಆಯ್ಕೆ ಸಮಿತಿ ಮುಖ್ಯಸ್ಥರು ಕಳಿಸಿದ ರಾಜೀನಾಮೆಯು ಅಂಗಿಕಾರವಾಗಿದೆ. ಇನ್ನು ಚೇತನ್ ಶರ್ಮಾ ಜತೆಗೆ ಬಿಸಿಸಿಐ ಔಪಚಾರಿಕ ಮಾತುಕತೆ ನಡೆಸುವ ಸಾಧ್ಯತೆಯಿದೆ. ಇದೀಗ ಚೇತನ್ ಶರ್ಮಾ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಯಾರು ನೇಮಕವಾಗಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲವಾದರೂ, ಪೂರ್ವ ವಲಯದ ಆಯ್ಕೆ ಸಮಿತಿಯ ಸದಸ್ಯರಾದ ಶಿವ ಸುಂದರ್ ದಾಸ್, ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಚೇತನ್ ಶರ್ಮಾ ಅವರ ಮೇಲೆ ನಡೆಸಲಾದ ರಹಸ್ಯ ಕಾರ್ಯಾಚರಣೆಯಿಂದಾಗಿ ಟೀಂ ಇಂಡಿಯಾದ ಇಬ್ಬರು ನಾಯಕರಾದ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಸೇರಿದಂತೆ ಆಟಗಾರ ಮೇಲಿನ ನಂಬಿಕೆ ಬಲವಾದ ಪೆಟ್ಟು ಬೀಳುವಂತೆ ಮಾಡಿತ್ತು. ಇನ್ನು ಚೇತನ್ ಶರ್ಮಾ, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮೇಲೂ ಗಂಭೀರ ಆರೋಪ ಮಾಡಿದ್ದರು.
ಚೇತನ್ ಶರ್ಮಾ, ಕೋಲ್ಕತಾದಿಂದಲೇ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಚೇತನ್ ಶರ್ಮಾ, ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಬಂಗಾಳ ಹಾಗೂ ಸೌರಾಷ್ಟ್ರ ತಂಡಗಳ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ವೀಕ್ಷಿಸಲು ತೆರಳಿದ್ದರು. ಅವರು ತಮ್ಮ ಸಹಪಾಠಿಗಳಾದ ಸಲಿಲ್ ಅಂಕೋಲ, ಸುಬ್ರತೋ ಬ್ಯಾನರ್ಜಿ, ಶಿವ ಸುಂದರ್ ದಾಸ್ ಹಾಗೂ ಎಸ್ ಶರತ್ ಜತೆ ಮೊದಲ ದಿನದಾಟದ ಪಂದ್ಯವನ್ನು ವೀಕ್ಷಿಸಿದ್ದರು. ಚೇತನ್ ಶರ್ಮಾ ಅವರು ಮಾಧ್ಯಮಗಳ ಭೇಟಿಗೆ ಅವಕಾಶ ನೀಡಿರಲಿಲ್ಲ. ಇನ್ನು ಶುಕ್ರವಾರ ಚೇತನ್ ಶರ್ಮಾ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.
